ಸಾರಾಂಶ
ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಎತ್ತುಗಳ ಹಾಗೂ ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಗುರುವಿಗಾಗಿ ನಡೆ ನಮನ ಸಂದೇಶದೊಂದಿಗೆ ಬಿಜ್ಜರಗಿಯಿಂದ ಆರಂಭವಾದ ಜೋಡೆತ್ತು ಬಂಡಿಗಳ ನಂದಿ ಯಾತ್ರೆಗೆ ಸ್ವಾಗತ ಕೋರಲಾಯಿತು. ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ ನೇತೃತ್ವದಲ್ಲಿ, ಗ್ರಾಮದ ರೈತರು 15 ಜೋಡೆತ್ತು ಬಂಡಿಗಳಲ್ಲಿ ಸಿದ್ಧೇಶ್ವರ ಸ್ವಾಮೀಜಿಯ ಭಾವಚಿತ್ರವನ್ನು ಬಿಜ್ಜರಗಿಯ ರೈತರು ಸಿಂದಗಿ ತಾಲೂಕಿನ ಹರನಾಳ ಗ್ರಾಮದ ನಂದಿ ಯಾತ್ರೆಗೆ ಸ್ವಾಗತ ಕೋರಿದರು. ಬಳಿಕ, ಇಂಡಿ ತಾಲೂಕಿಗೆ ನಂದಿಯಾತ್ರೆಯನ್ನು ಬೀಳ್ಕೊಡಲಾಯಿತು. ಅಭಿ ಫೌಂಡೇಷನ್ ಮುಖ್ಯಸ್ಥ ಬಸವರಾಜ ಬಿರಾದಾರ, ಸಿದ್ದೇಶ್ವರ ಶ್ರೀಗಳು ಎತ್ತುಗಳನ್ನು ಸಂರಕ್ಷಿಸಲು ಆಧ್ಯಾತ್ಮಿಕ ಸ್ಥಳಗಳಿಗೆ ನಂದಿ ಯಾತ್ರೆ ಕೈಗೊಳ್ಳಬೇಕೆಂಬ ಆಶಯ ಹೊರ ಹಾಕಿದ್ದರು. ಎತ್ತು ಹಾಗೂ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಬಿಜ್ಜರಗಿಯ ಸಿದ್ಧೇಶ್ವರ ರೈತಮಿತ್ರ ಸ್ವಯಂ ಸೇವಕರ ಸಂಘದ ನೇತೃತ್ವದಲ್ಲಿ ಜೋಡೆತ್ತು ಬಂಡಿಗಳ ಮೂಲಕ ನಂದಿಯಾತ್ರೆ ಆರಂಭಿಸಲಾಗಿದೆ ಎಂದರು.ಮಲ್ಲಿಕಾರ್ಜುನ ಕೋರಿ ಹಾಗೂ ಮಹದೇವ ಅಂಬಲಿ ಮಾತನಾಡಿ, ಎತ್ತುಗಳು ಉಳಿದರೆ ಭಾರತೀಯ ಕೃಷಿ ಪದ್ಧತಿ ಉಳಿಯುತ್ತದೆ. ಪಶುಗಳ ಸಾಕಾಣಿಕೆಗೆ ರೈತರಿಗೆ ಸಹಾಯಧನ ನೀಡುವ ಅಗತ್ಯತೆವಿದ್ದು, ಸಾವಯವ ಕೃಷಿ ಪದ್ಧತಿಗೆ ಉತ್ತೇಜನ ನೀಡಬೇಕಿದೆ ಎಂದರು.ಗ್ರಾಮದ ಪ್ರಮುಖರಾದ ಎನ್.ಜಿ.ರೊಡಗಿ, ಅಪ್ಪಾಸಾಹೇಬ ಬಸರಕೋಡ, ಮಡಿವಾಳಪ್ಪ ಕುಂಬಾರ, ನಾನಾಗೌಡ ಬಿರಾದಾರ, ಮಲ್ಕಪ್ಪ ಹೊನ್ನಳಿ, ಶಿವು ಹೊನ್ನಳ್ಳಿ, ಸಿದ್ದು ಬಿರಾದಾರ, ಸಿದ್ದಣ್ಣ ತೇಲಿ, ಸುರೇಶ ಉಪ್ಪಿನಾಳ, ವಿಶ್ವನಾಥ, ಮಲ್ಕಪ್ಪ ನಾಯ್ಕೋಡಿ, ಬಸನಗೌಡ ಬೈರವಾಡಗಿ ಸೇರಿ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.