ಫೆ.16ರಂದು ವಿಜೃಂಬಣೆಯ ಅರ್ಕೇಶ್ವರಸ್ವಾಮಿ ರಥೋತ್ಸವ

| Published : Jan 30 2024, 02:02 AM IST

ಸಾರಾಂಶ

ಕಳೆದ ನಾಲ್ಕು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ರಥೋತ್ಸವವನ್ನು ಫೆ.16ರಂದು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಇಂದಿನಿಂದ ಜಾತ್ರೆ ನಡೆಸುವ ಸಂಬಂಧ ತಹಸೀಲ್ದಾರರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಅಗತ್ಯ ಗಮನ ಹರಿಸುವಂತೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರಕಳೆದ ನಾಲ್ಕು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ರಥೋತ್ಸವವನ್ನು ಫೆ.16ರಂದು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಹಳೆ ಎಡತೊರೆ ಕಾವೇರಿ ನದಿ ದಂಡೆಯ ದೇವಾಲಯದಲ್ಲಿ ಸೋಮವಾರ ನಡೆದ ಪುಣ್ಯಾಹವಾಚನ ಪ್ರತಿಷ್ಟಾಂಗ ಹೋಮ, ಪ್ರಾಣ ಪ್ರತಿಷ್ಠೆ ಮತ್ತು ನೂತನ ಕಳಸ ಗೋಪುರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆ ನಡೆಸುವ ಸಂಬಂಧ ಫೆಬ್ರವರಿ ಮೊದಲ ವಾರದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ಸಂಪನ್ನಗೊಂಡಿದ್ದು ನಾಳೆಯಿಂದಲೇ ಜಾತ್ರೆ ನಡೆಸುವ ಸಂಬಂಧ ತಹಸೀಲ್ದಾರರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಅಗತ್ಯ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದೇವಾಲಯದ ಆವರಣದಲ್ಲಿ ಜಾತ್ರಾ ಸಮಯ ನಡೆಯುವ ಜಾನುವಾರು ಜಾತ್ರೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದ್ದು ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಬರುವ ರೈತರಿಗೆ ಮೂಲಭೂತ ಸವಲತ್ತು ಕಲ್ಪಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಅರ್ಕೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡಿದ್ದು ಇದರ ಜತೆಗೆ ಕಾವೇರಿ ನದಿ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಿರುವ ಶಿವನ ಪ್ರತಿಮೆಯ ಕಾಮಗಾರಿಗೆ ವೇಗ ನೀಡಿ ಮುಂದಿನ ವರ್ಷದ ರಥೋತ್ಸವದ ವೇಳೆಗೆ ಪ್ರತಿಮೆ ಅನಾವರಣಗೊಳಲಿದ್ದು, ಈ ಸಂಬಂಧ ಗುತ್ತಿಗೆದಾರರಿಗೆ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಸದಸ್ಯರಾದ ನಟರಾಜು, ಶಂಕರ್ ಸ್ವಾಮಿ, ಶಂಕರ್, ಮಾಜಿ ಸದಸ್ಯ ಕೆ. ವಿನಯ್, ಕೆ.ಎಲ್. ರಾಜೇಶ್, ನಗರ ಯೋಜನಾ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ಮಾಜಿ ನಿರ್ದೇಶಕರಾದ ಕೆ.ಎಸ್. ಮಹೇಶ್, ಸೈಯದ್ ಜಾಬೀರ್, ಕೆ.ಎನ್. ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾರವಿ, ಎಚ್.ವಿ. ರಾಣಿ ಬಾಲಶಂಕರ್, ಟಿಎಪಿಸಿಎಂಎಸ್ ನಿರ್ದೇಶಕ ಎಸ್. ಸಿದ್ದೇಗೌಡ, ಎಚ್.ಪಿ. ಪ್ರಶಾಂತ್, ತಹಸೀಲ್ದಾರ್ ಸಿ.ಎಸ್. ಪೂರ್ಣಿಮ, ತಾಪಂ ಇಒ ಜಿ.ಕೆ. ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ದೇವಾಲಯದ ಪಾರುಪತ್ತೇದಾರ್ ಆರತಿ ಮೊದಲಾದವರು ಇದ್ದರು.