‘ಪ್ರೇತ ಮದುವೆ’ಗೆ ಪ್ರೇತ ವರ ಬೇಕಾಗಿದ್ದಾರೆ!

| Published : May 13 2024, 11:28 AM IST

Nagpur police arrested marriage fraud gang
‘ಪ್ರೇತ ಮದುವೆ’ಗೆ ಪ್ರೇತ ವರ ಬೇಕಾಗಿದ್ದಾರೆ!
Share this Article
  • FB
  • TW
  • Linkdin
  • Email

ಸಾರಾಂಶ

‘ಸುಮಾರು 30 ವರ್ಷಗಳ ಹಿಂದೆ ಗತಿಸಿದ ಹೆಣ್ಣು ಮಗುವಿಗೆ ಅದೇ ಜಾತಿಯ ಬೇರೆ ಗೋತ್ರದ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ’ ಎಂದು ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಜಾಹಿರಾತು ಬಗೆ ಬಗೆಯ ಚರ್ಚೆಗೆ ಕಾರಣವಾಗಿದೆ.

ಮಂಗಳೂರು :  ‘ಸುಮಾರು 30 ವರ್ಷಗಳ ಹಿಂದೆ ಗತಿಸಿದ ಹೆಣ್ಣು ಮಗುವಿಗೆ ಅದೇ ಜಾತಿಯ ಬೇರೆ ಗೋತ್ರದ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ’ ಎಂದು ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ಜಾಹಿರಾತು ಬಗೆ ಬಗೆಯ ಚರ್ಚೆಗೆ ಕಾರಣವಾಗಿದೆ.

ಪುತ್ತೂರಿನ ನಿವಾಸಿಯೊಬ್ಬರ ಮನೆಯಲ್ಲಿ ಸುಮಾರು 30 ವರ್ಷದ ಹಿಂದೆ ಒಂದು ತಿಂಗಳ ಹಸುಗೂಸು ಮೃತಪಟ್ಟಿತ್ತು. ಇತ್ತೀಚೆನ ಕೆಲವು ವರ್ಷದಲ್ಲಿ ಅವರ ಮನೆ-ಕುಟುಂಬದಲ್ಲಿ ಅಕಾಲಿಕ ಘಟನೆಗಳು ಸಂಭವಿಸತೊಡಗಿತ್ತು. ಈ ಬಗ್ಗೆ ಅವಲೋಕಿಸಿದಾಗ ಪ್ರೇತ ಬಾಧೆಯ ಬಗ್ಗೆ ತಿಳಿದುಕೊಂಡರು. 30 ವರ್ಷದ ಹಿಂದೆ ತೀರಿ ಹೋದಾಕೆಗೆ ಮದುವೆ ಮಾಡಿಸಬೇಕು ಎಂದು ತಿಳಿದುಬಂದಿತ್ತು.

ಕುಟುಂಬದವರಲ್ಲಿ ಪ್ರೇತ ವರ ಬೇಕಾಗಿರುವ ಬಗ್ಗೆ ಸಾಕಷ್ಟು ಕಡೆಗಳಲ್ಲಿ ಕೇಳಿದೆವು. ಕೊನೆಯ ಪ್ರಯತ್ನವಾಗಿ ಪತ್ರಿಕೆಯಲ್ಲಿ ಕೋರಿಕೆ ಹಾಕಿದ್ದೆವು. ಬಳಿಕ ದಿನಕ್ಕೆ 50ಕ್ಕಿಂತಲೂ ಅಧಿಕ ಕರೆ ಬಂದಿದೆ. ಅದರಲ್ಲಿ ನಮ್ಮ ಪ್ರೇತ ಮದುವೆಗೆ ಸಂಬಂಧಿಸಿ ಸುಮಾರು 20ಕ್ಕೂ ಅಧಿಕ ಸಂಪರ್ಕ ಸಂಖ್ಯೆಗಳನ್ನು ಗೊತ್ತು ಮಾಡಿ ಮಾತುಕತೆ ನಡೆಸಿ ಮದುವೆ ನಡೆಸುವ ತೀರ್ಮಾನ ಮಾಡಲಾಗುತ್ತಿದೆ. ಕೆಲವರು ಪೂರಕವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಅವರು.

ಏನಿದು ಪ್ರೇತ ಮದುವೆ?:

ಪ್ರೇತ ಮದುವೆ ಎನ್ನುವುದು ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ನಂಬಿಕೆಯ ಆಚರಣೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆಯ ಮೊದಲೇ ಮೃತಪಟ್ಟರೆ ಅವರಿಗೆ ಮೋಕ್ಷ ಇಲ್ಲ ಎಂಬ ನಂಬಿಕೆ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಮದುವೆ ಆಗದೆ ಸತ್ತವರ ಮೋಕ್ಷಕ್ಕಾಗಿ ಕುಲೆ (ಪ್ರೇತ)ಮದುವೆ ಎಂದು ಮಾಡಿಸುತ್ತಾರೆ. ಸಮಾಜದಲ್ಲಿ ಹುಡುಗ-ಹುಡುಗಿಗೆ ಯಾವ ಕ್ರಮದಲ್ಲಿ ಮದುವೆ ಮಾಡಲಾಗುತ್ತದೋ ಅದೇ ಕ್ರಮದಲ್ಲಿ ಪ್ರೇತ ಮದುವೆಯೂ ನಡೆಯುತ್ತದೆ. ಅಲ್ಲಿಗೆ ಕುಟುಂಬದ ತೊಂದರೆ ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ.