ಧರ್ಮಸ್ಥಳ ಹೆಗ್ಗಡೆಯವರೇ ನಮ್ಮ ರಕ್ಷಿಸಬೇಕು - ಚಿನ್ನಯ್ಯ ಪತ್ನಿ ಮಲ್ಲಿಕಾ

| N/A | Published : Sep 23 2025, 02:08 AM IST

ಧರ್ಮಸ್ಥಳ ಹೆಗ್ಗಡೆಯವರೇ ನಮ್ಮ ರಕ್ಷಿಸಬೇಕು - ಚಿನ್ನಯ್ಯ ಪತ್ನಿ ಮಲ್ಲಿಕಾ
Share this Article
  • FB
  • TW
  • Linkdin
  • Email

ಸಾರಾಂಶ

  ಚಿನ್ನಯ್ಯನನ್ನು, ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟೆಣ್ಣವರ್‌ ಹಾಗೂ ವಿಠಲ ಗೌಡ ಸೇರಿ ದಾರಿತಪ್ಪಿಸಿದ್ದಾರೆ.  ಧರ್ಮಸ್ಥಳ ದೇವಸ್ಥಾನಕ್ಕೆ ಅಪಚಾರ ಹಾಗೂ ಅಪಖ್ಯಾತಿ ತರುವ ನಿಟ್ಟಿನಲ್ಲಿ ನಾವು ಹೇಳಿದಂತೆ ಕೇಳಬೇಕು ಎಂದು ಚಿನ್ನಯ್ಯನಿಗೆ ತಾಕೀತು ಮಾಡಿದ್ದಾರೆ.

  ಮಂಗಳೂರು :  ಧರ್ಮಸ್ಥಳ ಗ್ರಾಮ ಬುರುಡೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿ ಚಿನ್ನಯ್ಯನನ್ನು, ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟೆಣ್ಣವರ್‌ ಹಾಗೂ ವಿಠಲ ಗೌಡ ಸೇರಿ ದಾರಿತಪ್ಪಿಸಿದ್ದಾರೆ. ಧರ್ಮಸ್ಥಳ ದೇವಸ್ಥಾನಕ್ಕೆ ಅಪಚಾರ ಹಾಗೂ ಅಪಖ್ಯಾತಿ ತರುವ ನಿಟ್ಟಿನಲ್ಲಿ ನಾವು ಹೇಳಿದಂತೆ ಕೇಳಬೇಕು ಎಂದು ಚಿನ್ನಯ್ಯನಿಗೆ ತಾಕೀತು ಮಾಡಿದ್ದಾರೆ. ಚಿನ್ನಯ್ಯನ ಜೀವದ ಬಗ್ಗೆ ಅವರಿಗೆ ಕಿಂಚಿತ್ತೂ ದಯೆ ಇಲ್ಲ. ‘ದಮ್ಮಯ್ಯ ಹೆಗ್ಗಡೆಜೀ ‍ಅವರೇ ಚಿನ್ನಯ್ಯನ್ನು ರಕ್ಷಿಸಿ ನನ್ನ ಹತ್ತಿರ ಸೇರಿಸಿ...’ ಎಂದು ಚಿನ್ನಯ್ಯನ ಪತ್ನಿ ಮಲ್ಲಿಕಾ ಅತ್ತು ಗೋಗರೆದಿದ್ದಾರೆ.

ಕನ್ನಡದ ಖಾಸಗಿ ಸುದ್ದಿವಾಹಿನಿಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಮಲ್ಲಿಕಾ, ಇಡೀ ಬುರುಡೆ ಪ್ರಕರಣದ ಕುರಿತು ನಡೆದಿರುವ ಷಡ್ಯಂತ್ರದ ಬಗ್ಗೆ ಪ್ರಸ್ತಾಪಿಸಿದ್ದು, ಪ್ರಸಕ್ತ 3 ದಿನಗಳಿಂದ ಚಿನ್ನಯ್ಯ ಮತ್ತು ತಿಮರೋಡಿ ನಡುವಿನ ಸಂಭಾಷಣೆಯ ವಿಡಿಯೋ ತುಣುಕು ಬಿಡುಗಡೆಯ ಹಿಂದಿನ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ.

ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ಚಿನ್ನಯ್ಯ ಮತ್ತು ನಾನು ಒಂದೇ ಬಾರಿ ಹೋಗಿದ್ದೆವು. ಅಲ್ಲಿ ತಾನು ಹೇಳಿದಂತೆ ಕೇಳಬೇಕು ಎಂದು ಚಿನ್ನಯ್ಯನಿಗೆ ತಿಮರೋಡಿ ಹೇಳಿದ್ದಾರೆ. ಅಲ್ಲಿ ಯಾರಲ್ಲೋ ನಮ್ಮ ಯಜಮಾನರು (ಚಿನ್ನಯ್ಯ) ಫೋನ್‌ನಲ್ಲಿ ಮಾತನಾಡುತ್ತಿದ್ದರು. ಧರ್ಮಸ್ಥಳ ಕಾಡಿನಲ್ಲಿ ಹೆಣಗಳನ್ನು ಯಜಮಾನರು ಹೂತಿಲ್ಲ, ಬದಲು ಶವಗಳನ್ನು ಹೂತ ಬಗ್ಗೆ ತಿಮರೋಡಿ, ಮಟ್ಟೆಣ್ಣೆವರ್‌, ವಿಠಲ ಗೌಡ ಅವರೇ ಗುರುತು ಹಾಕುವಂತೆ ಹೇಳುತ್ತಿದ್ದರು. ಆದರೆ ಉತ್ಖನನ ವೇಳೆ ಚಿನ್ನಯ್ಯ ತೋರಿಸಿದ ಸ್ಥಳಗಳಲ್ಲಿ ತಲೆಬುರುಡೆ ಇರುತ್ತಿರಲಿಲ್ಲ. ಅದೇ ವಿಠಲಗೌಡ ತೋರಿಸಿದ ಜಾಗದಲ್ಲಿ ತಲೆಬುರುಡೆ ಕಂಡುಬರುತ್ತಿತ್ತು. ಅದನ್ನು ಅವರೇ ಮುಂಚಿತವಾಗಿ ತಂದು ಇರಿಸುತ್ತಿದ್ದರು ಎಂದು ತಿಳಿಯಬಹುದು ಎನ್ನುತ್ತಾರೆ ಮಲ್ಲಿಕಾ.

ಮಟ್ಟೆಣ್ಣವರ್‌, ತಿಮರೋಡಿ ಹೇಳಿದ ಹಾಗೆ ಚಿನ್ನಯ್ಯ ಕೇಳಬೇಕಿತ್ತು. ಚಿನ್ನಯ್ಯನ ಬಗ್ಗೆ ಅವರಿಗೆ ಸ್ವಲ್ಪವೂ ಕರುಣೆ ಇರಲಿಲ್ಲ. ಅದು ಹೋದರೆ ಹೋಗಲಿ ಎಂದು ಚಿನ್ನಯ್ಯನ ಬಗ್ಗೆ ತಿಮರೋಡಿ ಹೇಳುತ್ತಿದ್ದರು. ಚಿನ್ನಯ್ಯ ಸತ್ತು ಹೋದರೆ ದೇವಸ್ಥಾನದವರ ಮೇಲೆ ಹೇಳುತ್ತಾರಂತೆ... ‘ಅಯ್ಯೋ ವೀರೇಂದ್ರ ಹೆಗ್ಗಡೆಜೀ ಅವರೇ, ನೀವು ಎಂದರೆ ನಮಗೆ ತುಂಬಾ ಇಷ್ಟ. ಮಂಜುನಾಥ ಸ್ವಾಮಿಯಷ್ಟು ಇಷ್ಟ... ನಮ್ಮ ಯಜಮಾನರು ಚಿನ್ನಯ್ಯನನ್ನು ಕರೆತಂದು ನಮ್ಮತ್ರ ಸೇರಿಸಬೇಕು. ನಿಮ್ಮ ಕಾಲಿಗೆ ಬೀಳ್ತೀನಿ..’ ಎಂದು ಸಂದರ್ಶನ ಕುರ್ಚಿಯಿಂದ ಎದ್ದು ಮಲ್ಲಿಕಾ ಭೂಮಿಗೆ ಸಾಷ್ಟಾಂಗ ನಮಸ್ಕರಿಸುವ ದೃಶ್ಯ ಈ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗಿದೆ.

Read more Articles on