ಸಾರಾಂಶ
ಕನ್ನಡಪ್ರಭ ವಾರ್ತೆ, ಬೀದರ್
ತಲ್ಲಣ ಜೀವನಕ್ಕೆ ವಚನ ಸಾಹಿತ್ಯವೇ ದಿವ್ಯ ಔಷಧಿಯಾಗಿದೆ. ವಚನಗಳ ಮೂಲಕ ಶರಣರು ನೀಡಿದ್ದು ಜೀವನ ಸಂವಿಧಾನ ಹೊರತು ಮತ್ತೇನಲ್ಲ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೀದರ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ಡಾ.ಎಸ್‌ಎಸ್ ಸಿದ್ದಾರೆಡ್ಡಿ ವೇದಿಕೆಯಲ್ಲಿ ಸೋಮವಾರ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯ ಎಂಬುವದು ಕೇವಲ ಮನೊರಂಜನೆಗಾಗಿ ರಚಿತವಾದುದಲ್ಲ, ಇದು ಲೋಕಕಲ್ಯಾಣಕ್ಕಾಗಿ ರಚಿತವಾದ ವಚನ ಸಾಹಿತ್ಯ ಎಂದು ತಿಳಿಸಿದರು.
12ನೇ ಶತಮಾನದಲ್ಲಿ ವಚನಗಳ ಮೂಲಕ ಜ್ಞಾನದ ಮಾರ್ಗ ತೊರಿಸಿದರು ಅಲ್ಲದೇ ಸಾರ್ಥಕ ಬದುಕನ್ನು ನೀಡಿದ ಮಹಾನ್ ಸಾಧಕರು ಶರಣರಾಗಿದ್ದಾರೆ. ಬಸವಾದಿ ಶರಣರು ನಡೆ ನುಡಿಯುವ ಮೂಲಕ ಶರಣರ ಕಾಯಕ ಭೂಮಿಯಲ್ಲಿ ವಚನ ಸಾಹಿತ್ಯ ಕಾವ್ಯ, ಗದ್ಯ ಇಲ್ಲದೆ ಅನುಭಾವದ ಔತಣವಾಗಿದೆ ವಚನ ಸಾಹಿತ್ಯ ಎಂದರು.ಶರಣರು ವಿಶ್ವಕ್ಕೆ ಕೊಟ್ಟಿದ್ದು ಜೀವನ ಸಂವಿಧಾನ, ಇದರಲ್ಲಿ ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶ ಇಲ್ಲ ಆದರೆ ಆಡಳಿತಾತ್ಮಕ ಸಂವಿಧಾನದಲ್ಲಿ ಬದಲಾವಣೆಗೆ ಅವಕಾಶ ಇದೆ ಎಂದರು.
ವಚನ ಸಾಹಿತ್ಯವೆಂದರೆ ನಡೆ ನುಡಿಗಳನ್ನು ಒಂದಾಗಿಸುವ ಸಾಹಿತ್ಯ. ಹೃದಯ ಅರಳಿಸುವ ಅನುಭಾವದ ಔತಣ, ಶೋಷಣೆ, ಮೂಢ ನಂಬಿಕೆ, ಕಂದಾಚಾರ, ವರ್ಣ ಭೇದ, ವರ್ಗ ಭೇದವೆಂಬ ಸಾಮಾಜಿಕ ಸಾಂಕ್ರಾಮಿಕ ರೋಗವನ್ನು ಜಗತ್ತಿನಿಂದಲೇ ನಿರ್ಮೂಲನೆ ಮಾಡಲು ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲ ಎರೆದು ಜ್ಞಾನದ ಜ್ಯೋತಿ ಯನ್ನು ಬೆಳಗಿಸಿದ ಸಾಹಿತ್ಯವಾಗಿದೆ ಎಂದರು.ಶರಣರು ನೈತಿಕ, ಧಾರ‍್ಮಿಕ, ಆಧ್ಯಾತ್ಮಿಕತೆ ಜೊತೆಗೆ ಆರ್ಥಿಕ ಸಮಾನತೆ ನೀಡಿದರು. ಶರಣರು ನೀಡಿದ ಸೂತ್ರವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಸರ್ವರಿಗೂ ಸಮಬಾಳು ಸಮಪಾಲು ನೀತಿ ಜಾರಿಗೆ ಬಂದಂತಾಗುತ್ತದೆ. ಇಂದಿನ ಕಾಲದಲ್ಲಿ ಸಾರ್ವಜನಿಕ ಹುದ್ದೆಗಳನ್ನು ತಮ್ಮ ಕುಟುಂಬಸ್ಥರಿಗೆ ಮಾರಾಟವಾಗುತ್ತಿವೆ. ಆದ್ದರಿಂದ ರಾಜಕಾರಣದಲ್ಲಿ ಧರ್ಮದ ಅವಶ್ಯಕತೆ ಇದೆ. ದೇವರಿಗೂ ಮತ್ತು ಮನುಷ್ಯರಿಗೂ ನೇರ ಸಂಪರ್ಕ ಕಲ್ಪಿಸಿದ ಬಸವಾದಿ ಶರಣರು ಇಷ್ಟಲಿಂಗವನ್ನು ಪೂಜಿಸಲು ಆಧ್ಯಾತ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಹಂಕಾರ, ಅಧಿಕಾರದ ಮದದಿಂದ ದೂರ ಉಳಿಯಬೇಕೆಂದು ಸೋಮಶೇಖರ ಸಲಹೆ ನೀಡಿದರು.
ವಚನ,ಶರಣ ಸ್ಮಾರಕ ಸಂರಕ್ಷಣೆ, ಪ್ರಸಾರಕ್ಕೆ ಸರ್ಕಾರ ಮುನ್ನುಗ್ಗಲಿ: ಡಾ.ಸಿ.ಸೋಮಶೇಖರಬೀದರ್: ಸಮ್ಮೇಳನದ ಸರ್ವಾಧ್ಯಕ್ಷನಾಗಿ ವಚನ ಸಾಹಿತ್ಯ, ಶರಣ ಸಾಹಿತ್ಯ ಮತ್ತು ಅದಕ್ಕೆ ಪೂರಕವಾದ ಶರಣರ ಸ್ಮಾರಕಗಳು ಮತ್ತು ಅವರ ಸಾಹಿತ್ಯ ಪ್ರಸಾರದ ದಿಸೆಯಲ್ಲಿ ನಾವು ಮತ್ತು ಸರ್ಕಾರ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಕೆಲವು ಸಲಹೆಗಳನ್ನು ನೀಡ ಬಯಸುತ್ತೇನೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ತಿಳಿಸಿದರು.
ಅವರು ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ವಚನಕಾರರ ಇರುವಿಕೆಗೆ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುವ ಅವರ ಸ್ಮಾರಕಗಳನ್ನು ಹುಟ್ಟಿ ಬೆಳೆದ ಸ್ಥಳಗಳನ್ನು, ಸಂರಕ್ಷಿಸುವುದು ಆದ್ಯ ಕರ್ತವ್ಯವಾಗಬೇಕು. ಇದನ್ನು ಸರ್ಕಾರಗಳು ಮಾಡಿಯೇ ತೀರಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ ಎಂದರು.ಬಸವಣ್ಣನ ಅರಿವಿನ ಮನೆ. ಅನುಭವ ಮಂಟಪ ಅಂತಃಪುರದ ಆಧ್ಯಾತ್ಮಿಕ ಕೇಂದ್ರ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಬೇಕು. ಅಂದಿನ ಅನುಭವ ಮಂಟಪದಂತೆ ಇಲ್ಲಿ ನಿರಂತರ ದಾರ್ಶನಿಕರ, ವಿದ್ವಾಂಸರ, ಕವಿಗಳ ಮತ್ತು ಜ್ಞಾನಿಗಳ ಸಂಗಮ ನಿರಂತರ ಆಗುತ್ತಿರಬೇಕು ಹಾಗೂ ಸಾಮಾಜಿಕ ಬದಲಾವಣೆಗಾಗಿ ಹಲವಾರು ಚರ್ಚೆಗಳು ನಡೆದು ಅದು ಫಲಿಸುವಂತಾಗಬೇಕು. ವಚನಗಳು ನಮಗೆ ದೊರಕುವಂತೆ ಮಾಡುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಂತಹ ಡಾ. ಫ.ಗು. ಹಳಕಟ್ಟಿರವರ ಕುರಿತಾಗಿ ಪ್ರತಿ ಜಿಲ್ಲೆಯಲ್ಲಿಯೂ ಕಮ್ಮಟಗಳು ನಡೆಯಬೇಕು, ಗೋಷ್ಟಿಗಳು ನಡೆಯಬೇಕು ಎಂದರು.ಕೃತಿಗಳ ಮೂಲಕ ವಚನ ವೈಭವವನ್ನು ಪ್ರಚಾರ ಮಾಡುವ ಜೊತೆಗೆ ಶಾಲಾ ಮಕ್ಕಳಿಗೆ ಪಠ್ಯಗಳ ಜೊತೆಗೆ ವಚನಕಾರರ ಪರಿಚಯ ಮತ್ತು ವಚನಗಳನ್ನು ಪಠ್ಯದಲ್ಲಿ ಉಳಿಸಲೇಬೇಕೆನ್ನುವ ಆಗ್ರಹ ಸಹ ನನ್ನದು.ಪ್ರಸ್ತುತ ಸಾರ್ವಜನಿಕ ಜಾಲ ತಾಣಗಳ ಮೂಲಕ ಅಂದರೆ ಯೂಟೂಬ್, ಫೇಸ್‌ಬುಕ್, ಟ್ವಿಟರ್, ಮುಂತಾದ ಕಡೆ ಅಗತ್ಯವಾದಷ್ಟು ಪ್ರಸಾರ ಮಾಡುವ ಮೂಲಕ ಯುವ ಸಮೂಹ ವಚನಗಳ ಮೌಲ್ಯಗಳನ್ನು ಮತ್ತು ಅದರ ಅಘಾದವಾದ ಅರ್ಥವನ್ನು ತಿಳಿದು ಬಾಳುವಂತೆ ಅವರನ್ನು ಪ್ರೇರೇಪಿಸಬೇಕು.
ಶರಣ ತತ್ವದ ಪ್ರಸಾರಕ್ಕೆ ಈಗಾಗಲೇ ಹಲವು ಶರಣ ಬಂಧುಗಳು ವಾಹಿನಿಗಳನ್ನು ಸ್ಥಾಪಿಸಿರುವುದು ಸ್ವಾಗತಾರ್ಹ. ಆದರೆ ಅದು ಕೇವಲ ನಿಗದಿತ ಪ್ರದೇಶಕ್ಕೆ ಸೀಮಿತವಾಗಿದೆ. ಇದೇ ನಿಟ್ಟಿನಲ್ಲಿ ಸರ್ಕಾರ ಒಂದು ವಾಹಿನಿಯನ್ನು ಆರಂಭಿಸಿ ಭಾರತದ ಎಲ್ಲಾ ಭಾಷೆಗಳಲ್ಲಿಯೂ ವಚನಸಾರ ಪಸರಿಸಲಿ ಎಂದರು.‘ವಚನ ದರ್ಶನ’ ಪುಸ್ತಕದಿಂದ ವಚನ ಸಾಹಿತ್ಯ ಮಲೀನ- ವಚನ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಜೆ.ಎಸ್.ಪಾಟೀಲ್ ಪ್ರತಿಪಾದನೆ, ಪುಸ್ತಕದ ಮುಟ್ಟುಗೋಲಿಗೆ ಪರಿಷತ್ ಶ್ರಮಿಸಲೆಂದು ಕರೆಕನ್ನಡಪ್ರಭ ವಾರ್ತೆ, ಬೀದರ್‌ವಚನ ದರ್ಶನ ಪುಸ್ತಕ ಕೊಳಕು, ಮೂಲಕ ವಚನ ಸಾಹಿತ್ಯವನ್ನು ಮಲೀನಗೊಳಿಸುವ ಕಾರ್ಯಕ್ಕೆ ಕೈ ಹಾಕಿದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ವಚನ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಚನ ಸಾಹಿತ್ಯದ ಸಂರಕ್ಷಣೆ ಮಾಡಬೇಕೆಂದು ವಿಜಯಪುರದ ಶರಣ ಸಾಹಿತಿ ಡಾ.ಜೆ.ಎಸ್.ಪಾಟೀಲ್ ತಿಳಿಸಿದರು.
ಅವರು ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ಡಾ.ಎಸ್‌ಎಸ್ ಸಿದ್ದಾರೆಡ್ಡಿ ವೇದಿಕೆಯಲ್ಲಿ ಆಯೋಜಿಸಿದ್ದ 5ನೇ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ ಆಶಯ ನುಡಿಗಳನ್ನಾಡಿ, ನಿರ್ಲಕ್ಷಿತ ವಚನಕಾರರನ್ನು ಮತ್ತು ಅವರು ರಚಿಸಿದ ವಚನ ಗಳನ್ನು ಬೆಳಕಿಗೆ ತರುವುದೇ ಪರಿಷತ್ತಿನ ಮೂಲ ಧ್ಯೇಯವಾಗಿದೆ. ವಚನ ಸಾಹಿತ್ಯ ಕೆಲವರಿಂದ ರಚನೆಯಾದವುಗಳಲ್ಲ. ಅದೊಂದು ಆಕಾಶವಿದ್ದಂತೆ. ನಾನು ಆಧುನಿಕ ವಚನಗಳ ವಿರೋಧಿಯಲ್ಲ. ಆದರೆ ನಮಗೆ ಆಧುನಿಕ ವಚನಗಳು ಬೇಡ. ಏಕೆಂದರೆ ಅವುಗಳಲ್ಲಿ ನಡೆ ನುಡಿ ಒಂದಾಗಿರುವುದಿಲ್ಲ. ಆದ್ದರಿಂದ ಬಸವಾದಿ ಶರಣರ ಮೂಲ ವಚನಗಳನ್ನು ಶಾಲಾ ಕಾಲೇಜಿನ ಮಕ್ಕಳಿಗೆ ತಲುಪಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ವಚನ ಓದಿಸಿದರೆ ಅವು ಅವರ ಹೃದಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ಎಸ್.ದಾಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು. ಸಮ್ಮುಖವನ್ನು ಹುಲಸೂರಿನ ಡಾ.ಶಿವಾನಂದ ಸ್ವಾಮಿಗಳು, ಡಾ.ಸಿದ್ಧರಾಮ ಬೆಲ್ದಾಳ ಶರಣರು ವಹಿಸಿದ್ದರು. ಸರ್ವಾಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ವಹಿಸಿದರೆ ಅಧ್ಯಕ್ಷತೆಯನ್ನು ಪರಿಷತ್ತಿನ ಗೌರವಾಧ್ಯಕ್ಷೆ ಡಾ. ಗುರಮ್ಮಾ ಸಿದ್ದಾರೆಡ್ಡಿ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ, ಚನ್ನಬಸವ ಬಳತೆ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ, ಪ್ರಥಮ ದರ್ಜೆ ಗುತ್ತಿಗೆದಾರ, ಬಿಜೆಪಿ ಹಿರಿಯ ಮುಖಂಡರಾದ ಗುರುನಾಥ ಕೊಳ್ಳೂರ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ ಶೆಟಕಾರ, ಹಾಸನದ ರವಿ ನಾಕಲಗೂಡು, ಬಾಗಲಕೋಟೆಯ ಶ್ರೀಶೈಲ ಕರಿಶಂಕರ, ಚಿಕ್ಕಬಳ್ಳಾಪುರದ ಕೆ.ಪಿ.ನವಮೋಹನ, ಗದಗದ ಮಹಾಂತೇಶ ಗಜೇಂದ್ರಗಡ, ಆರ್.ಬಿ.ವೆಂಕಟೇಶ ಉಪಸ್ಥಿತರಿದ್ದರು.ಭಾನುಪ್ರಿಯಾ ಅರಳಿ ತಂಡದವರಿಂದ ನಾಡಗೀತೆ ಜರುಗಿತು. ಹಿರಿಯ ಸಾಹಿತಿ ಡಾ. ರಘುಶಂಖ ಭಾತಂಬ್ರಾ ಸ್ವಾಗತಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ವಚನ ನೃತ್ಯ ಜರುಗಿತು. ಪುಟ್ಟರಾಜ ಶರಣಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಥಮಕೆ ಮತ್ತು ಶ್ರೀದೇವಿ ಪಾಟೀಲ್ ನಿರೂಪಿಸಿದರು. ಶೈಲಜಾ ಚಳಕಾಪುರೆ ವಂದಿಸಿದರು. ಶಿವಲಿಂಗ ಹೇಡೆ, ಬಸವರಾಜ ಮೂಲಗೆ ಹಾಗೂ ಸರಿತಾ ಹುಡಗಿಕರ ವೇದಿಕೆ ನಿರೂಪಿಸಿದರು.
ಬಸವ ಪ್ರಜ್ಞಾಧಾರೆ ರಾಜ್ಯ ಪಸರಿಸಲಿ..ವಚನ ಸಾಹಿತ್ಯ ಸರ್ವಾಂಗೀಣ ಚಳವಳಿಯ ಉಪ ಉತ್ಪನ್ನಗಳಾಗಿವೆ. ಸಾಹಿತ್ಯೇತರ ಉದ್ದೇಶದಿಂದ ವಚನ ಸಾಹಿತ್ಯ ಹುಟ್ಟಿಕೊಂಡಿದೆ. ಜಾತಿ ವರ್ಣ ವರ್ಗ ರಹಿತವಾದ ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ಹುಟ್ಟಿಕೊಂಡ ವಚನ ಸಾಹಿತ್ಯವನ್ನು ಮಲೀನಗೊಳಿಸಲು ಹಲವರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ವಚನಗಳ ಮೇಲೆ ವಕ್ರದೃಷ್ಟಿ ಹಾಕುವವರ ವಿರುದ್ಧ ಪರಿಷತ್ತು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕು. ಬಸವ ಪ್ರಜ್ಞಾಧಾರೆಗೆ ರಾಜ್ಯದಾದ್ಯಂತ ಪ್ರಚಾರ ಮಾಡುವ ಅವಶ್ಯಕತೆ ಇದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.ಸಾರೋಟಿನಲ್ಲಿ ಸರ್ವಾಧ್ಯಕ್ಷ ಮೆರವಣಿಗೆ ; ವಚನ ಸಾಹಿತ್ಯ ಹೊತ್ತು ಕುಣಿದು ಕುಪ್ಪಳಿಸಿದ ಬಸವಾನುಯಾಯಿಗಳು
ಬೀದರ್: ನಗರದ ಬಸವೇಶ್ವರ ವೃತ್ತದಿಂದ ಅಲಂಕೃತ ಸಾರೋಟಿನಲ್ಲಿ ರಾಜ್ಯಮಟ್ಟದ 5ನೇ ವಚನ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯರೂ ಆದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಅವರ ಹಾಗೂ ವಚನ ಸಾಹಿತ್ಯವನ್ನು ಹೊತ್ತ ಭವ್ಯ ಮೆರವಣಿಗೆ ಜರುಗಿತು.ಮೆರವಣಿಗೆಯು ಭಗತಸಿಂಗ್ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮುಖಾಂತರ ರಂಗಮಂದಿರ ತಲುಪಿತು. ಮೆರವಣಿಗೆಗೆ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೈಜಿನಾಥ ಕಮಠಾಣೆ ಚಾಲನೆ ನೀಡಿದರು. ನಾಡ ಧ್ವಜವನ್ನು ಖ್ಯಾತ ವೈದ್ಯರಾದ ಡಾ. ವಿಜಯಶ್ರೀ ಬಶೆಟ್ಟಿ ನೆರವೇರಿಸಿದರೆ ಷಟಸ್ಥಲ ಧ್ವಜವನ್ನು ಬಸವ ಬಾಂಧವ್ಯ ಬಳಗದ ಅಧ್ಯಕ್ಷ ಬಾಬುರಾವ್ ದಾನಿ ನೆರವೇರಿಸಿದರು.ಮೆರವಣಿಗೆಯ ನೇತೃತ್ವವನ್ನು ರಾಜೇಂದ್ರಕುಮಾರ ಮಣಗೀರೆ ವಹಿಸಿದ್ದರು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಎಸ್‌ಬಿ ಸಜ್ಜನಶೆಟ್ಟಿ, ಪ್ರತಿಭಾ ಚಾಮಾ, ಜಯದೇವಿ ಯದಲಾಪುರೆ, ಸೋಮಶೇಖರ ಪಾಟೀಲ್ ಗಾದಗಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ಯುವಕರು ಮಹಿಳೆಯರು ಉಪಸ್ಥಿತರಿದ್ದರು