ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದು, ಭತ್ತ, ರಾಗಿ, ಮೆಕ್ಕೆ ಜೋಳಕ್ಕೆ ಕ್ವಿಂಟಾಲ್ ಗೆ 500 ರೂ. ಪ್ರೋತ್ಸಾಹ ಧನ, ಟನ್ ಕಬ್ಬಿಗೆ 4 ಸಾವಿರ ಹಾಗೂ ಪ್ರತಿನಿತ್ಯ 10 ಗಂಟೆ ತ್ರಿ ಫೇಸ್ ವಿದ್ಯುತ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಫೆ. 10ರೊಳಗೆ ಈಡೇರಿಸದಿದ್ದರೆ, 17 ರಂದು ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಒಕ್ಕೂಟ ನಿರ್ಧರಿಸಿದೆ.ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಭೆಯ ಬಳಿಕ ಒಕ್ಕೂಟದ ನೂತನ ಅಧ್ಯಕ್ಷ ಬೀರಪ್ಪ ದೇಸನೂರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಭೀಕರ ಬರಗಾಲ ಇರುವ ಕಾರಣ ರಾಷ್ಟ್ರೀಕೃತ ಬ್ಯಾಂಕು, ಸಹಕಾರ ಸಂಘ ಇನ್ನಿತರ ಖಾಸಗಿ ಸಂಘ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲವನ್ನು ಸರ್ಕಾರ ಬೇಷರತ್ ಆಗಿ ಸಂಪೂರ್ಣ ಮನ್ನಾ ಮಾಡಬೇಕು. ಜತೆಗೆ ರೈತ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರು ಮತ್ತು ಇನ್ನಿತರ ಬಡ ವರ್ಗದ ಜನರು ಸಂಘ, ಸಂಸ್ಥೆಗಳು ಮತ್ತೂ ಖಾಸಗಿ ಮೈಕ್ರೋ ಫೈನಾನ್ಸ್ ಗಳಲ್ಲಿ ಮಾಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಸಮನ್ವಯ ಸಮಿತಿ ಅಧ್ಯಕ್ಷ, ಹಿರಿಯ ರೈತ ಹೋರಾಟಗಾರ ದಯಾನಂದ ಸಿ. ಪಾಟೀಲ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ರೈತರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ ನಂತರ ರೈತರನ್ನು ಮರೆಯುತ್ತಾರೆ. ಇದು ಕಳೆದ 75 ವರ್ಷಗಳಿಂದಲೂ ನಡೆಯುತ್ತಿದೆ ಎಂದರು.
ಎಲ್ಲಾ ಪಕ್ಷಗಳೂ ರೈತರನ್ನು ವಂಚಿಸುವ ಕೆಲಸವನ್ನೇ ಮಾಡುತ್ತಿವೆ. ಆದರೇ, ಈ ಬಾರಿ ಮಾತ್ರ ನಾವು ವಂಚನೆಗೆ ಒಳಗಾಗುವುದಿಲ್ಲ. ರೈತ ಕುಲಕ್ಕೆ ಜಯ ಸಿಗುವ ತನಕವೂ ನಾವು ಹೋರಾಟವನ್ನು ಮುಂದುವರಿಸುವುದಾಗಿ ಅವರು ಹೇಳಿದರು.ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಇಂಗಲಕುಪ್ಪೆ ಕೃಷ್ಣೇಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವದಲ್ಲಿ ರೈತರಿಗೆ ನೀಡಿದ ವಾಗ್ದಾನ ಮರೆತಿದೆ. ಇದನ್ನು ನಾವು ಲೋಕಸಭಾ ಚುನಾವಣೆಯಲ್ಲಿ ನೆನಪಿಸುತ್ತೇವೆ. ಅದಕ್ಕೂ ಮುನ್ನ ಅವರು ಎಚ್ಚೆತ್ತುಕೊಂಡು ರೈತರ ಆಶೋತ್ತರಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಭತ್ತ, ರಾಗಿ, ಮೆಕ್ಕೆಜೋಳಕ್ಕೆ ಕ್ವಿಂಟಾಲ್ ಗೆ 500 ರೂ. ಪ್ರೋತ್ಸಾಹ ಧನ ನೀಡಬೇಕು. ನರೇಗಾ ಯೋಜನೆಯಲ್ಲಿ ರಾಜ್ಯದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 50 ಜನ ಕೂಲಿ ಕಾರ್ಮಿಕರನ್ನು ಗ್ರಾಪಂನಿಂದ ಒದಗಿಸುವ ಬಗ್ಗೆ ಸರ್ಕಾರ ಈ ಕೂಡಲೇ ಆದೇಶ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಸರ್ಕಾರ ಪ್ರತಿ ಹೆಕ್ಟೇರ್ ಗೆ 2 ಸಾವಿರ ರೂ. ಪರಿಹಾರ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಇದು ಕೂಲಿಗೂ ಸಾಕಾಗುವುದಿಲ್ಲ. ನಮಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಈ ಪರಿಹಾರದ ಹಣ ತಕ್ಷಣ ರೈತರ ಖಾತೆಗೆ ಜಮೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮಾತನಾಡಿ, ಪ್ರಸಕ್ತ ವರ್ಷ ಮಳೆ ಕಡಿಮೆ ಆಗಿರುವ ಕಾರಣ ಅನಾವೃಷ್ಟಿಯಿಂದ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ ಎಂದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ಸೋಮಶೇಖರ, ಮಹದೇವಪ್ಪ ಕೊತ್ತಂಬರಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಹುಯಿಲಗೋಳ, ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮೀ, ಬಸವನಗೌಡ, ಕಾರ್ಯಾಧ್ಯಕ್ಷ ಪಾಟೀಲ್, ರಾಜ್ಯ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಭೋವಿ ಮೊದಲಾದವರು ಇದ್ದರು.
---ಬಾಕ್ಸ್
ಕೆಆರ್ಎಸ್ ಸುತ್ತಮುತ್ತ ಗಣಿಗಾರಿಕೆಮಂಡ್ಯ ಜಿಲ್ಲೆ ರೈತರ ಜೀವನಾಡಿ ಕೆಆರ್ಎಸ್ ಜಲಾಶಯದ ಸುತ್ತಮುತ್ತ 25 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಹೈ ಕೋರ್ಟ್ ನಿಷೇಧಿಸಿದ್ದರೂ ಇಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಗಣಿ ಅಧಿಕಾರಿಗಳೇ ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಮೂಲಗಳ ಪ್ರಕಾರ ಮಂಡ್ಯ ಗಣಿ ಅಧಿಕಾರಿಗಳ ಕಚೇರಿಗೆ ಮಾಸಿಕ 25 ಲಕ್ಷ ಲಂಚ ಪಾವತಿಯಾಗುತ್ತಿದೆ. ಆದರೂ ಜಿಲ್ಲಾಡಳಿತ ಈ ಬಗ್ಗೆ ಕಣ್ಮುಚ್ಚಿ ಕುಳಿತಿದೆ.
- ಇಂಗಲಗುಪ್ಪೆ ಕೃಷ್ಣೇಗೌಡ, ಒಕ್ಕೂಟದ ಸಂಚಾಲಕ.