ದೇಶದ ಭದ್ರತೆ, ಸುರಕ್ಷತೆಗೆ ಬಿಜೆಪಿಗೆ ಮತ ನೀಡಿ

| Published : Apr 24 2024, 02:28 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದೊಂದಿಗೆ ೨೮ ಸ್ಥಾನ ಗೆಲ್ಲಲಿದೆ

ಶಿರಹಟ್ಟಿ: ದೇಶದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅನಿವಾರ್ಯವಾಗಿದೆ. ಈ ದೇಶದ ಜನ ಕಳೆದ ಹತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಜಗತ್ತಿಗೆ ಮಾದರಿಯಾಗಿದ್ದು, ಆರ್ಥಿಕವಾಗಿ ವಿಶ್ವದಲ್ಲಿಯೇ ೩ನೇ ರಾಷ್ಟ್ರವಾಗಿ ಹೊರ ಹೊಮ್ಮುವ ಕಾಲ ಸನ್ನಿಹಿತವಾಗಿದೆ ಎಂದು ಹಾವೇರಿ- ಗದಗ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿರಹಟ್ಟಿ ತಾಲೂಕಿನ ಮಾಗಡಿ, ಕಡಕೋಳ, ಛಬ್ಬಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದೊಂದಿಗೆ ೨೮ ಸ್ಥಾನ ಗೆಲ್ಲಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಮೂಲಕ ಪಂಗನಾಮ ಹಾಕಿದ್ದು, ಲೋಕಸಭಾ ಚುನಾವಣೆಯಲ್ಲಿ ಇದು ನಡೆಯುವುದಿಲ್ಲ. ದೇಶಕ್ಕೆ ಮೋದಿಯೇ ಗ್ಯಾರಂಟಿ. ಆರ್ಥಿಕವಾಗಿ ದಿವಾಳಿ ಎದ್ದಿರುವ ರಾಜ್ಯ ಸರ್ಕಾರ ನೌಕರರ ಸಂಬಳ ಕೊಡಲೂ ದುಡ್ಡಿಲ್ಲದಂತಹ ಸ್ಥಿತಿಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ಕೊಲೆ,ಸುಲಿಗೆ, ದೌರ್ಜನ್ಯ, ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯೇ ಕಾನೂನು ಮತ್ತು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಮತದಾರರು ಕಾಂಗ್ರೆಸ್ ಪೊಳ್ಳು ಘೋಷಣೆಗಳಿಗೆ ಮೋಸ ಹೋಗದೇ ದೇಶದ ಸಮಗ್ರತೆ, ಏಕತೆ, ಸೌಹಾರ್ದತೆಗಾಗಿ ೩ನೇ ಬಾರಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಾ ಜನರನ್ನು ಮರಳು ಮಾಡಲು ಹೊರಟಿದೆ. ಕೇವಲ ಮಾತಿನ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ದೇಶದ ಸಮಗ್ರ ಅಭಿವೃದ್ಧಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಶಾಸಕ ಡಾ. ಚಂದ್ರು ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್‌, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಜಾನು ಲಮಾಣಿ, ಎಂ.ಎಸ್.ದೊಡ್ಡಗೌಡರ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ, ಪ್ರವೀಣಗೌಡ ಪಾಟೀಲ, ಸಣ್ಣವೀರಪ್ಪ ಹಳ್ಳೆಪ್ಪನವರ, ಚಂದ್ರಕಾಂತ ನೂರಶೆಟ್ಟರ, ಯಲ್ಲಪ್ಪ ಇಂಗಳಗಿ, ಅಶೋಕ ವರವಿ, ರಾಜು ಕಪ್ಪತ್ತನವರ, ಬಿ.ಡಿ. ಪಲ್ಲೇದ ಸೇರಿದಂತೆ ಅನೇಕರು ಇದ್ದರು.