ಸಾರಾಂಶ
ಜಿ.ಡಿ. ಹೆಗಡೆ
ಕಾರವಾರ:ಜಿಲ್ಲಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣವೇ ಸವಾಲಾಗಿದೆ. ಕಳೆದ 2023 ಜನವರಿಯಿಂದ ಡಿಸೆಂಬರ್ ವರೆಗೆ 8000ಕ್ಕೂ ಅಧಿಕ ಜನರಿಗೆ ಬೀದಿನಾಯಿಗಳು ಕಚ್ಚಿವೆ.
ಕಳೆದ ಹಲವು ವರ್ಷದಿಂದ ಬೀದಿನಾಯಿ, ಬೀಡಾಡಿ ಜಾನುವಾರುಗಳ ಉಪಟಳಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ರಾತ್ರಿ ವೇಳೆ ಪಟ್ಟಣ, ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳು ರಸ್ತೆಯ ಮೇಲೆ ಕಾಣಸಿಗುತ್ತವೆ. ಕೆಲವೆಡೆ ವಾಹನ ಅಥವಾ ಪಾದಚಾರಿ ತೆರಳಿದರೆ ಬೊಗಳುತ್ತಾ ಬೆನ್ನತ್ತಿ ಬರುತ್ತವೆ. ಸ್ವಲ್ಪ ಯಾಮಾರಿದರೂ ಜೀವವೇ ಹೋಗುತ್ತದೆ. ಕಳೆದ ಜನವರಿ ಅಂತ್ಯದಲ್ಲಿ ಶಿರಸಿ ಮಹಿಳೆಯೊಬ್ಬರ ಮೇಲೆ ನಾಯಿ ದಾಳಿ ಮಾಡಿತ್ತು.ಎಷ್ಟು ಕಡಿತ:2023 ಜನವರಿಯಿಂದ ಡಿಸೆಂಬರ್ ವರೆಗೆ 8716 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಭಟ್ಕಳ, ಹಳಿಯಾಳ, ಕುಮಟಾ, ಶಿರಸಿ ಅಗ್ರಸ್ಥಾನದಲ್ಲಿದ್ದು, ಸಾವಿರಕ್ಕೂ ಅಧಿಕ ಜನರಿಗೆ ನಾಯಿ ಕಡಿದಿದೆ. ಅಂಕೋಲಾ 535, ಭಟ್ಕಳ 1020, ಹಳಿಯಾಳ 1064, ಹೊನ್ನಾವರ 417, ಜೋಯಿಡಾ 99, ಕಾರವಾರ 923, ಕುಮಟಾ 1234, ಮುಂಡಗೋಡ 215, ಸಿದ್ದಾಪುರ 793, ಶಿರಸಿ 1902, ಯಲ್ಲಾಪುರ 514 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.ಏಕಾಏಕಿ ಬೀದಿನಾಯಿಗಳು ಅಡ್ಡ ಬಂದು ಬೈಕ್ ಸವಾರರು ಗಾಯಗೊಂಡ ಉದಾಹರಣೆಗಳು ಹಲವಷ್ಟಿದೆ. ರಾತ್ರಿ ಮನೆಯ ಹೊರಗೆ ಆಟವಾಡುತ್ತಿರುವ ಮಕ್ಕಳ ಮೇಲೆ ದಾಳಿ ಮಾಡಿ ಕಡಿದರೆ ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಒಬ್ಬಂಟಿಯಾಗಿ ವಾಯುವಿಹಾರಕ್ಕೆ ತೆರಳುವವರಿಗೂ ಬೀದಿ ನಾಯಿಗಳು ತಲೆನೋವಾಗಿದ್ದು, ಅಟ್ಟಿಸಿಕೊಂಡು ಬರುತ್ತವೆ.ಬೀಡಾಡಿ ಜಾನುವಾರುಗಳು ರಾತ್ರಿ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲುಗಿರುತ್ತವೆ. ವಾಹನ ಸವಾರರಿಗೆ ಜಾನುವಾರು ಇರುವುದು ಕಾಣದೇ ಅಪಘಾತವಾದ ಘಟನೆಗಳು ಸಾಕಷ್ಟಿವೆ. ಗ್ರಾಮೀಣ ಹಾಗೂ ನಗರ ಭಾಗದ ರಸ್ತೆಗಳ ಜತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಜಾನುವಾರುಗಳು ಸಾಕಷ್ಟಿವೆ. ಜಿಲ್ಲೆಯಾದ್ಯಂತ ಬೀದಿ ನಾಯಿ, ಬೀಡಾಡಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳ ಉಪಟಳ ತಡೆಯಲು ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ.
ಬೀದಿನಾಯಿ, ಬೀಡಾಡಿ ಜಾನುವಾರು ಚಿಕಿತ್ಸೆಗೆ ಮಾತ್ರ ಇಲಾಖೆಯಲ್ಲಿ ಅವಕಾಶವಿದೆ. ನಗರ-ಪಟ್ಟಣ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಭಾಗದಲ್ಲಿ ಗ್ರಾಪಂಗಳು ಬೀದಿನಾಯಿ ಹಿಡಿದು ಕೊಟ್ಟರೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು, ರೇಬಿಸ್ ಲಸಿಕೆ ನೀಡಲು ಸಿದ್ಧರಿದ್ದೇವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಲಾಗಿದೆ ಎಂದು ಪಶು ಪಾಲನೆ ಮತ್ತು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನಕುಮಾರ ಹೇಳಿದರು.ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪಶು ಸಂಗೋಪನಾ ಇಲಾಖೆಗೆ ಪತ್ರ ಬರೆಯಲಾಗಿದೆ. ನಗರಸಭೆ, ಪಶು ಸಂಗೋಪನಾ ಇಲಾಖೆ ಸೇರಿ ಮಾಡಬೇಕಾಗುತ್ತದೆ. ಆದಷ್ಟು ಶೀಘ್ರದಲ್ಲಿ ಕ್ರಮವಹಿಸುತ್ತೇವೆ ಎಂದು ಕಾರವಾರ ಸಿಎಂಸಿ ಪೌರಾಯುಕ್ತ ಕೆ. ಚಂದ್ರಮೌಳಿ ತಿಳಿಸಿದರು.