ಸಾರಾಂಶ
ಹುಬ್ಬಳ್ಳಿ:
ಉತ್ತರ ಕರ್ನಾಟಕ ಭಾಗದ ಜನರಿಗೆ ಕಿಮ್ಸ್ ಸಂಸ್ಥೆಯು ಉತ್ತಮ ಚಿಕಿತ್ಸೆ ನೀಡುತ್ತಿದೆ. ಈ ಸಂಸ್ಥೆಯ ವೈದ್ಯರ ಸೇವೆ ಶ್ಲಾಘನೀಯವಾದುದು ಎಂದು ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ಗುರುವಾರ ಇಲ್ಲಿನ ಕಿಮ್ಸ್‌ನ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವತಿಯಿಂದ ಸಿ.ಎಸ್.ಆರ್. ನಿಧಿಯ ಅಡಿಯಲ್ಲಿ ₹1.75 ಕೋಟಿ ವೆಚ್ಚದ ವೈದ್ಯಕೀಯ ಉಪಕರಣಗಳಾದ ನ್ಯೂಯೋನಟಲ್ ಇನ್ಕುಬೇಟರ್ಸ್ ಮತ್ತು ಆಪರೇಟಿಂಗ್ ಲ್ಯಾಪ್ರೋಸ್ಕೋಪಿ ಖರೀದಿಗಾಗಿ ಕಿಮ್ಸ್‌ಗೆ ಚೆಕ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಹೆಚ್ಚಾಗಿ ಅಸುನೀಗುತ್ತಿದ್ದಾರೆ. ರಾಜ್ಯದಲ್ಲಿ ಹೆರಿಗೆ ವೇಳೆ 1000ರಲ್ಲಿ 24 ಮಕ್ಕಳು ಮೃತಪಡುತ್ತಿವೆ. ಸುಧಾರಿತ ಆಧುನಿಕ ಯಂತ್ರೋಪಕರಣ ಬಳಕೆ ಮಾಡಿಕೊಳ್ಳಬೇಕು. ಹೀಗಾಗಿ ಕಿಮ್ಸ್‌ಗೆ ಅವಶ್ಯಕವಿರುವ ವೈದ್ಯಕೀಯ ಉಪಕರಣ ಒದಗಿಸಲಾಗುತ್ತಿದೆ. ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆಯನ್ನು ವೈದ್ಯರು ನೀಡಬೇಕೆಂದು ಕರೆ ನೀಡಿದರು.ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಕಿಮ್ಸ್ ಸಂಸ್ಥೆ ಸಂಜೀವಿನಿ ಆಗಿದೆ. ಇಲ್ಲಿನ ವೈದ್ಯರ ಸೇವೆ ಅನನ್ಯವಾದುದು. ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಸೇವೆ ದೊರೆಯುವುದಿಲ್ಲ ಎಂದರು.ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಎ.ಎಂ. ಕುಲಕರ್ಣಿ, ಬಿ.ಜಿ. ವಸ್ತ್ರದ, ಡಾ. ಸಿ.ಎಸ್. ಪಾಟೀಲ, ಐ.ಎಸ್. ಪಾಟೀಲ, ಮುಖಂಡರಾದ ಅನಿಲಕುಮಾರ ಪಾಟೀಲ, ಶರಣಪ್ಪ ಪಟಗಿ, ಕಿಮ್ಸ್ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ ಸೇರಿದಂತೆ ಅಧಿಕಾರಿಗಳು, ಇದ್ದರು. ಸುಕನ್ಯಾ ಪ್ರಾರ್ಥಿಸಿದರು. ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಸ್ವಾಗತಿಸಿದರು. ಡಾ. ರಾಜಶೇಖರ ದ್ಯಾಬೇರಿ ನಿರೂಪಿಸಿದರು.