ಕಲಿಯಲು ಕೋಟಿ ಭಾಷೆಯಿದ್ದರೂ ಆಡೋಕೆ ಕನ್ನಡ ಭಾಷೆಯೊಂದೇ: ಟಿ.ಪಿ. ರಮೇಶ್‌

| Published : Jan 09 2024, 02:00 AM IST

ಕಲಿಯಲು ಕೋಟಿ ಭಾಷೆಯಿದ್ದರೂ ಆಡೋಕೆ ಕನ್ನಡ ಭಾಷೆಯೊಂದೇ: ಟಿ.ಪಿ. ರಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ‘ಕನ್ನಡ-ಕೊಡವ ಭಾಷಾ ಬೆಳವಣಿಗೆ’ ಎಂಬ ವಿಚಾರದ ಬಗ್ಗೆ ಸುಂಟಿಕೊಪ್ಪ ಹೋಬಳಿ ಕಸಾಪ ವತಿಯಿಂದ ನಡೆದ ಮೊಣ್ಣಂಡ ಕೆ.ಚಂಗಪ್ಪ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಲಿಯೋಕೆ ಕೋಟಿ ಭಾಷೆ ಇದ್ದರೂ ಆಡೋಕೆ ಒಂದೇ ಭಾಷೆ ಅದುವೇ ಕನ್ನಡ ಎಂದು ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಣ್ಣಿಸಿದ್ದಾರೆ.ಇತ್ತೀಚೆಗೆ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ 50ರ ಅಂಗವಾಗಿ ಕೊಡಗು ಜಿಲ್ಲಾ ಕ.ಸಾ.ಪ. ಮತ್ತು ಕುಶಾಲನಗರ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ‘ಕನ್ನಡ-ಕೊಡವ ಭಾಷಾ ಬೆಳವಣಿಗೆ’ ಎಂಬ ವಿಚಾರದ ಬಗ್ಗೆ ಸುಂಟಿಕೊಪ್ಪ ಹೋಬಳಿ ಕಸಾಪ ವತಿಯಿಂದ ನಡೆದ ಮೊಣ್ಣಂಡ ಕೆ.ಚಂಗಪ್ಪ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಕೊಡವ ಭಾಷೆ ಕುರಿತು ಮಾತನಾಡಿದರು.

ಭಾರತದ ಇತಿಹಾಸದಲ್ಲಿ ಕರ್ನಾಟಕದ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆ, ಹಬ್ಬ ಹರಿದಿನಗಳಿಗೆ ವಿಶೇಷವಾದ ಮಹತ್ವವಿದೆ. ಇವೆಲ್ಲವೂ ಕನ್ನಡ ಭಾಷೆಯ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹೊರಹೊಮ್ಮಿದ್ದು, ಈ ಹಿನ್ನೆಯಲ್ಲಿ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ದೇಶಿಯ ಭಾಷೆಗಳಲ್ಲಿ ಪ್ರಮುಖ ಸ್ಥಾನ ಹೊಂದಿದೆ ಎಂದರು.

ಕನ್ನಡ ಭಾಷೆ ಕೊಡವ, ತುಳು, ಬ್ಯಾರಿ, ಅರೆಭಾಷೆ ಮತ್ತು ಕೊಂಕಣಿ ಭಾಷೆಗಳಿಗೆ ಲಿಪಿಯಾಗಿದೆ. ಇತ್ತೀಚೆಗೆ ಕೊಡವ ಭಾಷೆಯಲ್ಲಿ ಹೊಸಲಿಪಿ ಅನುಷ್ಠಾನವಾಗಿದ್ದು, ನಿಧಾನವಾಗಿ ಬಳಕೆಗೆ ಬರುತ್ತಿದೆ ಎಂದು ಹೇಳಿದ ಟಿ.ಪಿರಮೇಶ್, ಈ ಹಿಂದೆಯೂ ಕೊಡವ ಲಿಪಿ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನಗಳು ಆಗಿದ್ದವು ಎಂಬುದನ್ನು ಉಲ್ಲೇಖಿಸಿದರು.

ವಿಶೇಷವಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲ ಪ್ರಕಾರದ ಕೊಡವ ಸಾಹಿತ್ಯ ಪ್ರಕಟಣೆಗಳು ಬೆಳಕು ಕಂಡವು. ಅಕಾಡೆಮಿಯ ಜೊತೆಗೆ ಕೊಡವ ಮಕ್ಕಡಕೂಟ, ಕೊಡವ ಎಳ್ಕ್ತಾರಡಕೂಟ ಹಾಗೂ ಕೊಡವ ಪೊಮ್ಮಕ್ಕಡ ಪರಿಷತ್ ಸಾಕಷ್ಟು ಪುಸ್ತಕಗಳನ್ನು ಕೊಡವ ಭಾಷೆಯಲ್ಲಿ ಹೊರತಂದಿದ್ದು, ಕೊಡವ ಭಾಷೆ ಪತ್ರಿಕೆಗಳಾದ ಬ್ರಹ್ಮಗಿರಿ, ಪೂಮ್ಮಾಲೆ, ತೂಕುಬೊಳಕ್ ಕೊಡವ ಭಾಷ ಲೇಖಕರನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿವೆ ಎಂದರು.

ಕರ್ನಾಟಕ ರಾಜ್ಯವನ್ನು ಕದಂಬ, ಗಂಗಾ, ಚಾಳುಕ್ಯ, ಹೊಯ್ಸಳ, ವಿಜಯನಗರದ ಅರಸರು, ಮೈಸೂರು ಒಡೆಯರು ಆಳಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ, ಶಿಲ್ಪಕಲೆ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಅಸಾಮಾನ್ಯ ಮತ್ತು ಅನುಕರಣೀಯ ಎನ್ನಬಹುದಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಕೊಡಗಿನಲ್ಲಿ ಎಲ್ಲ ಭಾಷೆ ಮತ್ತು ಧರ್ಮ ಆಚರಿಸುವ ಜನರಿದ್ದು, ಇದು ಮಾದರಿ ಜಿಲ್ಲೆಯಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಮತ್ತು ಕೊಡವ ಭಾಷೆಯ ಪರಸ್ಪರ ಭಾಂದವ್ಯ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ದಿ.ಮೊಣ್ಣಂಡ ಕೆ.ಚಂಗಪ್ಪ ಅವರ ಹೆಸರಿನಲ್ಲಿ ಅವರ ಪತ್ನಿ ಸರಸ್ವತಿ ಮತ್ತು ಸಹೋದರ ಜೀವನ್ ಚಿಣ್ಣಪ್ಪ, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ದತ್ತಿನಿಧಿ ಸ್ಥಾಪಿಸಿದ್ದು ಒಂದು ಮಹತ್ವದ ವಿಚಾರವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕಸಾಪ ಹೋಬಳಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲೂಕು ಘಟಕ ಅಧ್ಯಕ್ಷ ಕೆ.ಎಸ್.ನಾಗೇಶ್ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ, ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದ ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಕಸಾಪ ತಾಲೂಕು ಸಮಿತಿ ಖಜಾಂಚಿ ಕೆ.ವಿ. ಉಮೇಶ್, ಜಿಲ್ಲಾ ಸಮಿತಿ ಸದಸ್ಯ ರಾಜನ್, ಸುಂಟಿಕೊಪ್ಪ ಹೋಬಳಿ ಕಸಾಪ ಉಪಾಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರು ನವೀನ್ ಮತ್ತಿತರರು ಇದ್ದರು.

ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಸುನಿಲ್, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.