ವಿದ್ಯಾಧರ ರಾವ್ ಜಲವಳ್ಳಿಗೆ ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ

| N/A | Published : Jul 15 2025, 01:45 AM IST / Updated: Jul 15 2025, 01:13 PM IST

ಸಾರಾಂಶ

ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ-2025ಗೆ ಖ್ಯಾತ ಯಕ್ಷಗಾನ ವೇಷಧಾರಿ ವಿದ್ಯಾಧರ ರಾವ್ ಜಲವಳ್ಳಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

 ಉಡುಪಿ :  ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ-2025ಗೆ ಖ್ಯಾತ ಯಕ್ಷಗಾನ ವೇಷಧಾರಿ ವಿದ್ಯಾಧರ ರಾವ್ ಜಲವಳ್ಳಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 

ಪ್ರಶಸ್ತಿಯನ್ನು 19ರಂದು ಸಂಜೆ 3 ಗಂಟೆಗೆ ಉಡುಪಿ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ ಹಾಗೂ ರಾಜಾಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಹೊನ್ನಾವರ ತಾಲೂಕು ಜಲವಳ್ಳಿಯವರಾದ, ಯಕ್ಷರಂಗದ ಡೈನಾಮಿಕ್ ಸ್ಟಾರ್ ಎಂದೇ ಹೆಸರಾದ ಅಭಿನಯ ಚಕ್ರವರ್ತಿ ಬಿರುದಾಂಕಿತ ಜಲವಳ್ಳಿ ವಿದ್ಯಾಧರ ರಾವ್ ಅವರು ಯಕ್ಷಕಲಾವಿದ ವೆಂಕಟೇಶ್ ರಾವ್ - ಕಲ್ಯಾಣಿ ದಂಪತಿಯ ಸುಪುತ್ರ, ಪ್ರೌಢ ಶಿಕ್ಷಣದ ಬಳಿಕ ತಂದೆಯವರಿಂದ ಯಕ್ಷ ಕಲಾಸಕ್ತಿಯನ್ನು ಮೈಗೂಡಿಸಿಕೊಂಡ ಇವರು, ನಂತರ ಯಕ್ಷಗಾನವನ್ನೇ ಬದುಕಾಗಿಸಿಕೊಂಡರು. 

ಆರಂಭಿಕ ಯಕ್ಷಯಾನದಲ್ಲಿ ಗುಂಡಬಾಳ, ಗೋಳಿಗರಡಿ, ಕಮಲಶಿಲೆ ಮೇಳಗಳಲ್ಲಿ ಕಾಣಿಸಿಕೊಂಡ ಇವರು, ನಂತರ ಸಾಲಿಗ್ರಾಮ, ಪೆರ್ಡೂರು ಮೇಳದ ಕಲಾವಿದನಾಗಿ ಅಪಾರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ವಿದ್ಯಾಧರ ಅವರ ನಿರ್ವಹಣೆ ನಿರೂಪಣೆಯಲ್ಲಿ, ಪೌರಾಣಿಕ-ನೂತನ ಪ್ರಸಂಗಗಳ ಪಾತ್ರಗಳಲ್ಲಿ ಅವರದೇ ಆದ ಛಾಪು-ರೂಪು, ನಡೆ-ನುಡಿ, ಬೆರಗು-ಮೆರಗು ಸೃಷ್ಟಿಸಿ ಪಾತ್ರಗಳಿಗೆ ಜೀವ ತುಂಬುತ್ತಾರೆ. ಸುಧನ್ವ, ಅರ್ಜುನ, ಕೌರವ, ಮಾಗಧ, ಭಸ್ಮಾಸುರ, ದುಷ್ಟಬುದ್ಧಿ, ಕಂಸ, ಕರ್ಣ, ಕೀಚಕ, ವಿಶ್ವಾಮಿತ್ರ, ಬಲರಾಮ, ಭದ್ರಸೇನ, ವಾಲಿ ಮೊದಲಾದ ಪಾತ್ರಗಳಲ್ಲಿ ಅವರ ನಟನೆಯ ಶೈಲಿ ಅದ್ಭುತವಾದುದು. ಅವರಿಗೆ ಯಕ್ಷ ಕಲಾಧರ ಪ್ರಶಸ್ತಿ, ಯಕ್ಷರಾಜ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

Read more Articles on