ಡಿ.ದೇವರಾಜ್ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅವ್ಯವಹಾರ ಪ್ರಕರಣ : ವೀರಯ್ಯ ಅಕ್ರಮ ಸಾಬೀತು

| Published : Aug 31 2024, 01:30 AM IST / Updated: Aug 31 2024, 05:33 AM IST

DS Veeraiah
ಡಿ.ದೇವರಾಜ್ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅವ್ಯವಹಾರ ಪ್ರಕರಣ : ವೀರಯ್ಯ ಅಕ್ರಮ ಸಾಬೀತು
Share this Article
  • FB
  • TW
  • Linkdin
  • Email

ಸಾರಾಂಶ

ಡಿ.ದೇವರಾಜ್ ಅರಸು ಟ್ರಕ್‌ ಟರ್ಮಿನಲ್‌ ನಿಗಮದಲ್ಲಿ ನಡೆದಿದೆ ಎನ್ನಲಾದ 39.42 ಕೋಟಿ ರೂ. ಹಗರಣದಲ್ಲಿ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮಾಜಿ ಶಾಸಕ ಡಿ.ಎಸ್.‌ ವೀರಯ್ಯ ಮತ್ತು ಮತ್ತೊಬ್ಬರ ವಿರುದ್ಧ ಸಿಐಡಿ ಆರೋಪಪಟ್ಟಿ ಸಲ್ಲಿಸಿದೆ.  

 ಬೆಂಗಳೂರು :  ಡಿ.ದೇವರಾಜ್ ಅರಸು ಟ್ರಕ್‌ ಟರ್ಮಿನಲ್‌ ನಿಗಮದ (ಡಿಡಿಯುಟಿಟಿಎಲ್‌) ಅವ್ಯವಹಾರ ಪ್ರಕರಣ ಸಂಬಂಧ ನಿಗಮದ ಮಾಜಿ ಅಧ್ಯಕ್ಷರೂ ಆಗಿರುವ ಬಿಜೆಪಿಯ ಮಾಜಿ ಶಾಸಕ ಡಿ.ಎಸ್‌.ವೀರಯ್ಯ ಸೇರಿದಂತೆ ಇಬ್ಬರ ವಿರುದ್ಧ ನ್ಯಾಯಾಲಯಕ್ಕೆ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಆರೋಪ ಪಟ್ಟಿ ಸಲ್ಲಿಸಿದೆ. ತನ್ಮೂಲಕ ಬಿಜೆಪಿ ಸರ್ಕಾರದ ಅ‍ವಧಿಯಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಹಗರಣದ ತನಿಖೆಯನ್ನು ಸಿಐಡಿ ಮುಕ್ತಾಯಗೊಳಿಸಿದ್ದು, ಬಿಜೆಪಿ ನಾಯಕ ವೀರಯ್ಯ ಹಾಗೂ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅಕ್ರಮ ಎಸಗಿರುವುದು ತನಿಖೆಯಲ್ಲಿ ರುಜುವಾತಾಗಿದೆ. ಈ ಇಬ್ಬರ ವಿರುದ್ಧ 250 ಪುಟಗಳ ಪ್ರಾಥಮಿಕ ಹಂತದ ಆರೋಪಪಟ್ಟಿಯನ್ನು ಸಿಐಡಿ ಸಲ್ಲಿಸಿದೆ.

ಟರ್ಮಿನಲ್‌ಗಳ ನವೀಕರಣ ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿ ರು. ಹಣವನ್ನು ಆರೋಪಿಗಳು ದೋಚಿದ್ದಾರೆ. ಈ ಹಣವನ್ನು ಮಧ್ಯವರ್ತಿಗಳ ಮೂಲಕ ನಿಗಮದ ಆಗಿನ ಅಧ್ಯಕ್ಷ ವೀರಯ್ಯ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಸ್ವೀಕರಿಸಿರುವುದು ತನಿಖೆಯಲ್ಲಿ ಸಾಕ್ಷ್ಯಸಮೇತ ಸಾಬೀತಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ಏನಿದು ಪ್ರಕರಣ?:

2021ರ ನವೆಂಬರ್‌ನಿಂದ 2022ರ ಜುಲೈ 11 ವರೆಗೆ ಟ್ರಕ್‌ ಟರ್ಮಿನಲ್‌ ವತಿಯಿಂದ ನಡೆದಿದ್ದ 665 ಕಾಮಗಾರಿಗಳಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ವಿಲ್ಸನ್ ಗಾರ್ಡನ್ ಠಾಣೆಗೆ ಟ್ರಕ್‌ ಟರ್ಮಿನಲ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್‌.ಶಿವಪ್ರಕಾಶ್ ದೂರು ನೀಡಿದ್ದರು. ಕಳೆದ ವರ್ಷ ಈ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಅಂತೆಯೇ ಪ್ರಕರಣದ ತನಿಖೆ ನಡೆಸಿದ ಸಿಐಡಿ, ವೀರಯ್ಯ ಹಾಗೂ ಶಂಕರಪ್ಪ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು.

2ರಿಂದ 10 ಕೋಟಿ ತುಂಡು ಗುತ್ತಿಗೆ ಅಕ್ರಮ:

ಅಕ್ರಮ ನಡೆಸುವ ಸಲುವಾಗಿಯೇ 2021ರಲ್ಲಿ ನಿಗಮದ ನಿರ್ದೇಶಕರ ಸಭೆಯ ನಡಾವಳಿಯನ್ನು ಆಗಿನ ಅಧ್ಯಕ್ಷ ವೀರಯ್ಯ ಹಾಗೂ ಎಂಡಿ ಶಂಕರಪ್ಪ ಬದಲಾಯಿಸಿದ್ದರು. ಅಂತೆಯೇ ಕೆಪಿಟಿಟಿ ಕಾಯ್ದೆ ಅನ್ವಯ ತುರ್ತು ಕಾರ್ಯಗಳಿಗೆ 2 ಕೋಟಿ ರು. ಮೊತ್ತದ ತುಂಡು ಗುತ್ತಿಗೆಯನ್ನು ನೀಡುವ ಅಧಿಕಾರವನ್ನು ನಿಗಮ ಹೊಂದಿದೆ.

ಹಾಗೆಯೇ ಅಧ್ಯಕ್ಷರು ಸೂಚಿಸಿದ ಕಾಮಗಾರಿಗಳನ್ನು ಮಂಜೂರು ಮಾಡಲು ಎಂಡಿಗೆ ಅಧಿಕಾರವಿದೆ ಎಂದು ಬರೆಯುವಂತೆ ಅಂದಿನ ಪ್ರಭಾರಿ ಕಾರ್ಯದರ್ಶಿ ವೆಂಕಟೇಶ್ ರಾವ್ ಮೇಲೆ ಶಂಕರಪ್ಪ ಒತ್ತಡ ಹೇರಿದ್ದರು. ಮೊದಲು 2 ಕೋಟಿ ರು. ಮೊತ್ತದ ಕಾಮಗಾರಿ ಎಂದು ಬರೆದು, ಬಳಿಕ ಅದನ್ನು 10 ಕೋಟಿ ರು. ಎಂದು ತಿದ್ದಿದ್ದರು. ಈ ಗುತ್ತಿಗೆ ಸಂಬಂಧ ಸರ್ಕಾರದ ಪೂರ್ವಾನುಮತಿ ಪಡೆಯುವಂತೆ ನಿರ್ದೇಶಕರ ಸಭೆ ನಿರ್ಣಯಿಸಿದ್ದರೂ ಕೂಡ ನಡಾವಳಿಯನ್ನು ಆರೋಪಿಗಳು ಬದಲಾಯಿಸಿದ್ದರು. ಈ ಕೃತ್ಯ ಎಸಗುವಾಗ ನಡವಳಿ ಪುಟಗಳ ಸಂಖ್ಯೆಯನ್ನು 37 ರಿಂದ 55 ಎಂದು ಕೂಡ ತಪ್ಪಾಗಿ ಬರೆದಿದ್ದರು. ಇದರಿಂದ ನಡಾವಳಿ ತಿದ್ದಿರುವುದು ಸ್ಪಷ್ಟವಾಯಿತು ಎಂದು ಸಿಐಡಿ ಹೇಳಿದೆ.

ಟರ್ಮಿನಲ್‌ಗಳ ನವೀಕರಣ ಕಾಮಗಾರಿಯನ್ನು 6 ಕಂಪನಿಗಳಿಗೆ ಗುತ್ತಿಗೆ ನೀಡಿದ್ದು, ಇದರಲ್ಲಿ ಮೆ.ಎಸ್‌.ಎಸ್‌. ಎಂಟರ್‌ ಪ್ರೈಸಸ್‌, ಮೆ.ವೆನಿಷಾ ಎಂಟರ್‌ ಪ್ರೈಸಸ್‌ ಹಾಗೂ ಮೆ.ಮಯೂರ್‌ ಅಡ್ವರ್ಟೈಸಿಂಗ್ ಕಂಪನಿಗಳಿಗೆ 39.42 ಕೋಟಿ ರು. ಹಣವನ್ನು ಆರೋಪಿಗಳು ವರ್ಗಾಯಿಸಿದ್ದರು. ಈ ಕಂಪನಿಗಳಿಗೆ ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಹಣ ವರ್ಗಾಯಿಸಿ ಬಳಿಕ ವೀರಯ್ಯ ಹಾಗೂ ಶಂಕರಪ್ಪ ಕಿಕ್ ಬ್ಯಾಕ್ ಪಡೆದಿದ್ದರು ಎಂದು ಸಿಐಡಿ ವಿವರಿಸಿದೆ.

9600 ಅಡಿ ವಿಸ್ತೀರ್ಣದ ಸೈಟ್‌ಗಳ ಖರೀದಿ

ಟ್ರಕ್‌ ಟರ್ಮಿನಲ್‌ ಅಕ್ರಮದಲ್ಲಿ ಸಂಪಾದಿಸಿದ ಹಣದಲ್ಲಿ ಉಲ್ಲಾಳದ ಉಪಕಾರ್‌ ಲೇಔಟ್‌ನಲ್ಲಿ 9600 ಚದರ ಅಡಿ ವಿಸ್ತೀರ್ಣದ ನಾಲ್ಕು ನಿವೇಶನಗಳನ್ನು ಖರೀದಿಸಿದ್ದ ವೀರಯ್ಯ, ಆ ನಿವೇಶನಗಳ ಪೈಕಿ ಒಂದರಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಅಲ್ಲದೆ ವೀರಯ್ಯ ಅವರ ಖಾತೆಗೆ 3 ಕೋಟಿ ರು. ಹಾಗೂ ಶಂಕರಪ್ಪರವರ ಸೋದರ ಸಂಬಂಧಿ ಖಾತೆಗೆ 20 ಲಕ್ಷ ರು. ವರ್ಗಾವಣೆಯಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.