ಸಾರಾಂಶ
ಶರಣು ಸೊಲಗಿ ಮುಂಡರಗಿ
ಸ್ಥಳೀಯ ಪುರಸಭೆಗೆ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು 2 ತಿಂಗಳಾಗುತ್ತ ಬಂದರೂ ನಗರೋತ್ಥಾನ ಕಾಮಗಾರಿ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಹೀಗಾಗಿ, ನಗರೋತ್ಥಾನ ಕಾಮಗಾರಿಗೆ ಹಿಡಿದ ಗ್ರಹಣ ಬಿಡುವುದು ಯಾವಾಗ ಎನ್ನುವುದು ಇಲ್ಲಿನ ಸಾರ್ವಜನಿಕರ ಪ್ರಶ್ನೆಯಾಗಿದೆ.ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಗರೋತ್ಥಾನ ಕಾಮಗಾರಿ ಪ್ರಾರಂಭವಾಗಿ 7-8 ತಿಂಗಳಾಗಿದ್ದು, ಕೆಲ ವಾರ್ಡ್‌ಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚೇ ಆಗಿದೆ. ಆದರೆ, ಇದುವರೆಗೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. 7ನೇ ವಾರ್ಡಿನ ಹುಡ್ಕೋ ಕಾಲೋನಿ, 8ನೇ ವಾರ್ಡಿನ ಅನ್ನದಾನೀಶ್ವರ ನಗರ, 23ನೇ ವಾರ್ಡಿನ ಹೆಸರೂರು ರಸ್ತೆ ಆಶ್ರಯ ಕಾಲೋನಿಯಲ್ಲಿ ಕಳೆದ 7-8 ತಿಂಗಳಿನ ಹಿಂದೆ ಚೆನ್ನಾಗಿಯೇ ಇದ್ದ ರಸ್ತೆಯನ್ನು ಅಗೆದು ಅಲ್ಲಿ ಬೃಹತ್ ಗಾತ್ರದ ಜಲ್ಲಿಕಲ್ಲು ಕಡಿ ಹಾಕಿ ಹೋದ ಗುತ್ತಿಗೆದಾರರು ಇದುವರೆಗೂ ಈ ವಾರ್ಡ್‌ಗಳ ಕಡೆಗೆ ತಿರುಗಿಯೂ ನೋಡಿಲ್ಲ. ಹೀಗಾಗಿ, ಸಾರ್ವಜನಿಕರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಆಯಾ ವಾರ್ಡಿನ ಪುರಸಭೆ ಸದಸ್ಯರಿಗೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದು ಇಂದಿನ ಪುರಸಭೆ ಉಪಾಧ್ಯಕ್ಷರ ವಾರ್ಡ್ ಎನ್ನುವುದು ಗಮನಾರ್ಹ. 18ನೇ ವಾರ್ಡಿನ ವಿದ್ಯಾನಗರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಉತ್ತಮವಾಗಿದ್ದ ರಸ್ತೆಯನ್ನು ಸಂಪೂರ್ಣವಾಗಿ ಒಡೆದು ಹಾಕಿ ರಸ್ತೆಯ ಎರಡೂ ಪಕ್ಕದಲ್ಲಿನ ಚರಂಡಿಗಳನ್ನು ಒಡೆದು ಹಾಕಿ ಪುನರ್ ನಿರ್ಮಾಣ ಮಾಡಿದ್ದಾರಾದರೂ ಇನ್ನೂ ಪೂರ್ಣಗೊಂಡಿಲ್ಲ. ಎರಡೂ ಬದಿಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದೇ ರಸ್ತೆ ಕಾಮಗಾರಿ ಮಾಡುವುದು ಸರಿಯಲ್ಲ ಎನ್ನುವ ಕಾರಣದಿಂದಾಗಿ ಕಾಮಗಾರಿ ಸ್ಥಗಿತವಾಗಿದೆ. ಇದೇ ರಸ್ತೆಯಲ್ಲಿ ಶಾಲೆ ಇರುವುದರಿಂದ ಅಲ್ಲಿ ನಿತ್ಯ ಸಾವಿರಾರು ಮಕ್ಕಳು ಓಡಾಡುತ್ತಾರೆ. ಮಳೆ ಆದಾಗಲಂತೂ ಆ ಮಕ್ಕಳ ಪಾಡು ಹೇಳತೀರದು.ಎಲ್ಲ ವಾರ್ಡಿನ ಸದಸ್ಯರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು, ಪಿಡಿಓ ಅವರನ್ನು, ಗದಗ ಜಿಲ್ಲಾಧಿಕಾರಿ ಭೇಟಿಯಾಗಿ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಮನವಿ ಮಾಡಿದರೂ ಈವರೆಗೂ ಪೂರ್ಣಗೊಳ್ಳುತ್ತಿಲ್ಲ. ಈ ಹಿಂದೆ ಮುಖ್ಯಾಧಿಕಾರಿ ಈಗಾಗಲೇ ಕೆಲ ವಾರ್ಡ್‌ಗಳಲ್ಲಿ ನಗರೋತ್ಥಾನ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ 2-3 ದಿನಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದರು. ಅವರು ಹೀಗೆ ಹೇಳಿ ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ.
ಆಗಸ್ಟ್ 23ರಂದು ಪುರಸಭೆ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೇರಿ ಎರಡು ತಿಂಗಳಾದರೂ ಈ ಕಾಮಗಾರಿ ಕುರಿತು ಯಾವುದೇ ರೀತಿಯ ಉತ್ಸಾಹ ತೋರಿಸುತ್ತಿಲ್ಲ ಎಂದು ವಾರ್ಡಿನ ಜನ ದೂರುತ್ತಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗದಗ ಜಿಲ್ಲಾಧಿಕಾರಿ ವಿಶೇಷವಾಗಿ ಗಮನಹರಿಸುವ ಮೂಲಕ ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ನಾವು ಅಧ್ಯಕ್ಷ, ಉಪಾಧ್ಯಕ್ಷರಾದ ಕೆಲವೇ ದಿನಗಳಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನನೆಗುದಿಗೆ ಬಿದ್ದಿರುವ ನಗರೋತ್ಥಾನ ಕಾಮಗಾರಿ ವಿಳಂಬದ ಕುರಿತು ಚರ್ಚಿಸಲು ಖುದ್ದಾಗಿ ಜಿಲ್ಲಾಧಿಕಾರಿ ಭೇಟಿ ಮಾಡಿ ಚರ್ಚಿಸಿ ಅಲ್ಲಿನ ನೈಜ ಸಮಸ್ಯೆ ತಿಳಿಸಿದರೂ ಈವರೆಗೂ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ವಾರ್ಡಿನ ನಿವಾಸಿಗಳು ಪುರಸಭೆ ಕಚೇರಿಗೆ ಬಂದು ನಮ್ಮ ಜತೆಗೆ ಜಗಳ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎಂದು ಮುಂಡರಗಿ ಪುರಸಭೆ ಅಧ್ಯಕ್ಷೆ ನಿರ್ಮಲಾ ನಾಗರಾಜ ಕೊರ್ಲಹಳ್ಳಿ ತಿಳಿಸಿದ್ದಾರೆ.