ಎಲ್ಲ ವರ್ಗ ಒಪ್ಪುವ ರಾಷ್ಟ್ರನಾಯಕ ಅಗತ್ಯ: ವೂಡೇ ಪಿ.ಕೃಷ್ಣ

| Published : Oct 07 2024, 01:48 AM IST

ಸಾರಾಂಶ

ಗಾಂಧೀಜಿ ಅವರು ಸಮುದಾಯಿಕ ಸಮಾಜ ಮತ್ತು ಅಹಿಂಸಾತ್ಮಕ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಗಾಂಧಿ ಹೊಂದಿದ್ದರು. ಆದರೆ, ಇಂದು ಆ ಎರಡೂ ತತ್ವಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಿತ್ತರಿಸಲಾಗುತ್ತಿದೆ. ಪ್ರಸುತ ದಿನಗಳಲ್ಲಿ ಸಮಾಜ, ಧರ್ಮ, ಮತಗಳ ನಡುವೆ ಕೆಟ್ಟ ಭಾವನೆ ಬರುವಂತಹ ಬೆಳವಣಿಗೆಗಳು ನಡೆಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತ್ಯತೀತತೆ ಮತ್ತು ಸಮಾಜವಾದ ನಮ್ಮ ಆದರ್ಶಗಳಾದಾಗ ಗಾಂಧೀಜಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಇಂದು ಬೇಕಾದಷ್ಟು ನಾಯಕರು, ರಾಜಕೀಯ ನಾಯಕರಿದ್ದಾರೆ. ಆದರೆ, ಎಲ್ಲ ವರ್ಗಗಳಿಗೆ ಒಪ್ಪುವಂತಹ ಒಬ್ಬ ರಾಷ್ಟ್ರನಾಯಕ ಬೇಕಾಗಿದೆ. ಇದು ಪ್ರಸ್ತುತ ಹೆಚ್ಚು ಅಗತ್ಯವಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ನಾಡೋಜ ವೂಡೇ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಚಿತ್ರಕೂಟ ವತಿಯಿಂದ ಮತ್ತೆ ಮತ್ತೆ ಗಾಂಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಂಧೀಜಿ ಅವರು ಸಮುದಾಯಿಕ ಸಮಾಜ ಮತ್ತು ಅಹಿಂಸಾತ್ಮಕ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಗಾಂಧಿ ಹೊಂದಿದ್ದರು. ಆದರೆ, ಇಂದು ಆ ಎರಡೂ ತತ್ವಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಿತ್ತರಿಸಲಾಗುತ್ತಿದೆ. ಪ್ರಸುತ ದಿನಗಳಲ್ಲಿ ಸಮಾಜ, ಧರ್ಮ, ಮತಗಳ ನಡುವೆ ಕೆಟ್ಟ ಭಾವನೆ ಬರುವಂತಹ ಬೆಳವಣಿಗೆಗಳು ನಡೆಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಧಿಯವರು ಪರಿಕಲ್ಪನೆಯನ್ನು ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ. ಗಾಂಧಿ ಬದುಕಿನ ಸಂದೇಶವೇ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು ಎಂದರು.

ಜಾತ್ಯತೀತತೆ ಮತ್ತು ಸಮಾಜವಾದ ನಮ್ಮ ಆದರ್ಶಗಳಾದಾಗ ಗಾಂಧೀಜಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಇಂದು ಬೇಕಾದಷ್ಟು ನಾಯಕರು, ರಾಜಕೀಯ ನಾಯಕರಿದ್ದಾರೆ. ಆದರೆ, ಎಲ್ಲ ವರ್ಗಗಳಿಗೆ ಒಪ್ಪುವಂತಹ ಒಬ್ಬ ರಾಷ್ಟ್ರನಾಯಕ ಬೇಕಾಗಿದೆ. ಇದು ಪ್ರಸ್ತುತ ಹೆಚ್ಚು ಅಗತ್ಯವಾಗಿದೆ.

ಇಂದಿನ ಯುವಕರಿಗೆ ಗಾಂಧಿ ಹೇಗೆ ಸತ್ತರು ಎಂಬ ವಿಚಾರ ಬೇಡ. ಹೇಗೆ ಬದುಕಿದರು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಅದರಲ್ಲೇ ದೊಡ್ಡ ಶಕ್ತಿ ಇದೆ. ಸಕಾರಾತ್ಮಕ ಚಿಂತನೆಗಳಿವೆ. ಗಾಂಧೀಜಿ ಅವರಿಗೆ ಯಾರೂ ಸಹ ಸಾಟಿಯೇ ಇಲ್ಲ. ಅಂತಹ ಅದ್ಭುತ ವ್ಯಕ್ತಿ. ಗಾಂಧಿ ಹುಟ್ಟುವುದಕ್ಕೆ ಮುಂಚೆ ಇನ್ನೊಬ್ಬ ಗಾಂಧಿ ಇರಲಿಲ್ಲ. ಎಷ್ಟೋ ರಾಷ್ಟ್ರನಾಯಕರು ಆಗಿಹೋದರೂ ಗಾಂಧಿ ಮುಂಚೆಯೂ ಆಗಿಹೋದರು. ಆದರೆ, ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳುವ ನೈತಿಕ ಸ್ಥೈರ್ಯ ಯಾರಿಗೂ ಇರಲಿಲ್ಲ ಎಂದರು.

ಗಾಂಧಿ ಅವರ ಬಗ್ಗೆ ತುಂಬಾ ಜನ ಕೆಟ್ಟ ಕೆಟ್ಟ ಅಭಿಪ್ರಾಯ ಬಿಂಬಿಸುತ್ತಿದ್ದಾರೆ. ಗಾಂಧೀಜಿ ಅವರು ಸ್ವಾತಂತ್ರ್ಯ ನನ್ನ ಕಿರೀಟ, ವಿಭಜನೆ ಎನ್ನುವುದು ಶಿಲುಬೆಗೆ ಸಮಾನ ಎಂದು ಹೇಳಿದ್ದರು. ಗಾಂಧೀಜಿಯವರೇ ದೇಶದ ವಿಭಜನೆಗೆ ಕಾರಣ ಎಂಬ ತಪ್ಪು ಮಾಹಿತಿ ಪ್ರಚುರಪಡಿಸಲಾಗುತ್ತಿದೆ. ಗಾಂಧಿ ಸಾಹಿತ್ಯವನ್ನು ಶಿಕ್ಷಕರೂ ಕೂಡ ವಿಪುಲವಾಗಿ ಓದಿಕೊಳ್ಳಬೇಕು. ಯುವಕರು ಎತ್ತುವ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡುವಂತಹ ಶಕ್ತಿಯನ್ನು ಸಂಪಾದಿಸಬೇಕು. ಆಗ ಮಾತ್ರ ಮನಸ್ಸುಗಳನ್ನು ಕಟ್ಟಲು ಸಾಧ್ಯ ಎಂದರು.

ಗಾಂಧಿ ಅವರನ್ನು ನಾವು ಸಮುದಾಯಿಕ ಸಮಾಜ, ಅಹಿಂಸಾತ್ಮಕ ಸಮಾಜ ನಿರ್ಮಾಣಕ್ಕೆ ಹೋರಾಟ ನೀಡಿದರು. ಹಾಗಾಗಿ ಇಂತಹ ತತ್ವಗಳಲ್ಲಿ ಗಾಂಧೀಜಿಯನ್ನು ನೋಡಬೇಕಿದೆ. ಗಾಂಧಿ ಕೆಲಸ ಮಾಡಿದ ಕ್ಷೇತ್ರಗಳನ್ನು ಜೀವಂತವಾಗಿಡಬೇಕಿದೆ. ಶ್ರೀಸಾಮಾನ್ಯನಿಗೆ ಶಕ್ತಿ ತುಂಬಿದ್ದರೆ ಅದು ಗಾಂಧೀಜಿ ಮಾತ್ರ. ಯಾವುದೇ ಯೋಜನೆ, ಕೆಲಸವನ್ನು ಕೈಗೊಂಡರೂ ಸಮಾಜದ ಕಟ್ಟಕಡೆಯ ವ್ಯಕ್ತಿ, ರೈತ, ಬಡವನಿಗೆ ತಲುಪುವಂತಿದ್ದರೆ ಮಾತ್ರ ಮೊದಲು ಮಾಡುವಂತೆ ಹೇಳಿದವರು ಎಂದರು.

ಗಾಂಧೀಜಿ ಅವರು ಬಡವರ ಸೇವಕರಾಗಿದ್ದರು. ದೇಶದ ಅಭ್ಯುದಯಕ್ಕಾಗಿ ಕುಟುಂಬದ ಅಭ್ಯುದಯವನ್ನು ತ್ಯಾಗ ಮಾಡಿದರು. ನಮಗೆ ಬಂದಿರೋದು ಕೇವಲ ರಾಜಕೀಯ ಸ್ವಾತಂತ್ರ್ಯ. ಇನ್ನೂ ಸಾಮಾಜಿಕ, ಆರ್ಥಿಕ, ನೈತಿಕ ಸ್ವಾತಂತ್ರ್ಯ ಬಂದಿಲ್ಲ ಎಂದು ಬರೆದುಕೊಂಡಿದ್ದಾರೆ. ಇಂದಿಗೂ ಅದು ಸತ್ಯವಾಗಿದೆ. ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ. ಗಾಂಧಿ ಪರಿಕಲ್ಪನೆಯ ಸ್ವಾತಂತ್ರ್ಯ ಇಂದಿಗೂ ಸಾಕಾರಗೊಂಡಿಲ್ಲ ಎಂದು ನೇರವಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ಅಂಕಣಕಾರ ಬಿ.ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಪಾಲ್ಗೊಂಡಿದ್ದರು. ಸಾಮಾಜಿಕ ಚಿಂತಕ ಹೆಚ್.ಕೆ.ವಿವೇಕಾನಂದ, ಡಾ.ಬಿ.ಸಿ.ಬಸವರಾಜು, ಸಹ ಪ್ರಾಧ್ಯಾಪಕಿ ಡಾ.ಶಿಲ್ಪಶ್ರೀ ವಿಶೇಷ ಉಪನ್ಯಾಸ ನೀಡಿದರು. ಸ್ಥಳೀಯ ಗಾಯಕರಿಂದ ಗೀತಗಾಯನ, ನಾರಾಯಣ ತಿರುಮಲಾಪುರ, ಕೆ.ಪಿ.ಮೃತ್ಯುಂಜಯ, ಎಂ.ಜಿ.ವಿನಯ್‌ಕುಮಾರ್, ಸದ್ದಾಂ, ರಂಜಿತಾ ದರ್ಶಿನಿ ಅವರಿಂದ ಕವಿತಾವಾಚನ ನಡೆಯಿತು. ಕೊಪ್ಪ ಗ್ರಾಮದ ಸೌಹಾರ್ದ ಸಂಘಕ್ಕಕಕೆ ಚಿತ್ರಕೂಟ ಪುರಸ್ಕಾರ ನೀಡಿ ಗೌರವಿಸಲಾಯಿತು.