ವಿವಿ ಸಾಗರ ಜಲಾಶಯದಿಂದ ಧರ್ಮಪುರದ 9 ಕೆರೆಗಳಿಗೆ ನೀರು

| Published : Oct 27 2025, 12:15 AM IST

ಸಾರಾಂಶ

ಹಿರಿಯೂರು ತಾಲೂಕಿನ ಹೊಸಹಳ್ಳಿ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಇಂಜಿನಿಯರ್ ಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ವಿವಿ ಸಾಗರ ಜಲಾಶಯ 133 ಅಡಿ ತಲುಪಿ ನಾಲ್ಕನೇ ಬಾರಿ ಕೋಡಿ ಬಿದ್ದು ಜಿಲ್ಲೆಯ ಜನರ ಹರ್ಷಕ್ಕೆ ಕಾರಣವಾಗಿದೆ. ಐದಾರು ದಿನದ ಹಿಂದೆ ಜಲಾಶಯಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರಿನ ಒಳ ಹರಿವಿತ್ತು. ಭಾನುವಾರದ ವರದಿಯಂತೆ 1230 ಕ್ಯೂಸೆಕ್‌ ನಷ್ಟು ನೀರಿನ ಒಳ ಹರಿವಿದ್ದು ಈಗಾಗಲೇ ಕೋಡಿ ಭಾಗದಲ್ಲಿ ಮತ್ತು ಜಲಾಶಯದ ಗೇಟ್ ಓಪನ್ ಮಾಡಿದ್ದು 9814 ಕ್ಯೂಸೆಕ್‌ ನೀರನ್ನು ವೇದಾವತಿ ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಸುರಕ್ಷತೆ ದೃಷ್ಟಿ ಮತ್ತು ಹಿನ್ನೀರಿನ ಜನರ ಬದುಕಿನ ಪ್ರಶ್ನೆಯಿಂದ ಕೋಡಿ ಬಿದ್ದಾದ ನಂತರದ ನೀರನ್ನು ಹೊರ ಹರಿಸುವ ಕೆಲಸ ಮಾಡಲಾಗುತ್ತಿದೆ. ವಿವಿ ಸಾಗರದ ನೀರಿನಿಂದ ವೇದಾವತಿ ನದಿಯು ತುಂಬಿ ಹರಿಯುತ್ತಿದ್ದು ಇದೀಗ ಆ ನೀರಿನಲ್ಲಿ ತಾಲೂಕಿನ ಧರ್ಮಪುರ ಭಾಗದ 9 ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಆಗುತ್ತಿರುವ ಉತ್ತಮ ಮಳೆಯಿಂದಾಗಿ ವೇದಾವತಿ ನದಿಯು ತುಂಬಿ ಹರಿಯುತ್ತಿದ್ದು ನದಿಗೆ ಅಡ್ಡಲಾಗಿ ಹೊಸಹಳ್ಳಿ ಬಳಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೂಲಕ ಏತ ನೀರಾವರಿ ಯೋಜನೆಯಡಿ 9 ಕೆರೆಗಳಿಗೆ ನೀರು ಹರಿಸುವ ಕಾರ್ಯ ಶುರುವಾಗಿದೆ. ಈಗಾಗಲೇ 950 ಎಚ್‌ಪಿಯ ಮೋಟಾರ್‌ಗಳನ್ನು ಚಾಲನೆ ಮಾಡಲಾಗಿದ್ದು ಧರ್ಮಪುರ, ಮುಂಗಸವಳ್ಳಿ, ಸೂಗೂರು,ಶ್ರವಣಗೆರೆ, ಈಶ್ವರಗೆರೆ, ಅಬ್ಬಿನಹೊಳೆ ಕೆರೆಗಳಿಗೆ ನೀರು ಲಿಫ್ಟ್ ಮಾಡಲಾಗುತ್ತಿದೆ. ವಿವಿ ಸಾಗರದ ಹೆಚ್ಚುವರಿ ನೀರು ನದಿ ಮೂಲಕ ಹರಿದು ಹೋಗುತ್ತಿದ್ದು ನೀರನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಕೆರೆಗಳನ್ನು ತುಂಬಿಸಿ ಎಂಬ ಸಚಿವರ ಸೂಚನೆಯಂತೆ ಧರ್ಮಪುರ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.ತಾಲೂಕಿನ ಹೊಸಹಳ್ಳಿ ಬಳಿ ನಿರ್ಮಿಸಿರುವ ಬ್ಯಾರೇಜ್ ನಿಂದ ಗೂಳ್ಯ, ಅಬ್ಬಿನಹೊಳೆ ಮತ್ತು ಈಶ್ವರಗೆರೆ ಕೆರೆಗೆ ನೀರು ತುಂಬಿಸುವ ಪೈಪ್ ಲೈನ್ ಕಿತ್ತು ಹೋಗಿದ್ದು ಗಟ್ಟಿಮುಟ್ಟಾದ ಕಬ್ಬಿಣದ ಲೈನ್ ಮಾಡಿಸಿ ಎಂಬ ಕೆಲವರ ಆರೋಪಕ್ಕೆ ಉತ್ತರಿಸಿದ ಅಧಿಕಾರಿಗಳು ಪೈಪ್ ಒಡೆದಿಲ್ಲ. ಪೈಪ್ ಲೈನ್ ಜಾಯಿಂಟ್ ಹಾಕಿದ ಭಾಗದಲ್ಲಿ ಲೀಕೇಜ್ ಆಗಿತ್ತು. ಮಳೆ ಬಂದಿದ್ದರಿಂದ ಕರೆಂಟ್ ಇರಲಿಲ್ಲ.ಒಂದು ದಿನದ ಮಟ್ಟಿಗೆ ನೀರು ನಿಲ್ಲಿಸಲಾಗಿತ್ತು. ಇದೀಗ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಸರಿಪಡಿಸಲಾಗಿದೆ. ಈಶ್ವರಗೆರೆ ಕೆರೆಗೆ ನೀರು ಇದೀಗ ಹರಿಯುತ್ತಿದೆ ಎಂದಿದ್ದಾರೆ. ಸ್ಥಳಕ್ಕೆ ಚೀಫ್ ಎಂಜಿನಿಯರ್ ಪ್ರಕಾಶ್ ಬಿ ಶ್ರೀ ಹರಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು

ಧರ್ಮಪುರ ಹೋಬಳಿ ವ್ಯಾಪ್ತಿಯ 9 ಕೆರೆಗಳಿಗೆ ಹೊಸಹಳ್ಳಿ ಬ್ಯಾರೇಜ್‌ನಿಂದ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಕಾಮಗಾರಿಯ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರುಗಳೊಂದಿಗೆ ಸಭೆ ನಡೆಸಿ, ಈ ಯೋಜನೆ ರೈತರಿಗೆ ಹೊಸ ಆಶಾಕಿರಣವಾಗಿದೆ. ಪ್ರತಿ ಹಳ್ಳಿಯ ಕೆರೆ ತುಂಬಿದರೆ ಆ ಭಾಗದ ಕೃಷಿಯ ಅಭಿವೃದ್ಧಿಗೆ ಸಹಾಯವಾಗುತ್ತದೆ. ರೈತರ ಹಿತ ಕಾಯಲು ನಾನು ಸೇರಿದಂತೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ಈ ಯೋಜನೆಯಿಂದ ನೀರಾವರಿ ವ್ಯಾಪ್ತಿ ಹೆಚ್ಚಿ ರೈತರ ಜೀವನದಲ್ಲಿ ಹಸಿರು ಕ್ರಾಂತಿ ಮೂಡಲಿದೆ ಎಂದರು.