ಸಾರಾಂಶ
ಗದಗ: ೧೯೦೩ರ ಒರಿಸ್ಸಾದ ಏಕೀಕರಣದ ಚಿಂತನೆಗಳು ಹಾಗೂ ೧೯೦೫ರ ವಂಗ-ಭಂಗ ಚಳವಳಿಗಳು ಕರ್ನಾಟಕದ ಏಕೀಕರಣಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಒದಗಿಸಿದವು ಎಂದು ಹುಲಕೋಟಿಯ ಕೆ.ಎಚ್. ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಧಾ ಕೌಜಗೇರಿ ಹೇಳಿದರು.
ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಗಾರ ಇಲಾಖೆ, ಪ್ರಾದೇಶಿಕ ಪತ್ರಗಾರ ಕಚೇರಿ ಧಾರವಾಡ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ಏಕೀಕರಣ ಚಳವಳಿ ಕುರಿತು ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.೧೮೯೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ೧೯೧೫ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತುಗಳು ಅನ್ಯಾದೃಶ್ಯ ಕೊಡುಗೆಗಳನ್ನು ನೀಡಿದವು. ರ.ಹಾ.ದೇಶಪಾಂಡೆ, ಗದಿಗೆಯ್ಯ ಹೊನ್ನಾಪುರಮಠ, ರೊದ್ದ ಶ್ರೀನಿವಾಸರಾಯರು, ಕಡಪ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, ಹುಯಲಗೋಳ ನಾರಾಯಣರಾಯರು ಮೊದಲಾದ ಮಹನೀಯರು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದರು. ೧೯೫೬ ನವೆಂಬರ್ ೧ರಂದು ವಿಶಾಲ ಮೈಸೂರು ರಾಜ್ಯ ನಿರ್ಮಾಣಗೊಂಡಿತು. ೧೯೭೩ ನವೆಂಬರ್ ೧ರಂದು ಕರ್ನಾಟಕ ರಾಜ್ಯ ನಿರ್ಮಾಣವಾಯಿತು ಎಂದು ತಿಳಿಸಿದರು.
ಈ ವೇಳೆ ಹುನಗುಂದದ ಎಸ್.ಆರ್.ವಸ್ತ್ರದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಆರ್. ನಾಗಣ್ಣನವರ ಅವರು, ಕರ್ನಾಟಕ ಏಕೀಕರಣದಲ್ಲಿ ಕಿತ್ತೂರು ಕರ್ನಾಟಕದ ಸಂಘ ಸಂಸ್ಥೆಗಳ ಪಾತ್ರ ವಿಷಯದ ಕುರಿತು ಪ್ರಬಂಧವನ್ನು ಮಂಡಿಸಿದರು. ಉಪನ್ಯಾಸಕಿ ಡಾ. ಶೈಲಜಾ ಕರಡಿ ಅವರು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ ಕಿತ್ತೂರು ಕರ್ನಾಟಕದ ಮಹನೀಯರು ವಿಷಯದ ಕುರಿತು ಪ್ರಬಂಧವನ್ನು ಮಂಡಿಸಿದರು.ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ರಾಜ್ಯಶಾಸನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಹನುಮಾನ್ ಶ್ರೀ ಗೋಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾ. ಶಿವಪ್ಪ ಕುರಿ, ಮಂಜುಳಾ ಎಲಿಗಾರ, ಡಾ. ಲಕ್ಷ್ಮಣ ಮುಳುಗುಂದ, ಡಾ. ಅಪ್ಪಣ್ಣ ಹಂಜೆ, ಪರಶುರಾಮ ಕಟ್ಟಿಮನಿ, ಕರಿಯಪ್ಪ ಕೊಡವಳ್ಳಿ, ಹನುಮೇಶ, ಶಶಿಕುಮಾರ್.ಎನ್.ಟಿ., ಶಿವಾಜಿ ಬಿನ್ನಾಳ ಸೇರಿದಂತೆ ಇತರರು ಇದ್ದರು. ರಮೇಶ್ ಹುಲಕುಂದ ನಿರ್ವಹಿಸಿದರು. ಸಂತೋಷ ಲಮಾಣಿ ವಂದಿಸಿದರು.