ಸಾರಾಂಶ
ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರ
ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ "ಜಾನಪದ ಲೋಕ "ವನ್ನು ನಿರ್ಮಿಸಿರುವ ಕರ್ನಾಟಕ ಜಾನಪದ ಪರಿಷತ್ತಿಗೆ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಇದೀಗ ಯುನೆಸ್ಕೋದ ಮಾನ್ಯತೆ ಸಿಕ್ಕಿದೆ.ಕಳೆದ ಜೂನ್ ತಿಂಗಳಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಈ ಮಾನ್ಯತೆ ಘೋಷಿಸಲಾಗಿದೆ. ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಕರ್ನಾಟಕ ಜಾನಪದ ಪರಿಷತ್ತನ್ನು ಒಂದು ಎಂದು ಗುರುತಿಸಿದೆ. ಯುನೆಸ್ಕೂದ "ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಆಂತರಿಕ ಸಮಿತಿ "ಗೆ ಸಲಹೆಗಳನ್ನು ನೀಡಲು ಈಗ ಪರಿಷತ್ತು ಮಾನ್ಯತೆ ಪಡೆದಿದೆ.2,500 ಗಂಟೆಗಳ ಕಾಲ ಕೇಳಬಹುದಾದ ಜನಪದ ಗೀತ ಸಾಹಿತ್ಯ, 800 ಗಂಟೆಗಳ ಕಾಲ ನೋಡಬಹುದಾದ ಜನಪದ ಸಂಸ್ಕೃತಿಯ ವಿವಿಧ ಪ್ರಕಾರಗಳ ವಿಡಿಯೋ ಚಿತ್ರೀಕರಣ ಮತ್ತು ಸಾವಿರಾರು ವರ್ಣ ಪಾರದರ್ಶಿಕೆಗಳು ಇಲ್ಲಿವೆ. ಜಾನಪದ ಲೋಕದಲ್ಲಿ ಗ್ರೀಕ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಬಯಲು ರಂಗ ಮಂದಿರ ತನ್ನದೇ ಆದ ವಿಶೇಷತೆ ಹೊಂದಿದೆ. ಇಲ್ಲಿನ ಲೋಕ ಮಹಲ್ ವಸ್ತು ಸಂಗ್ರಹಾಲಯದಲ್ಲಿ ಜಾನಪದ ಕಲಾವಿದರ ವಿವಿಧ ವೇಷ ಭೂಷಣಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ವಿವಿಧ ಬುಡಕಟ್ಟು ಸಮುದಾಯಗಳ 6 ಮನೆಗಳ ಮಾದರಿಗಳನ್ನು ನಿರ್ಮಾಣ ಮಾಡಲಾಗಿದೆ. ಗೊರವ, ಕಿನ್ನರಿ ಜೋಗಿ, ಅಲಂಕೃತಗೊಂಡ ಬಸವ, ಯಕ್ಷಗಾನದಲ್ಲಿನ ರಾವಣ, ರಾಮ, ಉದ್ದನೆ ಬಾಲದ ಹನುಮಂತ ಮತ್ತಿತರ ಕಲಾ ಕೃತಿಗಳ ಸಂಗ್ರಹ ಅಮೋಘವಾಗಿದೆ. ಚಿತ್ರ ಕುಟೀರದಲ್ಲಿ ನಾಗೇಗೌಡರು ಸಂಗ್ರಹಿಸಿರುವ ಸಾವಿರಾರು ವರ್ಣ ಪಾರದರ್ಶಿಕೆಗಳು ಮತ್ತು ಅವರ ಕೃತಿಗಳ ಪ್ರದರ್ಶನ ಮನ ಮೋಹಕವಾಗಿವೆ. ವಸ್ತು ಸಂಗ್ರಹಾಲಯದಲ್ಲಿ ನಮ್ಮ ಹತ್ತಾರು ತಲೆಮಾರುಗಳ ಹಿಂದಿನ ಮಕ್ಕಳನ್ನು ತೂಗುತ್ತಿದ್ದ ಬಿದಿರು ತೊಟ್ಟಿಲು, ಹಸುವಿನ ಮುಖಕ್ಕೆ ಹಾಕುವ ಕುಣಿಕೆ, ದವಸ ತುಂಬುವ ಗುಡಾಣ ಮುಂತಾದವುಗಳ ಸಂಗ್ರಹ ಆಕರ್ಷಕವಾಗಿದೆ.45 ವರ್ಷದಿಂದ ಸೇವೆ: 1979ರಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರಿಂದ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು 45 ವರ್ಷಗಳಿಂದಲೂ ಜಾನಪದ ಕ್ಷೇತ್ರದಲ್ಲಿ ಅಮೂಲ್ಯವಾದ ಕೆಲಸ ಮಾಡುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ 15 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರವಾಗಿದೆ.
ಯುನೆಸ್ಕೋ ಮಾನ್ಯತೆ ನಮ್ಮನ್ನು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಜಾಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಉತ್ತೇಜಿಸುತ್ತದೆ. ಇದರಿಂದ ಕರ್ನಾಟಕ ಜಾನಪದ ಪರಿಷತ್ತು ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರ ಹೆಚ್ಚಿಸಿಕೊಂಡಿದೆ.- ಪ್ರೊ.ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತು