ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮೇ ತಿಂಗಳ ಅಂತ್ಯದವರೆಗೆ ಯಾವುದೇ ಕಾರಣಕ್ಕೂ ಹೇಮಾವತಿ ಜಲಾಶಯದಿಂದ ಕಾಲುವೆಗಳ ಮೂಲಕ ತಾಲೂಕಿನ ಕೆರೆ- ಕಟ್ಟೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಇಲಾಖೆ ಇಂಜಿನಿಯರ್ ಗಳು ತಿಳಿಸಿದರು.ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅಧ್ಯಕ್ಷತೆಯ ಸಭೆಯಲ್ಲಿ ರೈತ ಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆ ಇಂಜಿನಿಯರುಗಳ ನಡುವೆ ನೀರು ಬಿಡುವ ವಿಚಾರವಾಗಿ ಚರ್ಚೆ ನಡೆಸಿದರು. ಬಿರು ಬೇಸಿಗೆಯಲ್ಲಿ ಜನ- ಜಾನುವಾರುಗಳು ಮತ್ತು ಪ್ರಾಣಿ- ಪಕ್ಷಿಗಳ ಸಂರಕ್ಷಣೆಗಾಗಿ ಹೇಮಾವತಿ ಜಲಾಶಯದ ಎ.ಜೆ.ರಾಮಚಂದ್ರ ರಾವ್ ನಾಲೆಗೆ ನೀರು ಹರಿಸಿ ತಾಲೂಕಿನ ಕೆರೆ- ಕಟ್ಟೆಗಳನ್ನು ಹೇಮೆ ನೀರಿನಿಂದ ತುಂಬಿಸುವಂತೆ ತಾಲೂಕಿನ ರೈತರು ಹಲವು ದಿನಗಳಿಂದ ಒತ್ತಾಯಿಸಿ ಪಟ್ಟಣದಲ್ಲಿ ಹೋರಾಟದ ಮಾರ್ಗ ಹಿಡಿದಿದ್ದರು.
ತಹಸೀಲ್ದಾರ್ ಮನವಿ ಮೇರೆಗೆ ನಡೆದ ಸಭೆಯಲ್ಲಿ ರೈತ ನಾಯಕ ಎಂ.ವಿ.ರಾಜೇಗೌಡ ಮಾತನಾಡಿ, ಹೇಮಾವತಿ ನೀರಿಗಾಗಿ ರೈತರು ಪ್ರತಿವರ್ಷ ಹೋರಾಟ ಮಾಡಬೇಕಾಗಿದೆ. ಯಾವುದೇ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸದಿದ್ದರೂ ತುಮಕೂರು ಭಾಗಕ್ಕೆ ನೀರು ಹರಿಸುವ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ನೀರು ಬಿಡದೆ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.ನಿಯಮಾನುಸಾರ ಬೇಸಿಗೆಯಲ್ಲಿ ನೀರು ಹರಿಸದೆ ಮಳೆಗಾಲ ಆರಂಭವಾದಾಗ ನೀರು ಹರಿಸುತ್ತೇನೆಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ತಕ್ಷಣ ಹೇಮಾವತಿ ಜಲಾಶಯದಿಂದ ತಾಲೂಕಿನ ಕೆರೆ- ಕಟ್ಟೆಗಳಿಗೆ ನೀರು ತುಂಬಿಸಿ ಜನ- ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು.
ಅಧೀಕ್ಷಕ ಇಂಜಿನಿಯರ್ ಆರ್.ಡಿ.ಗಂಗಾಧರ್ ಮಾತನಾಡಿ, ಹೇಮಾವತಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು, ಹೇಮಗಿರಿ ನದಿ ಅಣೆಕಟ್ಟೆ ನಾಲೆಗಳಿಗೆ ಒಂದಷ್ಟು ನೀರನ್ನು ಬೇಸಿಗೆಯಲ್ಲಿ ಹರಿಸಲಾಗುತ್ತಿದೆ. ಉಳಿದ ನೀರನ್ನು ತುರ್ತು ಕುಡಿಯುವ ನೀರು ಪೂರೈಕೆಗಾಗಿ ಜಲಾಶಯದಲ್ಲಿ ಮೇ ತಿಂಗಳ ಅಂತ್ಯದವರೆಗೂ ಕಾಯ್ದಿರಿಸಬೇಕಾಗಿದೆ. ಈಗ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದರು.ಒಂದು ವೇಳೆ ಕೆ.ಆರ್.ಪೇಟೆ ತಾಲೂಕಿನ ರೈತರಿಗೆ 1 ಟಿಎಂಸಿ ನೀರು ಹರಿಸಿದರೆ ನೆರೆಯ ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ಭಾಗದ ರೈತರೂ ನೀರಿಗಾಗಿ ಬೇಡಿಕೆ ಇಡುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೇಮಾವತಿ ಜಲಾಶಯದ ಮುಖ್ಯ ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ದೂರವಾಣಿ ಮೂಲಕ ಮಂಡ್ಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದರು. ಜಿಲ್ಲಾಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಎಂ.ಡಿ ಮಹೇಶ್ ಅವರನ್ನು ಸಂಪರ್ಕಿಸಿ ಮುಂದಿನ ವಾರ ಹೇಮಾವತಿ ಜಲಾಶಯದ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಅನಂತರ ಸಭೆ ಅಂತ್ಯಗೊಂಡಿತು.ಸಭೆಯಲ್ಲಿ ತಾಲೂಕಿನ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಂದ್, ವಿಶ್ವನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಹೊನ್ನೇಗೌಡ, ನಾಗೇಗೌಡ, ಮುದ್ದುಕುಮಾರ್, ನಗರೂರು ಕುಮಾರ್, ಸಾಮಾಜಿಕ ಹೋರಾಟಗಾರ ಜಯಣ್ಣ ಸೇರಿದಂತೆ ಹಲವರು ಇದ್ದರು.
------------ನಾಲೆಯನ್ನು ಮುಚ್ಚಿರುವ ಕೋರಮಂಡಲ್ ಕಾರ್ಖಾನೆ: ಪುಟ್ಟೇಗೌಡ ಆರೋಪ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಒಳಭಾಗದಿಂದ ಹಾದು ಹೋಗಿರುವ ಹೇಮಾವತಿ ಜಲಾಶಯದ ಎ.ಜೆ.ರಾಮಚಂದ್ರರಾವ್ ನಾಲೆಗೆ ಸೇರಿದ 54ನೇ ವಿತರಣಾ ನಾಲೆಯನ್ನು ಕಾರ್ಖಾನೆಯವರು ಸಂಪೂರ್ಣ ಮುಚ್ಚಿ ಮುಂದಿನ ರೈತರಿಗೆ ನೀರು ಹೋಗದಂತೆ ಅಡ್ಡಿ ಮಾಡಿದ್ದಾರೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪುಟ್ಟೇಗೌಡ, ನಾಲೆಯನ್ನು ಕಾರ್ಖಾನೆಯವರು ಮುಚ್ಚಿ ರೈತರ ಬದುಕನ್ನೇ ನಾಶಪಡಿಸಿದ್ದರೂ ಕಾರ್ಖಾನೆ ವಿರುದ್ಧ ಯಾವುದೇ ಕ್ರಮ ಜರುಗಿಸದ ನೀರಾವರಿ ಇಲಾಖೆ ಇಂನಿಯರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೋರಮಂಡಲ್ ಸಕ್ಕರೆ ಕಾರ್ಖಾನೆ ಬಳಿ 54ನೇ ವಿತರಣಾ ನಾಲೆ ಮುಚ್ಚಿರುವುದರಿಂದ ಮುಂದಿನ 600 ಎಕರೆ ಪ್ರದೇಶದ ರೈತರ ಭೂಮಿಗೆ ಹೇಮೆ ನೀರು ಹರಿಯುತ್ತಿಲ್ಲ. ರೈತ ಕಾಲುವೆ ವಿರೂಪಗೊಳಿಸಿದರೆ ತಕ್ಷಣವೇ ಆತನ ಮೇಲೆ ಪ್ರಕರಣ ದಾಖಲಿಸುತ್ತೀರಿ. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಕಾಲುವೆ ಮುಚ್ಚಿದ್ದರೂ ಕಂಡೂ ಕಾಣದಂತಿದ್ದೀರಿ ಎಂದು ದೂರಿದರು.
ಪಟ್ಟಣದ ಒಳಚರಂಡಿ ಯೋಜನೆ ಅವ್ಯವಸ್ಥೆಯಿಂದ ಪಟ್ಟಣಿಗರ ಮಲಯುಕ್ತ ನೀರು ಹೊಸಹೊಳಲಿನ ದೊಡ್ಡಕೆರೆ ಸೇರಿ ಕೆರೆ ನೀರು ಕಲುಷಿತವಾಗಿದೆ. ನಿಮ್ಮ ಇಲಾಖೆ ವ್ಯಾಪ್ತಿಗೆ ಸೇರಿದ ನದಿ ಮತ್ತು ಕೆರೆಗಳು ಕಲುಷಿತಗೊಂಡಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೋರಮಂಡಲ್ ಸಕ್ಕರೆ ಕಾರ್ಖಾನೆ ಮತ್ತು ಪುರಸಭೆ ಜನರ ಕುಡಿಯುವ ನೀರನ್ನು ಮಲೀನಗೊಳಿಸಿರುವುದರ ವಿರುದ್ಧ ಪರಿಸರ ಇಲಾಖೆಗೆ ದೂರು ನೀಡಿ, ಪರಿಸರ ಸಂರಕ್ಷಣೆಗಾಗಿ ಹೇಮಾವತಿ ಜಲಾಶಯದ ಇಂಜಿನಿಯರುಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ರೈತಸಂಘ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.