ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ಶೈಕ್ಷಣಿಕ ಸಾಲು (2026-27) ಆರಂಭವಾಗುತ್ತಿದ್ದು, ಜೂ.1ರಿಂದ ಎಲ್ಲಾ ಸರ್ಕಾರಿ ಶಾಲೆಗಳನ್ನು ಪುನರ್ ಆರಂಭಿಸಿ ಹಬ್ಬದ ರೀತಿಯಲ್ಲಿ ಮಕ್ಕಳನ್ನು ಸ್ವಾಗತಿಸಬೇಕೆಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಇಲಾಖಾ ಅಧಿಕಾರಿಗಳು, ಎಲ್ಲಾ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸದಸ್ಯರೊಂದಿಗೆ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವರು, ಇಲಾಖೆಯ ಸಾಧನೆ, ಮುಂಬರುವ ಯೋಜನೆಗಳ ಮಾಹಿತಿ ಜೊತೆಗೆ ಶಾಲಾ ಪ್ರಾರಂಭೋತ್ಸವ ಹೇಗಿರಬೇಕೆಂದು ತಿಳಿಸಿದರು.ಶಾಲಾ ಪ್ರಾರಂಭೋತ್ಸವಕ್ಕೆ ಮೇ 28, 29, 30 ಮತ್ತು 31ರಂದು ಶಾಲಾ ಆವರಣ ಸ್ವಚ್ಛತೆಗೊಳಿಸಿ, ಶಾಲೆಯ ಎಲ್ಲಾ ಕೊಠಡಿ, ಪೀಠೋಪಕರಣಗಳ ಸ್ಥಿತಿಗತಿ ಅವಲೋಕಿಸುವುದು ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜೂ.1 ರಂದು ಶಾಲೆಗೆ ಬರುವ ಮಕ್ಕಳನ್ನು ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು. ಸಮುದಾಯದವರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಹಾಗೂ ಹಳೇ ವಿದ್ಯಾರ್ಥಿಗಳು ಕೈಜೋಡಿಸಿ ಮಕ್ಕಳಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ಅವರಲ್ಲಿ ಶಾಲೆಗೆ ಬರುವ ಉತ್ಸಾಹ ಹೆಚ್ಚಿಸಬೇಕು ಎಂದು ಕರೆ ನೀಡಿದ್ದಾರೆ.
ಕೆಪಿಎಸ್ ಕಟ್ಟಡಗಳಿಗೆ ಜೂ.1ಕ್ಕೆ ಸಿಎಂ ಶಂಕು:ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗುಣಮಟ್ಟದ ಶಿಕ್ಷಣದ ಗುರಿಯೊಂದಿಗೆ ರಾಜ್ಯ ಸರ್ಕಾರ ಹೋಬಳಿಗೊಂದು ಶಾಲೆಯನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳಾಗಿ(ಕೆಪಿಎಸ್) ಮೇಲ್ದರ್ಜೆಗೇರಿಸುವ ಯೋಜನೆ ಹಾಕಿಕೊಂಡಿದೆ. ಜೂ.1ರಂದು ಶಿವಮೊಗ್ಗದಲ್ಲಿ ವಿವಿಧ ಕೆಪಿಎಸ್ ಶಾಲೆಗಳ ಕಟ್ಟಡಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಇರುವ 306 ಕರ್ನಾಟಕ ಪಬ್ಲಿಕ್ ಶಾಲೆಗಳ(ಕೆಪಿಎಸ್) ಜೊತೆ ಮುಂದಿನ ಕೆಲ ವರ್ಷಗಳಲ್ಲಿ ರಾಜ್ಯಾದ್ಯಂತ ಇನ್ನೂ 1000 ಕೆಪಿಎಸ್‌ಗಳನ್ನು ಆರಂಭಿಸುವ ಗುರಿ ಸರ್ಕಾರ ಹೊಂದಿದೆ ಎಂದರು.
ಒಂದೇ ಸೂರಿನಡಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಈ ಶಾಲೆಗಳಲ್ಲಿ ಶಿಕ್ಷಣ ದೊರೆಯಲಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೇವಲ ಸರ್ಕಾರದ ಅನುದಾನವನ್ನೇ ಕಾಯದೆ, ಸಾರ್ವಜನಿಕರು ಕೈಜೋಡಿಸಬೇಕು. ಉದ್ಯಮಿಗಳು, ಸಂಘ-ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳ ಸಂಘಗಳು, ದಾನಿಗಳು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಯೋಜನೆಯಡಿ ಆರ್ಥಿಕ ನೆರವು ನೀಡಬಹುದು. ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಪೂರ್ಣ ಆರ್ಥಿಕ ಸಹಕಾರ ನೀಡುವ ದಾನಿಗಳು ಇಚ್ಛಿಸಿದರೆ ಆ ಶಾಲೆಗಳಿಗೆ ಅವರ ಹೆಸರನ್ನೇ ನಾಮಕರಣ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.