ಬಿಡುಗಡೆಯಾಗದ ಅನುದಾನ: ನಿಸ್ತೇಜಗೊಂಡ ರೈತ ಸಂಘಗಳು

| Published : Jun 25 2024, 12:35 AM IST

ಸಾರಾಂಶ

ಕೃಷಿ ವಲಯದಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷೆಯಿಂದ ಆರಂಭಗೊಂಡ ಅಮೃತ ರೈತ ಉತ್ಪಾದಕ ಸಂಘಗಳು ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೆ ನಿಸ್ತೇಜವಾಗಿವೆ.

ಕನ್ನಡಪ್ರಭ ವಾರ್ತೆ ಸಿರಿಗೆರೆಕೃಷಿ ವಲಯದಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷೆಯಿಂದ ಆರಂಭಗೊಂಡ ಅಮೃತ ರೈತ ಉತ್ಪಾದಕ ಸಂಘಗಳು ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದೆ ನಿಸ್ತೇಜವಾಗಿವೆ.ದಲ್ಲಾಳಿಗಳ ಕಾಟದಿಂದ ಮುಕ್ತವಾಗುವುದು, ರೈತರು ಬೆಳೆಯುವ ಬೆಳೆಗಳ ಮಾರಾಟಕ್ಕೆ ಸ್ವಯಂ ಮಾರುಕಟ್ಟೆ ಕಂಡುಕೊಳ್ಳುವುದು, ಕಮೀಷನ್‌ ರಹಿತ ವ್ಯವಹಾರದ ಮೂಲಕ ರೈತರಿಗೆ ಲಾಭ ದೊರಕಿಸಿಕೊಡುವುದು, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಯೋಗ್ಯ ಬೆಲೆಗೆ ರೈತರಿಗೆ ತಲುಪುವಂತೆ ಮಾಡುವುದು ಅಮೃತ ರೈತ ಉತ್ಪಾದಕ ಸಂಘಗಳ ಆಶಯ. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಇಟ್ಟುಕೊಂಡು ಒಂದೆರಡು ವರ್ಷಗಳ ಹಿಂದೆಯಷ್ಟೇ ಜಾರಿಗೊಂಡ ಯೋಜನೆ ಸಫಲವಾಗಲು ಹೆಣಗಾಡುವ ಸ್ಥಿತಿ ತಲುಪಿದೆ.ರಾಜ್ಯದ ೩೧ ಜಿಲ್ಲೆಗಳಲ್ಲಿ ೪೮೬ ರೈತ ಉತ್ಪಾದಕ ಸಂಘಗಳ ಆರಂಭಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಮಧ್ಯ ಕರ್ನಾಟಕದ ಪ್ರತಿಷ್ಠಿತ ತರಳಬಾಳು ಕೃಷಿ ವಿಜ್ಞಾನ ಸಂಸ್ಥೆಗೆ ಚಿತ್ರದುರ್ಗ (೫), ದಾವಣಗೆರೆ (೭) ಮತ್ತು ಹಾವೇರಿ (೫) ಜಿಲ್ಲೆಗಳಲ್ಲಿ ೧೭ ಅಮೃತ ರೈತ ಉತ್ಪಾದಕ ಕಂಪನಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಮೂರು ಜಿಲ್ಲೆಗಳ ೬೮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ೨೬೧ ಗ್ರಾಮಗಳಲ್ಲಿ ತರಳಬಾಳು ಸಂಸ್ಥೆಯು ರೈತ ಉತ್ಪಾದಕ ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. ೩ ಜಿಲ್ಲೆಗಳ ೧೭ ಕಂಪನಿಗಳಲ್ಲಿ ೧೧,೯೦೪ ರೈತ ಷೇರುದಾರರಿದ್ದು ಅವರಿಂದ ೧,೧೯,೦೪,೦೦೦ ರೂ. ಷೇರು ಹಣ ಸಂಗ್ರಹಿಸಲಾಗಿದೆ. ಮುಂಗಾರಿನಲ್ಲಿ ರೈತರಿಗೆ ೮,೬೯,೨೪,೪೫೦ ರೂ.ಗಳ ಬೀಜ, ಗೊಬ್ಬರ, ಕ್ರಿಮಿನಾಶಕಗಳ ವಹಿವಾಟು ನಡೆಸಿ ೨೯,೦೬,೨೫೭ ರೂ.ಗಳ ಲಾಭಾಂಶಗಳಿಸಿವೆ. ರೈತರು ಬೆಳೆದ ಹಲವು ಬಗೆಯ ರೂ. ೩,೫೯,೧೫,೦೦೬ ಮೌಲ್ಯದ ಬೆಳೆಗಳನ್ನು ಕೊಂಡು ಮಾರಾಟ ಮಾಡಿವೆ.ಮೌಲ್ಯವರ್ಧನೆ ಮತ್ತು ಮಾರಾಟ:

ಸ್ಥಳೀಯ ಕೃಷಿ ಬೆಳೆಗಳ ಮೌಲ್ಯವರ್ಧನೆ ದೃಷ್ಟಿಯಿಂದ ಕೊಡಗನೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಸ್ಥಳೀಯವಾಗಿ ದೊರೆಯುವ ಸಿರಿಧಾನ್ಯಗಳಿಂದ ತಯಾರಿಸಿದ ಬಿಸ್ಕೆಟ್‌ಗಳನ್ನು ಉತ್ಪಾದಿಸುತ್ತಿದೆ. ನಿಟ್ಟೂರು ತರಳಬಾಳು ಅಮೃತ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಸಿರಿಧಾನ್ಯದ, ತೆಂಗಿನ ಕಾಯಿ ಚಿಪ್ಸ್, ನೈಸರ್ಗಿಕ ತೆಂಗಿನ ಎಣ್ಣೆ, ತೆಂಗಿನಕಾಯಿ ಉಪ್ಪಿನಕಾಯಿ, ಒಣಗಿಸಿದ ತೆಂಗಿನಕಾಯಿ ಪುಡಿಯನ್ನು ತಯಾರಿಸುತ್ತಿದೆ. ಬ್ಯಾಡಗಿ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಗುಣಮಟ್ಟದ ಒಣಮೆಣಸಿನಕಾಯಿ ಖಾರದಪುಡಿಯನ್ನು ಮಾರಾಟ ಮಾಡುತ್ತಿದೆ. ನುಂಕೆಮಲೆ ಸಿದ್ದೇಶ್ವರ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ಅತಿ ಹೆಚ್ಚು ಶೇಂಗಾ ಬೆಳೆಯುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ರೈತರಿಂದ ಶೇಂಗಾ ಖರೀದಿ ಮಾಡಿ ಗಾಣದ ಮೂಲಕ ಶುದ್ಧ ಶೇಂಗಾ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿದೆ. ಇವೆಲ್ಲವುಗಳ ಜೊತೆಗೆ ಹಲವು ಕಾರ್ಯಕ್ರಮಗಳ ಮೂಲಕ ರೈತರ ಜಾಗೃತಿ, ವಿಚಾರ ಸಂಕಿರಣ, ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ.ಒಂದೇ ಇಲಾಖೆ ಅಡಿಗೆ ಬರಲಿ: ರೈತ ಉತ್ಪಾದಕ ಕಂಪನಿಗಳನ್ನು ರಾಜ್ಯ ಸರ್ಕಾರದ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಆಡಳಿತ ವ್ಯಾಪ್ತಿಗೆ ಸೇರಿಸಲಾಗಿದೆ. ಎಲ್ಲಾ ರೈತ ಉತ್ಪಾದಕ ಸಂಸ್ಥೆಗಳನ್ನು ಒಂದೇ ಇಲಾಖೆಯ ಅಡಿಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡಬೇಕಾಗಿದೆ.

ಅನುದಾನ ಬಿಡುಗಡೆಗೆ ಮೊರೆ: ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸುವ ಪೂರ್ವದಲ್ಲಿ ಸರ್ಕಾರ ಮತ್ತು ಸಂಸ್ಥೆಗಳ ಮಧ್ಯೆ ಒಡಂಬಡಿಗೆ ಆಗಿದೆ. ಅದರ ಪ್ರಕಾರ ಉತ್ಪಾದಕ ಸಂಸ್ಥೆಗಳಿಗೆ ಬರಬೇಕಾದ ಹೊಂದಾಣಿಕೆ ಅನುದಾನ (ಮ್ಯಾಚಿಂಗ್‌ ಗ್ರಾಂಟ್)‌, ಕಾರ್ಯನಿರ್ವಹಣಾಧಿಕಾರಿಗಳು, ಮಾರಾಟ ಪ್ರತಿನಿಧಿಗಳು, ಕಂಪ್ಯೂಟರ್‌ ಆಪರೇಟರ್‌ಗಳು, ಇತರೆ ನೌಕರರ ವೇತನವನ್ನು ನೀಡಬೇಕಾಗಿದೆ. ಆದರೆ ಕಳೆದ ೧೫ ತಿಂಗಳಿಂದ ವೇತನಾನುದಾನ ಬಿಡುಗಡೆ ಆಗದೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ರೈತ ಜಾಗೃತಿ ಕಾರ್ಯಕ್ರಮಗಳಿಗೆ ನೀಡಬೇಕಾದ ಅನುದಾನವೂ ಬಿಡುಗಡೆಯಾಗದೆ ಕಂಪನಿಗಳು ಆಸಕ್ತಿ ಕಳೆದುಕೊಳ್ಳುತ್ತಿವೆ.ತರಳಬಾಳು ಶ್ರೀಗಳಲ್ಲಿ ಮೊರೆ: ಸರ್ಕಾರದೊಡನೆ ಸಂಪರ್ಕ ಸಾಧಿಸಿ ತಮ್ಮ ನೆರವಿಗೆ ಬರಬೇಕೆಂದು ರೈತ ಉತ್ಪಾದಕ ಕಂಪನಿಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಶ್ರೀಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ರೈತ ಉತ್ಪಾದಕ ಸಂಘಗಳಿಗೆ ಆಗಿರುವ ಅನಾನುಕೂಲತೆಗಳ ವಿವರಗಳನ್ನು ಪಡೆದ ಶ್ರೀಗಳು ಜೂ.೩೦ ರಂದು ರೈತ ಉತ್ಪಾದಕ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಸಿರಿಗೆರೆಯಲ್ಲಿ ನಡೆಸಲು ನಿಶ್ಚಯಿಸಿದ್ದಾರೆ. ಶ್ರೀಗಳ ಮಧ್ಯಸ್ಥಿಕೆಯಲ್ಲಿ ರಾಜ್ಯ ಸರ್ಕಾರದ ನೆರವು ದೊರೆತು ರೈತ ಸಂಘಗಳಿಗೆ ಬಲ ಬರುವುದನ್ನು ನಿರೀಕ್ಷಿಸಲಾಗಿದೆ.