ಬಳ್ಳಾರಿ ವಿಶ್ವವಿದ್ಯಾಲಯ ಪಠ್ಯದ ದೋಷ ಕಳೆಯುವುದು ಯಾವಾಗ?

| Published : Oct 24 2025, 01:00 AM IST

ಸಾರಾಂಶ

ವಾಣಿಜ್ಯ ಸೌರಭ, ವಿಜ್ಞಾನ ಸೌರಭ, ಕಲಾ ಸೌರಭ ಕನ್ನಡ ಪಠ್ಯದಲ್ಲಿ ನೂರಾರು ದೋಷಗಳು ಕಂಡು ಬಂದಿದ್ದವು.

ಮಂಜುನಾಥ ಕೆ.ಎಂ.

ಬಳ್ಳಾರಿ: ನೂರಾರು ಮುದ್ರಣ ದೋಷಗಳು ಕಂಡು ಬಂದಿದ್ದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಿಕಾಂ ವಿಭಾಗದ ಮೊದಲ ಸೆಮಿಸ್ಟರ್ ನ ಕನ್ನಡಪಠ್ಯದ (ವಾಣಿಜ್ಯ ಸೌರಭ) ದೋಷ ತಿದ್ದುಪಡಿಗೊಳಿಸುವ ಕಾರ್ಯ ಇನ್ನು ನಡೆದಿಲ್ಲ. ಹೀಗಾಗಿ ಮೊದಲ ಸೆಮಿಸ್ಟರ್‌ ಅವಧಿ ಮುಗಿಯುವ ಹಂತ ಬಂದರೂ ವಿದ್ಯಾರ್ಥಿಗಳು ತಪ್ಪು ತಪ್ಪು ಪಠ್ಯವನ್ನೇ ಅಧ್ಯಯನ ಮಾಡಿ ಪರೀಕ್ಷೆ ಎದುರಿಸುವಂತಾಗಿದೆ!

ವಿವಿಯ ಈ ಹಿಂದಿನ ಪ್ರಸಾರಾಂಗ ವಿಭಾಗ ಹಾಗೂ ಪಠ್ಯ ಪುಸ್ತಕ ಸಂಪಾದಕೀಯ ಮಂಡಳಿ ಮಾಡಿದ ಯಡವಟ್ಟಿನಿಂದಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ 87 ಪದವಿ ಕಾಲೇಜುಗಳ ಸುಮಾರು 4 ಸಾವಿರಕ್ಕೂ ಅಧಿಕ ದ್ಯಾರ್ಥಿಗಳು ದೋಷಪೂರಿತ ಪಠ್ಯವನ್ನೇ ಪರೀಕ್ಷೆಗೆ ಆಶ್ರಯಿಸಿದ್ದಾರೆ. 8 ತಿಂಗಳು ಕಳೆದರೂ ಈವರೆಗೆ ದೋಷ ತಿದ್ದುಪಡಿಯ ಕಾರ್ಯಕ್ಕೆ ಮುಂದಾಗಿಲ್ಲ.ವಿವಿಯಲ್ಲಿ ಆಗಿರುವುದೇನು?:

ಬಳ್ಳಾರಿ ವಿವಿಯ ಪ್ರಸಾರಾಂಗದಿಂದ ಕಳೆದ ವರ್ಷ ಪೂರೈಸಿದ ಸ್ನಾತಕ ವಿಭಾಗದ ವಾಣಿಜ್ಯ ಸೌರಭ, ವಿಜ್ಞಾನ ಸೌರಭ, ಕಲಾ ಸೌರಭ ಕನ್ನಡ ಪಠ್ಯದಲ್ಲಿ ನೂರಾರು ದೋಷಗಳು ಕಂಡು ಬಂದಿದ್ದವು. ಈ ಪೈಕಿ ವಾಣಿಜ್ಯ ವಿಭಾಗದ ಮೊದಲ ಸೆಮಿಸ್ಟರ್‌ನ ವಾಣಿಜ್ಯ ಸೌರಭ ಪಠ್ಯದಲ್ಲಿ 180ಕ್ಕೂ ದೋಷಗಳಿದ್ದವು. ವಿವಿಯ ಕುಲಪತಿ ಎಂ.ಮುನಿರಾಜು ಅವರ ಹೆಸರನ್ನು ಮುನಿನಾರಾಯಣಪ್ಪ ಎಂದು ಮುದ್ರಿಸಲಾಗಿತ್ತು. ಪಠ್ಯದ ಪ್ರತಿ ಪುಟದಲ್ಲಿ ದೋಷಗಳು ಕಂಡು ಬಂದಿದ್ದವು. ವಿಶ್ವವಿದ್ಯಾಲಯ ಮಾಡಿದ ಯಡವಟ್ಟು ಹಾಗೂ ವಿದ್ಯಾರ್ಥಿ ಸಮುದಾಯ ಎದುರಿಸಿದ ಆತಂಕ ಕುರಿತು ಕನ್ನಡಪ್ರಭ ಕಳೆದ ಜನವರಿ 25ರಂದು "ಬಳ್ಳಾರಿ ವಿವಿ ಪಠ್ಯದಲ್ಲಿ ನೂರಾರು ದೋಷ " ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಸದನದಲ್ಲಿ ಪ್ರಸ್ತಾಪ:

ಕನ್ನಡಪ್ರಭ ವರದಿಯನ್ನು ಸದನದಲ್ಲಿ ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಪಠ್ಯ ದೋಷಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಸೌರಭ ಪಠ್ಯದ ಪ್ರಧಾನ ಸಂಪಾದಕ ಸೇರಿದಂತೆ ಹತ್ತು ಜನರಿಗೆ ವಿವಿ ಕಾರಣ ಕೇಳಿ ನೊಟೀಸ್ ನೀಡಿತು. ಆದರೆ, ತಪ್ಪು ಮಾಡಿದವರ ವಿರುದ್ಧ ಯಾವುದೇ ಕ್ರಮದ ಹೆಜ್ಜೆ ಇಡಲಿಲ್ಲ. ಅಷ್ಟೇ ಅಲ್ಲ; ದೋಷಪೂರಿತ ಪಠ್ಯವನ್ನು ಕೂಡಲೇ ತಿದ್ದುಪಡಿಗೊಳಿಸಿ ವಿದ್ಯಾರ್ಥಿಗಳಿಗೆ ಮರು ವಿತರಿಸುವ ಕಾಳಜಿಯನ್ನೂ ತೆಗೆದುಕೊಳ್ಳಲಿಲ್ಲ.

ಈ ಹಿಂದೆ ಪಠ್ಯಪುಸ್ತಕದಲ್ಲಿ ಕಂಡು ಬಂದ ನೂರಾರು ದೋಷಗಳಿಗೆ ಸಂಬಂಧಿಸಿದಂತೆ ವಿವಿಯ ಕಾರಣ ಕೇಳಿ ನೊಟೀಸ್ ಪಡೆದ ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನಾಗಣ್ಣ ಕಿಲಾರಿ ಅವರನ್ನೇ ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರನ್ನಾಗಿ ಮುಂದುವರಿಸಲಾಗಿದೆ. ಪರೀಕ್ಷೆ ಇನ್ನೂ ಒಂದುವರೆ ತಿಂಗಳಷ್ಟೇ ಬಾಕಿಯಿದ್ದು, ಕೂಡಲೇ ಪರಿಷ್ಕೃತ ಪಠ್ಯ ವಿತರಣೆ ಮಾಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸುತ್ತಿದ್ದಾರೆ.

ಬಿಕಾಂ ಮೊದಲ ಸೆಮಿಸ್ಟರ್‌ ಕನ್ನಡ ಪಠ್ಯದಲ್ಲಿನ ದೋಷ ಸರಿಪಡಿಸುವ ಕೆಲಸ ವಿವಿ ಮಾಡುತ್ತಿದೆ. ಆದಷ್ಟು ಶೀಘ್ರ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪಠ್ಯವನ್ನು ನೀಡುತ್ತೇವೆ ಎನ್ನುತ್ತಾರೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಸಚಿವ ಸಿ.ನಾಗರಾಜ.

ಪಠ್ಯಪುಸ್ತಕ ದೋಷ ಹಾಗೂ ಮರುಮುದ್ರಣ ಕುರಿತಂತೆ ಕುಲಸಚಿವರ ಜೊತೆ ಮಾತನಾಡುವೆ. ಅವಕಾಶವಿದ್ದರೆ ಆದಷ್ಟು ಬೇಗ ಪರಿಷ್ಕೃತ ಪಠ್ಯ ಮುದ್ರಣ ಮಾಡಿಸಿ ವಿದ್ಯಾರ್ಥಿಗಳಿಗೆ ಕೈಗೆಟಕುವಂತೆ ಮಾಡುತ್ತೇವೆ ಎನ್ನುತ್ತಾರೆ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಿಂಡಿಕೇಟ್ ಸದಸ್ಯ ಪೀರ್‌ಬಾಷಾ.