ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೇಕೆದಾಟು ಯೋಜನೆ ಅನುಷ್ಠಾನವಾಗದಿದ್ದರೆ ಬೆಂಗಳೂರು ನಗರವು ಅತಿದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ತಕ್ಷಣವೇ ಅನುಮತಿ ಕೊಡುವಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಸ್ಥಾಯಿ ಸಮಿತಿಗೆ ಮನವಿ ಮಾಡಲಾಗಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ದೇಶದ ಎಲ್ಲ ಜನರಿಗೆ ಉದ್ಯೋಗ, ಜೀವನೋಪಾಯ ನೀಡಿ ಸಲಹುತ್ತಿದೆ.
ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ನಗರದ ನೀರಿನ ಬವಣೆ ತಪ್ಪಿಸಬಹುದು. ಇಲ್ಲವಾದರೆ, ಬೆಂಗಳೂರು ನಗರ ಅತಿ ದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಎಂದು ಹೇಳಿದರು. ಬೆಂಗಳೂರು ನಗರದ ಜನಸಂಖ್ಯೆ ಸದ್ಯಕ್ಕೆ 135 ಲಕ್ಷವಿದ್ದು, 2044ರ ವೇಳೆ ಈ ಪ್ರಮಾಣ 3 ಕೋಟಿ ಮೀರಲಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ 64 ಟಿಎಂಸಿ ನೀರಿನ ಅಗತ್ಯ ಇದೆ ಎಂದರು.
ತಮಿಳುನಾಡಿಗೆ ದೈತ್ಯ ರಾಜಕೀಯ ಶಕ್ತಿ ಇದೆ. ಅವರಿಗೆ ಎಷ್ಟು ನೀರು ಕೊಟ್ಟರೂ ಸಾಕಾಗುವುದಿಲ್ಲ. ತಮಿಳುನಾಡಿನಲ್ಲಿ ಎಲ್ಲಾ ಕಡೆ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಅವರಿಗೆ ಸಮೃದ್ಧವಾಗಿ ಮಳೆ ಬಂದರೂ ನೀರು ಬೇಕು ಎಂದು ಕೇಳುತ್ತಾರೆ.
ತಮಿಳುನಾಡಿನ ನೀರಾವರಿಯ ಬಗ್ಗೆ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರು ವರದಿ ಕೊಟ್ಟಿದ್ದಾರೆ. ಅವರು ವಾರ್ಷಿಕ ಮೂರು ಬೆಳೆ ಅರಾಮವಾಗಿ ಬೆಳೆಯುತ್ತಾರೆ. ನಮಗೆ ಒಂದು ಬೆಳೆ ಬೆಳೆಯುವುದಕ್ಕೆ ಕೂಡ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಕುರುವೈ, ಸಾಂಬಾ, ತಾಲಾಡಿ ಹಾಗೂ ಇನಾ ಬೇಸಾಯ ಸೇರಿದಂತೆ ಒಟ್ಟು 24.71 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದೇ ಕರ್ನಾಟಕಕ್ಕೆ ಬಂದರೆ, ಎಲ್ಲಾ ರೀತಿಯ ಬೆಳೆಗಳನ್ನು ಸೇರಿಸಿದರೂ 18.85 ಲಕ್ಷ ಎಕರೆ ಮೀರುವುದಿಲ್ಲ.
ಕಾವೇರಿ ಜಲ ವಿವಾದ ಮಂಡಳಿ ಏಕಪಕ್ಷೀಯವಾಗಿ 1991ರಲ್ಲಿ ಮಧ್ಯಂತರ ಆದೇಶ ನೀಡಿ, ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು 11.20 ಲಕ್ಷ ಹೆಕ್ಟೇರ್‌ಗೆ ಸೀಮಿತಗೊಳಿಸುವಂತೆ ಮತ್ತು ತಮಿಳುನಾಡಿನ 205 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಕಾವೇರಿ ಕಣಿವೆಯಲ್ಲಿ ಕೃಷ್ಣರಾಜ ಸಾಗರ, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿವರ್ಷ ಜೂನ್ ತಿಂಗಳಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 177.25 ಟಿಎಂಸಿ ನೀರು ಬಿಡಬೇಕು ಎನ್ನುವ ಆದೇಶದಿಂದ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಗ್ಗೆಯೂ ಸಮಿತಿ ಗಮನಕ್ಕೆ ತರಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.