ಸಾರಾಂಶ
ಹಾವೇರಿ: ವಿಶ್ವದ ಸೃಷ್ಟಿತಕರ್ತರಾದ ವಿಶ್ವಕರ್ಮರು ಭಗವಾನ ವಿಶ್ವಕರ್ಮ ಎಂದೇ ಪರಿಗಣಿಸಲಾಗಿದ್ದು ವಾಸ್ತುಶಿಲ್ಪ ಕುಶಲಕರ್ಮಿ ಕಲೆಯ ಮೂಲ ಕರ್ತೃವಾಗಿದ್ದು ಶಿವ ವಿಷ್ಣುವಿನ ಅಸ್ತ್ರಗಳನ್ನೆ ನೀಡಿದವರು ಎಂಬ ಪ್ರತೀತಿ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ, ಭಗತ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಸತೀಶ ತಿಳಿಸಿದರು.ಹಾವೇರಿಯ ಭಗತ್ ಅಕಾಡೆಮಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಘಟಕ ಆಯೋಜಿಸಿದ ಭಗವಾನ್ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ವಿಶ್ವಕರ್ಮರ ಪೂಜೆ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಸೃಷ್ಟಿಕರ್ತ ವಿಶ್ವಕರ್ಮರನ್ನು ವಾಸ್ತು ಶಿಲ್ಪ ಹಾಗೂ ಯಾಂತ್ರಿಕ ಕಾರ್ಯದ ದೇವರೆಂದೇ ಪೂಜಿಸಲಾಗುತ್ತಿದೆ. ಕೌಶಲ್ಯಕ್ಕಾಗಿ ವಿಶ್ವಕರ್ಮರಿಗೆ ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮರನ್ನು ಇಡೀ ಜಗತ್ತಿನ ಜನಾಂಗವೆಲ್ಲರೂ ಪೂಜಿಸುವಂತಹ ಮಹಾತ್ಮರಾಗಿದ್ದು ಯಾವುದೇ ಮಹಾತ್ಮರನ್ನು ಜಾತಿ ಹೆಸರಿನಲ್ಲಿ ಗುರುತಿಸುವ ವಿಚಾರಗಳು ದೂರವಾಗಬೇಕು ಎಂದರು.ಶಸಾಪ ತಾಲೂಕು ಘಟಕದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಅಧ್ಯಕ್ಷತೆವಹಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಶರಣ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವ ಒಂದು ಶ್ರದ್ಧೆಯ ಸಂಸ್ಥೆ. ಒಳ್ಳೆಯ ಆಚಾರ ವಿಚಾರಗಳನ್ನು ಸಮಾಜಮುಖಿಯಾಗಿಸುವ ಕಾರ್ಯದಲ್ಲಿ ಎಲ್ಲರೂ ಒಟ್ಟಾಗಿ ಮುನ್ನಡಿ ಇಡೋಣ. ಸಮಾಜದ ಹಿತಕ್ಕಾಗಿ ತೀರ ಅವಶ್ಯವಾಗಿ ಆಲೋಚಿಸುವ ಕಾಲ ಇದಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವಕರ್ಮರ ವಾಸ್ತು ಶಿಲ್ಪ ಬಳುವಳಿಯನ್ನು ನಾವೆಲ್ಲ ನೆನೆಯಲೇಬೇಕು. ಭಾರತದಲ್ಲಿ ವಾಸ್ತು ಶಿಲ್ಪ ಅಗ್ರಣೀಯ ಮನ ಮೋಹಕವಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಅತಿಥಿಯಾಗಿ ಮಾತನಾಡಿ, ಇಡೀ ಜಗತ್ತಿನಲ್ಲಿ ದೈವೀ ಶಕ್ತಿ ಕೇಂದ್ರವೆಂದರೆ ಅದು ಭಾರತವೇ ಆಗಿದೆ. ಇಲ್ಲಿ ಒಳ್ಳೆಯದು ಒಳ್ಳೆಯವರನ್ನೆಲ್ಲ ದೇವರಾಗಿ ಪೂಜಿಸುವ, ಆಚರಿಸುವ, ಅನುಸರಿಸುವ ಶ್ರದ್ಧೆ ಇದೆ. ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡಿದ ಮಹಾತ್ಮರು ಭಾರತದಲ್ಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಡೀ ಜಿಲ್ಲೆಯಾದ್ಯಂತ ಶಾಲೆ ಕಾಲೇಜು, ಮನೆಯಲ್ಲಿ ಮಹಾಮನೆ, ಶರಣ ಸಂಗಮಗಳ ಮೂಲಕ ವಚನಗಳ ಪ್ರಸಾರಕ್ಕೆ ಮುಂದಾಗಿದೆ. ಎಲ್ಲರ ಸಹೃದಯದ ಸಹಕಾರದ ಮೂಲಕ ಇದನ್ನು ಯಶಸ್ವಿಗೊಳಿಸೋಣ ಎಂದರು.ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ದ್ರಾಕ್ಷಾಯಣಮ್ಮ ಗಾಣಿಗೇರ ಮಾತನಾಡಿ, ಇಡೀ ಜಿಲ್ಲೆಯಾದ್ಯಂತ ಶರಣ ಸಾಹಿತ್ಯ ಪರಿಷತ್ತಿಗೆ ಪೂರಕವಾದ ಚಿಂತನೆ ಹಾಗೂ ಕ್ರಿಯಾಶೀಲತೆ ಮೂಲಕ ಕದಳಿಮಹಿಳಾ ವೇದಿಕೆ ಕಟ್ಟಬೇಕಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಕದಳಿ ಮಹಿಳಾ ವೇದಿಕೆಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಶರಣ ಚಿಂತನೆಗಳನ್ನು ಪ್ರಸಾರ ಮಾಡಲು ಮುಂದಾಗಬೇಕು. ಶೀಘ್ರ ಜಿಲ್ಲೆಯ ಕದಳಿ ವೇದಿಕೆಯ ಸಭೆ ಕರೆದು ಕಾರ್ಯ ಸೂಚಿ ರೂಪಿಸಲಾಗುವುದು ಎಂದರು.ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಚಂದ್ರಶೇಖರ ಮಾಳಗಿ, ಡಾ.ನಾಗರಾಜ ದ್ಯಾಮನಕೊಪ್ಪ, ಕೆ.ಎಂ.ಬಿಜಾಪೂರ, ಎಸ್.ಎಂ.ಮಠಪತಿ, ಅಶೋಕ ಉಪಲಿ, ಅಮೃತಮ್ಮ ಶೀಲವಂತರ, ಲತಾ ಪಾಟೀಲ, ಅನಿತಾ ಹರನಗಿರಿ, ಜ್ಯೋತಿ ಬಸೆಟ್ಟಿ, ಶೋಭಾ ಮೇವುಂಡಿಮಠ, ನೇತ್ರಾವತಿ ಅಂಗಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.