ಗಣರಾಜ್ಯೋತ್ಸವ ಪರೇಡ್‌ನಲ್ಲಿ ಲಕ್ಕುಂಡಿ ಶಿಲ್ಪಕಲೆಯ ಅನಾವರಣ!

| Published : Dec 24 2024, 12:46 AM IST

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಲಕ್ಕುಂಡಿ ಶಿಲ್ಪಕಲೆಯ ಅನಾವರಣ!
Share this Article
  • FB
  • TW
  • Linkdin
  • Email

ಸಾರಾಂಶ

2025 ಜ. 26ರಂದು ದೆಹಲಿಯಲ್ಲಿ ಜರುಗುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮಜಿನಾಲಯದ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಗದಗ ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಲಕ್ಕುಂಡಿಯು ವಿವಿಧ ಶಿಲ್ಪಕಲೆ, ವಾಸ್ತುಶಿಲ್ಪ ಹೊಂದಿರುವ ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದ್ದು, ಮತ್ತೊಮ್ಮೆ ರಾಷ್ಟ್ರವೇ ಗದಗ ಜಿಲ್ಲೆಯತ್ತ ನೋಡುವಂತಾಗಿದೆ.

ಗದಗ: 2025 ಜ. 26ರಂದು ದೆಹಲಿಯಲ್ಲಿ ಜರುಗುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮಜಿನಾಲಯದ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಗದಗ ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಲಕ್ಕುಂಡಿಯು ವಿವಿಧ ಶಿಲ್ಪಕಲೆ, ವಾಸ್ತುಶಿಲ್ಪ ಹೊಂದಿರುವ ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದ್ದು, ಮತ್ತೊಮ್ಮೆ ರಾಷ್ಟ್ರವೇ ಗದಗ ಜಿಲ್ಲೆಯತ್ತ ನೋಡುವಂತಾಗಿದೆ.

ಬ್ರಹ್ಮ ಜಿನಾಲಯ ಕ್ರಿ.ಶ. 11ನೇ ಶತಮಾನದ್ದಾಗಿದೆ. ಪೂರ್ವಾಭಿಮುಖವಾಗಿ ಗರ್ಭಗುಡಿ, ಅಂತರಾಳ, ಗೂಢಮಂಟಪ, ಅಗ್ರಮಂಟಪ, ತಲವಿನ್ಯಾಸ ಹೊಂದಿದ್ದು, ಕಪ್ಪುಶಿಲೆಯಿಂದ ನಿರ್ಮಿತವಾಗಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ. ಇಕ್ಕೆಲದಲ್ಲಿ ಇಬ್ಬರು ಚಾಮರಧಾರಿಗಳಿದ್ದಾರೆ. ಪೀಠದ ಸುತ್ತಲೂ ಮಕರ ತೋರಣದ ಅಲಂಕಾರವಿದೆ. ರತ್ನತ್ರಯರ ಪ್ರತೀಕವಾದ ಮುಕ್ಕೊಡೆಯಿದೆ. ತೀರ್ಥಂಕರನನ್ನು ಈಗ ಸದ್ಯದಲ್ಲಿ ನೇಮಿನಾಥ ಎಂದು ಕರೆಯುತ್ತಿದ್ದಾರೆ. ದ್ವಾರಬಂಧವು ಪಂಚಶಾಖಾ ರೀತಿಯದಾಗಿದ್ದು. ರತ್ನಶಾಖಾ, ರೂಪಶಾಖಾ, ಸ್ತಂಭಶಾಖಾ, ಸಿಂಹಶಾಖಾ ಮತ್ತು ಪತ್ರಶಾಖಾ, ಲಲಾಟಪಟ್ಟಿಕೆಯಲ್ಲಿ ತೀರ್ಥಂಕರನ ಉಬ್ಬು ಶಿಲ್ಪವಿದೆ. ಹಂಸಗಳ ಸಾಲು ಇದೆ. ಪೇದ್ಯಾ ಭಾಗದಲ್ಲಿ ಗಂಗಾ, ರತಿ ಕಾಮ ಹಾಗೂ ದ್ವಾರಪಾಲರ ಶಿಲ್ಪಗಳಿವೆ. ಉತ್ತರಾಂಗದ ಮೇಲೆ ಪದ್ಮಾವತಿ ಯಕ್ಷಿಯ ಉಬ್ಬುಶಿಲ್ಪವಿದೆ. ಗರ್ಭಗೃಹಕ್ಕೆ ಹೊಂದಿಕೊಂಡು ಅಂತರಾಳವಿದ್ದು, ಮೂಲೆಗಳಲ್ಲಿ ಅರ್ಧಗಂಬಗಳಿವೆ. ಮುಂಭಾಗದಲ್ಲಿ ಎರಡು ಭದ್ರಕ ರೀತಿಯ ಸ್ತಂಭಗಳಿವೆ.

ಬಾಹ್ಯ ವಿವರ-ಅಧಿಷ್ಠಾನ: ಈ ಬಸದಿಯ ಕಪೋತ ಬಂಧ, ಅಧಿಸ್ಥಾನವನ್ನು ಹೊಂದಿದ್ದು, ಅದಕ್ಕೆ ಕ್ರಮವಾಗಿ ಖುರಕ ಪದ್ಮ ಅಂತರೀತ, ತ್ರಿಪಟ್ಟ ಕುಮುದ, ಅಂತರೀತ, ಕಪೋತ ಮತ್ತು ಮಕರ ಪಟ್ಟಿಕೆ ಭಾಗಗಳಿವೆ. ಮಕರ ಪಟ್ಟಿಕೆಯಲ್ಲಿ ಪ್ರಾಣಿಗಳ ಮತ್ತು ಕೀರ್ತಿಮುಖಗಳ ಅಲಂಕಾರವಿದೆ ಹಾಗೂ ಕಪೋತದ ಮೇಲೆ ನಾಸಿಗಳ ಅಲಂಕಾರವಿದೆ.

ಭಿತ್ತಿಯು ಕೂಡ ಸ್ತಂಭ ಪಂಜರ ಮತ್ತು ಕೋಷ್ಠ ಪಂಜರಗಳನ್ನು ಹೊಂದಿದೆ. ಸಲಿಲಾಂತರಗಳಲ್ಲಿ ಸ್ತಂಭ ಪಂಜರಗಳಿದ್ದು, ಅವುಗಳ ಮೇಲೆ ದ್ರಾವಿಡ ಮಾದರಿಯ ಶಿಖರದ ಪ್ರತಿಕೃತಿಗಳಿವೆ. ಅದರ ಮೇಲೆ ಮಕರ ತೋರಣವಿದೆ. ಕೂಟ (ಮೂಲೆ)ದಲ್ಲಿ ಕೋಷ್ಠ ಪಂಜರಗಳಿದ್ದು, ಅವುಗಳ ಮೇಲೆ ದ್ರಾವಿಡ ಶಿಖರದ ಪ್ರತಿಕೃತಿಗಳಿವೆ. ಭಿತ್ತಿಯ ಮೇಲ್ಭಾಗದಲ್ಲಿ ಕಪೋತವಿದ್ದು, ಅದರ ಮೇಲೆ ನಾಸಿಗಳ ಅಲಂಕಾರವಿದೆ. ಗರ್ಭಗೃಹದ ಮೇಲಿನ ಶಿಖರವು ಚತುಸ್ಕಲ (ನಾಲ್ಕು) ದ್ರಾವಿಡ ಮಾದರಿಯದಾಗಿದೆ.

2025 ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಟ್ಯಾಬ್ಲೋ ಆಯ್ಕೆಯಾಗಿ ಲಕ್ಕುಂಡಿಯ ಐತಿಹಾಸಿಕ ಶೀಮಂತಿಕೆ ಅನಾವರಣ ಆಗಲಿದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಶರಣು ಗೋಗೇರಿ ಹೇಳಿದರು.