ದುಸ್ಥಿತಿಯಲ್ಲಿರುವ ದೇಗುಲಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿ: ಸಂತೋಷ್ ಕುಮಾರ್

| Published : Aug 31 2024, 01:30 AM IST

ದುಸ್ಥಿತಿಯಲ್ಲಿರುವ ದೇಗುಲಗಳ ಅಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿ: ಸಂತೋಷ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಆಗಮದ ಬಗ್ಗೆ ತಿಳಿವಳಿಕೆ ಇಲ್ಲದ ಅದೆಷ್ಟೋ ಮಂದಿ ವಯೋವೃದ್ಧ ಅರ್ಚಕರಿದ್ದಾರೆ. ಅಂತಹ ಅರ್ಚಕರಿಗೆ ಆಗಮ ಶಿಕ್ಷಣದ ಅರಿವು ಮೂಡಿಸಲು ಇಲಾಖೆಯಲ್ಲಿ ಪ್ರತ್ಯೇಕ ಆಗಮ ವಿಭಾಗವಿದ್ದರೂ ಸಹ ಮೈಸೂರು ಮತ್ತು ಮೇಲುಕೋಟೆಯ ಸಂಸ್ಕೃತ ಕಾಲೇಜಿಗಷ್ಟೇ ಸೀಮಿತವಾದಂತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರದ ವಿಚಾರವಾಗಿ ಸಂಘದ ವತಿಯಿಂದ ಸಾಕಷ್ಟು ಪ್ರಯತ್ನಿಸಿದರೂ ಕೂಡ ದುಸ್ಥಿತಿಯಲ್ಲಿರುವ ದೇಗುಲಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅದ್ಯಕ್ಷ ಸಂತೋಷ್‌ ಕುಮಾರ್ ದೂರಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಹುತೇಕ ಮುಜರಾಯಿ ದೇವಸ್ಥಾನಗಳು ಶಿಥಿಲಾವಸ್ಥೆಯಿಂದ ಕೂಡಿವೆ. ಕಿಟಕಿ, ಬಾಗಿಲುಗಳು ಮುರಿದು ಸುಣ್ಣ, ಬಣ್ಣವಿಲ್ಲದೆ ದೇವಾಲಯ ಕಟ್ಟಡಗಳು ಬೀಳುವ ಹಂತ ತಲುಪಿವೆ ಎಂದರು.

ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಕಚೇರಿಗೆ ಅಲೆದು ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ದೇವಸ್ಥಾನದ ಪೂಜಾ ಸಾಮಗ್ರಿಗಳ ನಿರ್ವಹಣೆಗೆಂದು ಅರ್ಚಕರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಸ್ತಿಕ್ ಹಣ ನೀಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ತಲ ತಲಾಂತರದಿಂದ ನಮ್ಮ ಪೂರ್ವಿಕರು ಮಾಡಿಕೊಂಡು ಬರುತ್ತಿರುವ ಅರ್ಚಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಎಲ್ಲ ಅರ್ಚಕರಿಗೆ ತಸ್ತಿಕ್ ಹಣ ಕೊಡುವ ಬದಲಿಗೆ ಗೌರವ ಸಂಭಾವನೆ ಕೊಟ್ಟರೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.

ಅನಾರೋಗ್ಯ ಅಥವಾ ಇನ್ನಿತರೆ ಕಾರಣದಿಂದ ಅರ್ಚಕರು ಮೃತಪಟ್ಟರೆ 2 ಲಕ್ಷ ರು. ಪರಿಹಾರ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಸರ್ಕಾರ ಘೋಷಿಸಿದ ನಂತರ ರಾಜ್ಯದಲ್ಲಿ 1264 ಮಂದಿ ಅರ್ಚಕರು ಮೃತಪಟ್ಟಿದ್ದಾರೆ. ಆದರೆ, ಈವರೆಗೂ ಮೃತಪಟ್ಟಿರುವ ಯಾವೊಬ್ಬ ಅರ್ಚಕರ ಕುಟುಂಬಕ್ಕೂ ಈ ಪರಿಹಾರ ಹಣ ದೊರೆತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.

ಮುಜರಾಯಿ ವ್ಯಾಪ್ತಿಯ ಎ,ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ಅನಾದಿಕಾಲದಿಂದಲೂ ಬ್ರಹ್ಮರಥೋತ್ಸವಗಳು ನಡೆಯುತ್ತಿದ್ದವು. ಅದಕ್ಕಾಗಿ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿತ್ತು. ಎ ಮತ್ತು ಬಿ ದರ್ಜೆಯ ದೇವಾಲಯಗಳು ಆದಾಯದಲ್ಲಿರುವುದರಿಂದ ಇಂದಿಗೂ ಬ್ರಹ್ಮರಥೋತ್ಸವಗಳು ಮುಂದುವರಿಯುತ್ತಿವೆ. ಆದರೆ, ಸಿ ದರ್ಜೆಯ ದೇವಾಲಯಗಳಿಗೆ ಹಣ ಬಿಡುಗಡೆಯಾಗದ ಹಿನ್ನೆಲೆ ಬ್ರಹ್ಮರಥೋತ್ಸವಗಳು ನಿಂತುಹೋಗುತ್ತಿವೆ ಎಂದರು.

ಸಂಘದ ಕಾರ್ಯದರ್ಶಿ ಬಿ.ಕೆ.ಲೋಕೇಶ್‌ಕುಮಾರ್ ಮಾತನಾಡಿ, ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ವಸತಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದ ಸರ್ಕಾರ, ದೊಡ್ಡಬಳ್ಳಾಪುರ ತಾಲೂಕು ಹೊರತುಪಡಿಸಿ ರಾಜ್ಯದ ಬೇರಾವುದೇ ತಾಲೂಕುಗಳ ಅರ್ಚಕರಿಗೆ ವಸತಿ ಸೌಲಭ್ಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಖಜಾಂಚಿ ಪ್ರಸನ್ನಶೈವ ಮಾತನಾಡಿ, ಧಾರ್ಮಿಕದತ್ತಿ ಇಲಾಖೆ ವ್ಯಾಪ್ತಿಯಲ್ಲಿ 32 ಸಾವಿರ ದೇವಸ್ಥಾನಗಳಿದ್ದರೂ ಕೂಡ ಹೆಸರಿಗಷ್ಟೇ ಇಲಾಖೆ ಇದೆ ಎನ್ನುವಂತಾಗಿದೆ. ಕೆಲವೇ ಮಂದಿ ಅರ್ಚಕರಿಗೆ ಆಗಮದ ಬಗ್ಗೆ ತಿಳುವಳಿಕೆಯಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಆಗಮದ ಬಗ್ಗೆ ತಿಳಿವಳಿಕೆ ಇಲ್ಲದ ಅದೆಷ್ಟೋ ಮಂದಿ ವಯೋವೃದ್ಧ ಅರ್ಚಕರಿದ್ದಾರೆ. ಅಂತಹ ಅರ್ಚಕರಿಗೆ ಆಗಮ ಶಿಕ್ಷಣದ ಅರಿವು ಮೂಡಿಸಲು ಇಲಾಖೆಯಲ್ಲಿ ಪ್ರತ್ಯೇಕ ಆಗಮ ವಿಭಾಗವಿದ್ದರೂ ಸಹ ಮೈಸೂರು ಮತ್ತು ಮೇಲುಕೋಟೆಯ ಸಂಸ್ಕೃತ ಕಾಲೇಜಿಗಷ್ಟೇ ಸೀಮಿತವಾದಂತಿದೆ. ಈ ಧೋರಣೆ ಸರಿಯಲ್ಲ. ಗ್ರಾಮೀಣ ಪ್ರದೇಶದ ಮುಜರಾಯಿ ದೇವಾಲಯಗಳ ಅರ್ಚಕರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ರಾಜೀವಲೋಚನ, ಲಕ್ಷ್ಮೀನಾರಾಯಣ, ಎಚ್.ಪಿ.ನಾಗರಾಜು ಇದ್ದರು.