ತಿರುಗದ ಕಬ್ಬಿನ ಗಾಣ, ಬೆಲ್ಲ ತಯಾರಿಕೆಗೆ ಕಹಿ

| Published : Nov 28 2023, 12:30 AM IST

ತಿರುಗದ ಕಬ್ಬಿನ ಗಾಣ, ಬೆಲ್ಲ ತಯಾರಿಕೆಗೆ ಕಹಿ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬಿನ ಗಾಣಗಳು ತಿರುಗುತ್ತಿಲ್ಲ, ಬೆಲ್ಲ ತಯಾರಿಕೆಗೆ ಕಹಿ ಅನುಭವವಾಗಿದೆ. ಸಕ್ಕರೆ ಕಾರ್ಖಾನೆ ಭರದಿಂದ ಕಬ್ಬು ನುರಿಸುತ್ತಿವೆ. ಆದರೆ ಗಾಣ ನೆಚ್ಚಿದವರು ಹಣೆಗೆ ಕೈ ಹಚ್ಚಿ ಚಿಂತೆಗೊಳಗಾಗಿದ್ದಾರೆ, ಹಾನಗಲ್ಲ ತಾಲೂಕು ಭತ್ತ, ಕಬ್ಬು ಬೆಳೆದು ಹಸಿವು ನೀಗಿಸಿ, ಸಿಹಿ ಉಣಿಸಿದ ನಾಡು. ೯೦೦ ಕೆರೆಗಳು, ಧರ್ಮಾ ವರದಾ ನದಿ ಇರುವ ಈ ತಾಲೂಕಿನಲ್ಲಿ ಬೆಲ್ಲಕ್ಕಾಗಿಯೇ ಎಕರೆ, ಅರ್ಧ ಎಕರೆ ಕಬ್ಬು ಹಾಕಿಕೊಂಡು ಗಾಣಗಳಿಗೆ ಹೋಗಿ ಬೆಲ್ಲ ಮಾಡಿಸಿಕೊಂಡು, ಇಡೀ ವರ್ಷ ಬಳಸುತ್ತಿದ್ದರು.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕಬ್ಬಿನ ಗಾಣಗಳು ತಿರುಗುತ್ತಿಲ್ಲ, ಬೆಲ್ಲ ತಯಾರಿಕೆಗೆ ಕಹಿ ಅನುಭವವಾಗಿದೆ. ಸಕ್ಕರೆ ಕಾರ್ಖಾನೆ ಭರದಿಂದ ಕಬ್ಬು ನುರಿಸುತ್ತಿವೆ. ಆದರೆ ಗಾಣ ನೆಚ್ಚಿದವರು ಹಣೆಗೆ ಕೈ ಹಚ್ಚಿ ಚಿಂತೆಗೊಳಗಾಗಿದ್ದಾರೆ,

ಹಾನಗಲ್ಲ ತಾಲೂಕು ಭತ್ತ, ಕಬ್ಬು ಬೆಳೆದು ಹಸಿವು ನೀಗಿಸಿ, ಸಿಹಿ ಉಣಿಸಿದ ನಾಡು. ೯೦೦ ಕೆರೆಗಳು, ಧರ್ಮಾ ವರದಾ ನದಿ ಇರುವ ಈ ತಾಲೂಕಿನಲ್ಲಿ ಬೆಲ್ಲಕ್ಕಾಗಿಯೇ ಎಕರೆ, ಅರ್ಧ ಎಕರೆ ಕಬ್ಬು ಹಾಕಿಕೊಂಡು ಗಾಣಗಳಿಗೆ ಹೋಗಿ ಬೆಲ್ಲ ಮಾಡಿಸಿಕೊಂಡು, ಇಡೀ ವರ್ಷ ಬಳಸುತ್ತಿದ್ದರು.

ತಾಲೂಕಿನಲ್ಲಿ ಈಗ ೫೦ ಕ್ಕೂ ಹೆಚ್ಚು ಬೆಲ್ಲದ ಗಾಣಗಳಿವೆ. ಒಂದು ಗಾಣದಿಂದ ಒಂದು ದಿನಕ್ಕೆ ೨೫ ರಿಂದ ೩೦ ಕ್ವಿಂಟಲ್ ಬೆಲ್ಲ ಸಿದ್ಧ ಮಾಡಬಹುದಾಗಿದೆ. ನವೆಂಬರ್ ತಿಂಗಳಿನಿಂದ ಗಾಣಗಳು ಆರಂಭವಾಗಿ ಮಾರ್ಚ್‌ವರೆಗೆ ಬೆಲ್ಲ ತಯಾರಿಸುತ್ತವೆ. ಆದರೆ ಪ್ರಸ್ತುತ ವರ್ಷ ಇನ್ನೂವರೆಗೆ ಕೇವಲ ಬಾಳಂಬೀಡ, ಸೀಗಿಹಳ್ಳಿ, ಬೆಳಗಾಲಪೇಟೆಗಳಲ್ಲಿ ಒಂದೊಂದು ಗಾಣ ಮಾತ್ರ ಆರಂಭವಾಗಿವೆ. ಈ ಬಾರಿ ಬರದಿಂದಾಗಿ ಹೆಚ್ಚಾಗಿ ಕಬ್ಬು ಬೆಳೆದಿಲ್ಲ. ಬೆಲ್ಲ ಉತ್ಪಾದನೆ ಲಾಭಕರವಾಗಿಲ್ಲ. ಅತಿ ಹೆಚ್ಚು ಗಾಣಗಳಿರುವ ಸೀಗಿಹಳ್ಳಿ, ಸಿಂಗಾಪುರದಲ್ಲಿಯೇ ಇನ್ನೂ ಗಾಣ ಆರಂಭಿಸಲು ಮೀನ ಮೇಷ ಎಣಿಸಲಾಗುತ್ತಿದೆ.

ಬಿಹಾರ, ಯುಪಿ ಪರಿಣಿತರು:

ತಾಲೂಕಿನ ಬಹುತೇಕ ಬೆಲ್ಲದ ಗಾಣಗಳಲ್ಲಿ ಕೆಲಸ ಮಾಡುವವರು ಉತ್ತರಪ್ರದೇಶ ಹಾಗೂ ಬಿಹಾರದ ಪರಿಣಿತ ಕೆಲಸಗಾರರು. ಒಂದು ಗಾಣಕ್ಕೆ ಎಂಟರಿಂದ ಹತ್ತು ಕೆಲಸಗಾರರು ಬರುತ್ತಾರೆ. ಇಡೀ ಗಾಣದ ಎಲ್ಲ ಕೆಲಸವನ್ನು ಈ ಗುತ್ತಿಗೆ ಕೆಲಸಗಾರರೇ ನಿರ್ವಹಿಸುತ್ತಾರೆ. ಒಂದು ಕ್ವಿಂಟಲ್ ಬೆಲ್ಲ ತಯಾರಿಸಲು ಅಂದಾಜು ₹೩೭೫ ಪಡೆಯುತ್ತಾರೆ. ಆದರೆ ಈ ಬಾರಿ ಕೂಲಿ ಹೆಚ್ಚು ಕೇಳಿದ್ದರಿಂದ ಗಾಣದವರಿಗೆ ಕರೆಯಲಾಗುತ್ತಿಲ್ಲ, ಅವರು ಕಡಿಮೆ ಕೂಲಿಗೆ ಬರುತ್ತಿಲ್ಲ.

ಶೇ. ೫೦ ಇಳುವರಿ:

ಈ ಬಾರಿ ಮಳೆ ಕೊರತೆಯಿಂದ ಕಬ್ಬಿನಲ್ಲಿ ಇಳುವರಿ ಬಹಳ ಕಡಿಮೆ ಬಂದಿದೆ. ಕಬ್ಬು ಕೂಡ ಅಷ್ಟು ಶಕ್ತಿಯುತವಾಗಿ ಬೆಳೆದಿಲ್ಲ. ಹೀಗಾಗಿ ಬೆಲ್ಲದ ಪ್ರಮಾಣವೂ ತುಂಬಾ ಕಡಿಮೆ. ಶೇ.೫೦ರಷ್ಟು ಇಳುವರಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದರಿಂದ ಲಾಭವೂ ಆಗದು. ಕಬ್ಬಿನ ಗಾಣ ಆರಂಭವಾಗದಿರಲು ಇದೂ ಒಂದು ಕಾರಣವಾಗಿದೆ. ಅಲ್ಲದೇ ಈ ಬಾರಿ ಕಬ್ಬು ಕಡಿಮೆ ಇರುವುದರಿಂದ ಸಂಗೂರು ಸಕ್ಕರೆ ಕಾರ್ಖಾನೆ ಹಾಗೂ ಹೊಸ ಕೋಣನಕೇರಿಯ ಸಕ್ಕರೆ ಕಾರ್ಖಾನೆ ಆರಂಭವಾಗಿ ಕಬ್ಬು ನುರಿಸುತ್ತಿವೆ. ಕಳೆದ ವರ್ಷಕ್ಕಿಂತ ಹೆಚ್ಚು ಕಬ್ಬು ನುರಿಸುತ್ತಿರುವುದರಿಂದ ವೇಗವಾಗಿ ಕಬ್ಬು ಖಾಲಿ ಆಗುತ್ತಿದ್ದು, ಎಲ್ಲ ರೈತರೂ ಸಕ್ಕರೆ ಕಾರ್ಖಾನೆಯತ್ತ ಮುಖ ಮಾಡಿದ್ದಾರೆ. ಬೆಲ್ಲಕ್ಕೆ ಕಬ್ಬು ಕೊಡಲು ರೈತರು ಮನಸ್ಸು ಮಾಡುತ್ತಿಲ್ಲ.

ಇಲ್ಲಿ ಬೆಲ್ಲಕ್ಕೆ ಮಾರುಕಟ್ಟೆಯ ಕೊರತೆ ಇದೆ. ಮಳೆಗಾಲದಲ್ಲಿ ಗಾಣ ಆರಂಭಿಸಲಾಗದು. ಕೂಲಿ ಕಾರ್ಮಿಕರ ಕೊರತೆ, ಕೂಲಿ ಹೆಚ್ಚು ಕೇಳುತ್ತಿರುವುದು, ಸೊರಗಿದ ಕಬ್ಬು ಬೆಳೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಆಗರವಾದ ಬೆಲ್ಲ ತಯಾರಿಕೆ ಮಾತ್ರ ಕಹಿಯಾಗಿರುವುದಂತೂ ಸತ್ಯ.

ಬೆಲ್ಲ ತಯಾರಿಸಿ ರೈತರಿಗೂ ಒಳ್ಳೆಯ ಬೆಲೆ ಕೊಟ್ಟು ಅನುಕೂಲ ಮಾಡಿದ್ದೆವು. ಈ ವರ್ಷ ಬರ ಭೂಮಿಗೆ ಮಾತ್ರ ಅಲ್ಲ, ಬೆಲ್ಲದವರಿಗೂ ಬಂದಿದೆ. ರೈತರೂ ಗೊಂದಲದಲ್ಲಿದ್ದಾರೆ. ಬೆಲ್ಲದ ಉದ್ಯಮ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕೂಲಿ ದುಬಾರಿಯಾಗಿದೆ. ಬೆಲ್ಲಕ್ಕೆ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಬೆಲ್ಲದ ಗಾಣದ ಮಾಲೀಕ ಮಿಯಾಜಾನ ಕಂಬಳಿ.

ಕಬ್ಬು ಇಳುವರಿ ಶೇ.೫೦ರಷ್ಟು ಕಡಿಮೆ ಇದೆ. ಈ ಬಾರಿ ಸಕ್ಕರೆ ಕಾರ್ಖಾನೆಗಳು ಹಿಂದಿನ ವರ್ಷದ ಅರ್ಧದಷ್ಟು ಕಬ್ಬು ಮಾತ್ರ ಅರೆಯುತ್ತವೆ. ಈ ಬಾರಿ ಕೋಣನಕೆರೆ ಸಕ್ಕರೆ ಕಾರ್ಖಾನೆ ಆರಂಭವಾಗಿದೆ. ಬೆಲ್ಲದ ಗಾಣಗಳು ಲಾಭದಲ್ಲಿ ಕಬ್ಬು ಅರೆಯುವುದು ಅಸಾಧ್ಯ. ಬೆಲ್ಲ ತಯಾರಿಸುವ ಕಾರ್ಮಿಕರು ಬಹಳ ಕೂಲಿ ಕೇಳುತ್ತಿದ್ದಾರೆ. ಬೆಲ್ಲ ಈ ಬಾರಿ ಗಾಣದವರಿಗೆ ಕಹಿ ಆಗಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ.