ವರುಣಾರ್ಭಟ: ಮೈದುಂಬಿ ಹರಿಯುತ್ತಿವೆ ನದಿಗಳು

| N/A | Published : Sep 28 2025, 02:01 AM IST

ಸಾರಾಂಶ

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಜಿಲ್ಲೆಯ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿ ಆಗಿರುವ ಹಿನ್ನೆಲೆ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ.

 ಬೆಳಗಾವಿ : ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಜಿಲ್ಲೆಯ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿ ಆಗಿರುವ ಹಿನ್ನೆಲೆ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ.

ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿ ನಿರ್ಮಿಸಿರುವ ನವಿಲು ತೀರ್ಥ ಜಲಾಶಯದಲ್ಲಿ ನಿರಂತರ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿ ಜಲಾಶಯ ಭರ್ತಿ ಆಗಿದೆ. 2079.50 ಅಡಿಸಾಮರ್ಥ್ಯ ಹೊಂದಿರುವ ನವಿಲು ತೀರ್ಥ ಜಲಾಶಯದಲ್ಲಿ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ 5000 ಕ್ಯುಸೆಕ್‌ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗಿದೆ. ಸದ್ಯ 2194 ಕ್ಯು. ಒಳಹರಿವು ಇದೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯ ಕೂಡ ಬಹುತೇಕ ಭರ್ತಿಯಾಗಿದೆ. 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 2,174.96 ಅಡಿ ನೀರು ಸಂಗ್ರಹವಾಗಿದೆ. 2894 ಕ್ಯುಸೆಕ್‌ ಒಳಹರಿವು ಇದೆ. 1374 ಕ್ಯು. ಹೊರ ಹರಿವು ಇದೆ. ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡುತ್ತಿರುವುದರಿಂದ ಮಲಪ್ರಭಾ ನದಿ ಸೇರಿದಂತೆ ಇನ್ನಿತರ ನದಿಗಳ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಸೂಚನೆ‌ ನೀಡಿದೆ.

ವಿವಿಧೆಡೆ ನಿತಂತರ ಮಳೆ:

ಬೆಳಗಾವಿ ನಗರ ಸೇರಿದಂತೆ ಹಲವು ತಾಲೂಕುಗಳಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ. ಶನಿವಾರವೂ ಸತತ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲ ತಾಲೂಕಿನ ಗ್ರಾಮಗಳಲ್ಲಿ ಸೋಯಾಬಿನ್, ಉದ್ದ, ಹೆಸರು ಸೇರಿ ಮತ್ತಿತರ ಬೆಳೆಗಳಿಗೆ ಕೊಯ್ಲಿಗೆ ಮಳೆ ಅಡ್ಡಿ ಆಗಿದ್ದು, ಬೆಳೆ ಹಾನಿ ಭೀತಿಯಲ್ಲಿ ರೈತರಿದ್ದಾರೆ.

Read more Articles on