ಸಾರಾಂಶ
ಗ್ರಾಮದಲ್ಲಿ ನೂರಾರು ದಲಿತ ಕುಟುಂಬದವರು ಜೀವನ ನಡೆಸುತ್ತಿದ್ದು, ಈ ಗ್ರಾಮ ಸಂಪರ್ಕ ರಸ್ತೆ ಸಂಪೂರ್ಣ ಹಾಳಾದ ಪರಿಣಾಮ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು, ವಯೋವೃದ್ಧರು, ಜನ, ಜಾನುವಾರುಗಳು ಈ ರಸ್ತೆಯಲ್ಲಿ ಓಡಾಡಲು ಹರ ಸಾಹಸ ಪಡಬೇಕಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕಲ್ಲು ದೇವರಳ್ಳಿ ಗ್ರಾಮದ ರಸ್ತೆ ದುರಸ್ಥಿಗೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.ಸುಮಾರು ನೂರು ಕುಟುಂಬಗಳಿರುವ ಈ ಗ್ರಾಮದ ರಸ್ತೆ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗಟ್ಟಿದ್ದು. ರಸ್ತೆ ದುರಸ್ಥಿಗಾಗಿ ಗ್ರಾಮಸ್ಥರು ಹಲವು ಬಾರಿ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಸೋಮವಾರ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಸ್ಥರು, ಗ್ರಾಮದಲ್ಲಿ ನೂರಾರು ದಲಿತ ಕುಟುಂಬದವರು ಜೀವನ ನಡೆಸುತ್ತಿದ್ದು, ಈ ಗ್ರಾಮ ಸಂಪರ್ಕ ರಸ್ತೆ ಸಂಪೂರ್ಣ ಹಾಳಾದ ಪರಿಣಾಮ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು, ವಯೋವೃದ್ಧರು, ಜನ, ಜಾನುವಾರುಗಳು ಈ ರಸ್ತೆಯಲ್ಲಿ ಓಡಾಡಲು ಹರ ಸಾಹಸ ಪಡಬೇಕಾಗಿದೆ. ರಸ್ತೆಯ ಇಕ್ಕೇಲಗಳಲ್ಲಿ ನಿರ್ಮಿಸಿರುವ ಚರಂಡಿ ಸಂಪೂರ್ಣ ಹಾಳಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ನಿಲ್ಲುತ್ತಿದ್ದು, ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ ಎಂದರು.ರಸ್ತೆ ಹಾಗೂ ಚರಂಡಿ ಹಾಳಾದ ಪರಿಣಾಮ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದರಿಂದಾಗಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದು, ಸಂಬಂಧಪಟ್ಟವರು ಶೀಘ್ರ ಇತ್ತ ಗಮನಹರಿಸಿ ರಸ್ತೆ ಹಾಗೂ ಚರಂಡಿಯನ್ನು ದುರಸ್ಥಿಗೊಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸೀಗೆ ಗ್ರಾಮದ ಕೃಷ್ಣ, ಸುರೇಶ್, ಮಂಜು, ಲಕ್ಷ್ಮಣ್, ಸಾವಿತ್ರಮ್ಮ, ಲಕ್ಷ್ಮಮ್ಮ, ಮೀನಾಕ್ಷಿ, ಗೀತಾ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.