ವೀರಗಲ್ಲು ವಿಜಯನಗರ ಕಾಲದ್ದು: ಇತಿಹಾಸ ಸಂಶೋಧಕ ಶ್ಯಾಮಸುಂದರ

| Published : Feb 12 2024, 01:30 AM IST

ಸಾರಾಂಶ

ಕ್ರಿ.ಶ. ೧೪೨೩ನೇ ಇಸ್ವಿಗೆ ಸರಿಹೊಂದುವ ಅಂಕೋಲೆಯ ಜಿ.ಸಿ. ಕಾಲೇಜಿನಲ್ಲಿರುವ ಎರಡು ಶಾಸನಗಳು ತಿಮ್ಮಣ್ಣ ನಾಯಕ ಒಡೆಯನನ್ನು ಉಲ್ಲೇಖಿಸುತ್ತವೆ. ಹಾಗೆಯೇ ಗಡದಗುಡ್ಡದಲ್ಲಿರುವ ಒಂದು ಜೀರ್ಣ ಶಾಸನದಲ್ಲಿ ತಿಮ್ಮಣ್ಣ ನಾಯಕರ ನಿರೂಪದಿಂದ ಮಾರ ನಡೆಸಿದ ಎಂದು ದಾಖಲಿಸಿದೆ

ಅಂಕೋಲಾ: ಇತ್ತೀಚೆಗೆ ಕಳುವಾಗಿದ್ದ ನಂತರ ಪೊಲೀಸ್ ಕಾರ್ಯಾಚರಣೆ ಮತ್ತು ಸಂಧಾನದ ಮೂಲಕ ಸ್ವಸ್ಥಾನ ಸೇರಿದ ಹಿಚಕಡ ಗ್ರಾಮದ ವೀರಮಾಸ್ತಿಗಲ್ಲು ವಿಜಯನಗರ ಕಾಲದ್ದು ಎಂದು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ತಿಳಿಸಿದ್ದಾರೆ.

ಗ್ರಾಮದ ಮಾಸ್ತಿಮನೆಯ ಇತಿಹಾಸ ತಿಳಿಯುವ ಕುತೂಹಲದಿಂದ ಗ್ರಾಮಸ್ಥರ ಪರವಾಗಿ ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ, ದೇವಸ್ಥಾನದ ಮೊಕ್ತೇಸರರಾದ ವಿಠೋಬ ಬೊಮ್ಮಯ್ಯ ನಾಯಕ, ಉಪನ್ಯಾಸಕ ಮಹೇಶ ಬಿ. ನಾಯಕ, ರಂಜನ ನಾಯಕ ಮತ್ತಿತರರ ವಿನಂತಿಯ ಮೇರೆಗೆ ಮಾಸ್ತಿಮನೆ ಎಂದು ಕರೆಯುವ ಹಿಚಕಡದ ಆಟದ ಮೈದಾನದ ಪಕ್ಕದಲ್ಲಿನ ಗೊಂಬಳೆ ಮರದ ಕೆಳಗಿರುವ ವೀರಮಾಸ್ತಿ ಶಿಲೆಯ ಅಧ್ಯಯನ ನಡೆಸಿದ ಗೌಡರು ಇದು ಸುಮಾರು ಹದಿನೈದನೇ ಶತಮಾನದ ಅವಧಿಯದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಶಿಲೆಯಲ್ಲಿ ಎರಡು ಸಾಲಿನ ಶಾಸನವಿದ್ದು ತಿಂಮಯ್ಯ ನಾಯಕ ಮರಣವಪ್ಪಿದಾಗ ಸಿರಿಯಣ್ಣಯಿ ಸತಿ ಹೋದಳು’ ಎಂದು ವಿಜಯನಗರ ಕಾಲದ ಲಿಪಿಯಲ್ಲಿ ಬರೆದಿದ್ದಾರೆ. ಈ ಲಿಪಿಯ ಆಧಾರದಿಂದ ಹಾಗೂ ಶಿಲೆಯ ಲಲಾಟ ಭಾಗದಲ್ಲಿ ಶಿವಲಿಂಗ ಪೂಜಿಸುತ್ತಿರುವ ಯತಿ ಉದ್ದವಾದ ಜಟೆ ಹೊಂದಿದ್ದಾನೆ. ಇದರಿಂದ ಆತನೊಬ್ಬ ಕಾಳಾಮುಖ ಯತಿ ಎನ್ನುವುದು ಸ್ಪಷ್ಟವಾಗುತ್ತದೆ. ವಿಜಯನಗರದ ಸಂಗಮ ವಂಶದವರೆಗೆ ಈ ಭಾಗದಲ್ಲಿ ಕಾಳಾಮುಖರ ಪ್ರಭಾವ ಗಾಢವಾಗಿತ್ತು ಎನ್ನಲು ಅನೇಕ ಆಧಾರಗಳಿವೆ. ಹೀಗಾಗಿ ಈ ಶಿಲೆಯ ಕಾಲ ೧೫ನೇ ಶತಮಾನ ಎಂದು ನಿರ್ಧರಿಸಲಾಗಿದೆ. ತಿಂಮಯ್ಯ ನಾಯಕ ಯಾರು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೌಡರು, ಕ್ರಿ.ಶ. ೧೪೨೩ನೇ ಇಸ್ವಿಗೆ ಸರಿಹೊಂದುವ ಅಂಕೋಲೆಯ ಜಿ.ಸಿ. ಕಾಲೇಜಿನಲ್ಲಿರುವ ಎರಡು ಶಾಸನಗಳು ತಿಮ್ಮಣ್ಣ ನಾಯಕ ಒಡೆಯನನ್ನು ಉಲ್ಲೇಖಿಸುತ್ತವೆ. ಹಾಗೆಯೇ ಗಡದಗುಡ್ಡದಲ್ಲಿರುವ ಒಂದು ಜೀರ್ಣ ಶಾಸನದಲ್ಲಿ ತಿಮ್ಮಣ್ಣ ನಾಯಕರ ನಿರೂಪದಿಂದ ಮಾರ ನಡೆಸಿದ ಎಂದು ದಾಖಲಿಸಿದೆ. ಹೀಗೆ ಅಂಕೋಲೆಯ ಭಾಗದಲ್ಲಿರುವ ೧೫ನೇ ಶತಮಾನದ ಶಾಸನಗಳಲ್ಲಿ ತಿಮ್ಮಣ್ಣ ಎನ್ನುವ ವ್ಯಕ್ತಿಯ ಉಲ್ಲೇಖಗಳು ದೊರೆಯುತ್ತವೆ. ಹಿಚಕಡದ ಈ ಮಾಸ್ತಿಗಲ್ಲಿನಲ್ಲಿ ಉಲ್ಲೇಖಿಸುವ ತಿಂಮಯ್ಯ ಮತ್ತು ಇತರ ಶಾಸನಗಳಲ್ಲಿನ ತಿಮ್ಮಣ್ಣ ನಾಯಕ ಒಬ್ಬನೆಯೋ ಅಥವಾ ಬೇರೆ-ಬೇರೆಯೋ ಎನ್ನಲು ಇನ್ನಷ್ಟು ದಾಖಲೆಗಳ ಅಗತ್ಯವಿದೆ. ಕೇವಲ ಈ ಒಂದು ಶಿಲೆಯಲ್ಲಿನ ಉಲ್ಲೇಖದಿಂದ ಅವರ ವಂಶಾವಳಿ ಗುರುತಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದರು.

ಕ್ರಿಶ ೧೪೨೪ರ ಅವಧಿಯ ವಿಜಯನಗರದ ಇಮ್ಮಡಿದೇವರಾಯನ ಬೆಳಸೆಯ ಶಾಸನದಲ್ಲಿ ಕ್ರಿಯಾಶಕ್ತಿಗೆ ದಾನ ನೀಡಿರುವುದನ್ನು ತಿಳಿಸುವಾಗ ಹಿಚಕಡ ಮತ್ತು ಕಣಗಿಲ ಗ್ರಾಮಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ವಿಜಯನಗರದ ಅವಧಿಯಲ್ಲಿ ಹಿಚಕಡ ಒಂದು ಪ್ರಮುಖ ಗ್ರಾಮವಾಗಿತ್ತೆಂದು ದೃಢಪಡುತ್ತದೆ.

ಅಮ್ಮನವರ ದೇವಸ್ಥಾನದ ಬಳಿಯಿರುವ ಇನ್ನೊಂದು ಶಿಲೆಯನ್ನು ಪರಿಶೀಲಿಸಿದ ಶ್ಯಾಮಸುಂದರ ಗೌಡ ಇದೂ ಕೂಡ ಒಂದು ವೀರಮಾಸ್ತಿ ಶಿಲೆಯೇ ಆಗಿದೆ. ಇದೂ ಸಹ ವಿಜಯನಗರ ಅವಧಿಯದ್ದೇ ಎಂದು ತಿಳಿಸಿದರು. ಊರಿನ ಪ್ರಾಚೀನತೆಯನ್ನು ದಾಖಲಿಸಲು ಇವೆಲ್ಲ ಪ್ರಮುಖ ಸಾಕ್ಷಿಗಳಾಗಿವೆ. ಯಾವುದೇ ಕಾರಣಕ್ಕೂ ಇವನ್ನು ಊರಿನಿಂದ ಹೊರ ಸಾಗಿಸದಂತೆ ಹಾಳು ಮಾಡದಂತೆ ಸಂರಕ್ಷಿಸಬೇಕಾಗಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು ಎಂದು ಹೇಳಿದರು.