ಕವಿವಿಗೆ ಕಾಯಂ ಕುಲಪತಿ ನೇಮಕ ಯಾವಾಗ?

| Published : Oct 17 2024, 12:09 AM IST

ಸಾರಾಂಶ

ಪ್ರೊ. ಕೆ.ಬಿ. ಗುಡಸಿ ಅವರು ಸೆಪ್ಟಂಬರ್‌ ತಿಂಗಳಲ್ಲಿ ನಿವೃತ್ತಿಯಾದ ನಂತರ ಕುಲಪತಿ ಸ್ಥಾನವನ್ನು ತೆರವು ಮಾಡಿದರು. ನೂತನ ಉಪಕುಲಪತಿ ಆಯ್ಕೆಗೆ ಮುತುವರ್ಜಿ ವಹಿಸಬೇಕಿದ್ದ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿವಿ ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಧೋರಣೆ ಮುಂದುವರಿಸಿದೆ.

ಬಸವರಾಜ ಹಿರೇಮಠ

ಧಾರವಾಡ:

ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ತೆರವಾಗಿ ತಿಂಗಳು ಸಮೀಪಿಸುತ್ತಿದ್ದು, ಈ ವರೆಗೂ ಕಾಯಂ ಕುಲಪತಿ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ಯಾವ ಬೆಳವಣಿಗೆಗಳು ಆಗದೇ ಇರುವುದು ಸೋಜಿಗದ ಸಂಗತಿ.

ಪೂರ್ಣಾವಧಿ ಕುಲಪತಿಗಳಿಲ್ಲದೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸಗಳು ವಿಳಂಬವಾಗುತ್ತಿದ್ದು, ತೀವ್ರ ಆರ್ಥಿಕ ಸಮಸ್ಯೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಓರ್ವ ಸಮರ್ಥ ಆಡಳಿತಗಾರ, ಶೈಕ್ಷಣಿಕ ಮುತ್ಸದ್ಧಿಗಾಗಿ ವಿಶ್ವವಿದ್ಯಾಲಯ ಕಾತುರದಿಂದ ಕಾಯುತ್ತಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಸದೇ ಇರುವುದು ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಶಿಕ್ಷಣ ತಜ್ಞರ ಕಂಗೆಡಿಸಿದೆ.

ಪ್ರೊ. ಕೆ.ಬಿ. ಗುಡಸಿ ಅವರು ಸೆಪ್ಟಂಬರ್‌ ತಿಂಗಳಲ್ಲಿ ನಿವೃತ್ತಿಯಾದ ನಂತರ ಕುಲಪತಿ ಸ್ಥಾನವನ್ನು ತೆರವು ಮಾಡಿದರು. ಅಂದಿನಿಂದ ಹಾಲಿ ಉಪಕುಲಪತಿಯೊಂದಿಗೆ ಕಾರ್ಯಕ್ರಮ ನಡೆಸುತ್ತಿದೆ. ನೂತನ ಉಪಕುಲಪತಿ ಆಯ್ಕೆಗೆ ಮುತುವರ್ಜಿ ವಹಿಸಬೇಕಿದ್ದ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿವಿ ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಧೋರಣೆ ಮುಂದುವರಿಸಿದೆ ಎಂಬ ಆರೋಪಗಳ ಕೇಳಿ ಬರುತ್ತಿವೆ.

ಏನಿದೆ ಪ್ರಕ್ರಿಯೆ?

ನಿಯಮಗಳ ಪ್ರಕಾರ, ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಹುದ್ದೆ ತೆರವಾದ ತಕ್ಷಣವೇ ಅನುಮೋದನೆ ನೀಡಬೇಕು. ಈ ಅನುಮೋದನೆ ನಂತರ ಅಧಿಸೂಚನೆ ಹೊರಡಿಸಲಾಗುತ್ತದೆ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕಳುಹಿಸಲು ಒಂದು ತಿಂಗಳ ಸಮಯ ನೀಡಲಾಗುತ್ತದೆ. ನಂತರ ಸರ್ಕಾರವು ಅರ್ಜಿಗಳ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ನೇಮಿಸುತ್ತದೆ. ಸಮಿತಿಯು ಸರ್ಕಾರದಿಂದ ನೇಮಕಗೊಂಡ ಇಬ್ಬರು ಸದಸ್ಯರನ್ನು ಮತ್ತು ರಾಜ್ಯಪಾಲರಿಂದ ನೇಮಕಗೊಂಡ ಒಬ್ಬ ಸದಸ್ಯರನ್ನು ಹೊಂದಿರುತ್ತದೆ. ಸಮಿತಿಯು ಎಲ್ಲ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ನಾಮಿನಿ ಪಟ್ಟಿ ಮಾಡಬೇಕು. ವಿವಿ ಸಿಂಡಿಕೇಟ್ ಕೂಡ ಒಬ್ಬ ನಾಮಿನಿಯನ್ನು ಹುದ್ದೆಗೆ ಶಿಫಾರಸು ಮಾಡಲು ಅವಕಾಶವಿದೆ. ಸಮಿತಿಯು ವಿವರವಾದ ಪರಿಶೀಲನೆಯ ನಂತರ, ಮೂರು ಸದಸ್ಯರನ್ನು ಆಯ್ಕೆ ಮಾಡುತ್ತದೆ ಮತ್ತು ಹೊಸ ಕುಲಪತಿ ಆಯ್ಕೆ ಮಾಡಲು ರಾಜ್ಯಪಾಲರಿಗೆ ಮುಚ್ಚಿದ ಲಕೋಟೆಯಲ್ಲಿ ಪಟ್ಟಿ ಸಲ್ಲಿಸುತ್ತದೆ. ಸಂಪೂರ್ಣ ಪ್ರಕ್ರಿಯೆಯನ್ನು ವೇಗವಾಗಿ ನಡೆದರೆ ಸಂಪೂರ್ಣ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಕನಿಷ್ಠ ಎರಡರಿಂದ ಮೂರು ತಿಂಗಳ ಅಗತ್ಯವಿದೆ.

ಆದರೆ, ಅರ್ಜಿ ಆಹ್ವಾನಿಸಲು ಸರ್ಕಾರ ಇನ್ನೂ ಒಪ್ಪಿಗೆ ನೀಡದ ಕಾರಣ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿಕ್ಷಣ ತಜ್ಞರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ವಿವಿ ಉನ್ನತ ಅಧಿಕಾರಿಯೊಬ್ಬರು ಅರ್ಜಿಗಳನ್ನು ಕರೆಯಲು ಸರ್ಕಾರದ ಒಪ್ಪಿಗೆಗಾಗಿ ವಿಶ್ವವಿದ್ಯಾಲಯ ಕಾಯುತ್ತಿದೆ, ಇದರಿಂದಾಗಿ ಹೊಸ ಕುಲಪತಿ ನೇಮಕ ಪ್ರಕ್ರಿಯೆಯು ವೇಗಗೊಳ್ಳುತ್ತದೆ ಎಂದರು. ಈ ನಡುವೆ, ವಿಸಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಲವಾರು ಆಕಾಂಕ್ಷಿಗಳು ಸರ್ಕಾರದಿಂದ ಅರ್ಜಿ ಆಹ್ವಾನಿಸಲು ಕಾತರದಿಂದ ಕಾಯುತ್ತಿದ್ದಾರೆ.

ನೂತನ ಕುಲಪತಿ ನೇಮಕದಲ್ಲಿ ವಿಳಂಬವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನೂತನ ಕುಲಪತಿ ನೇಮಕಕ್ಕೆ ಸರ್ಕಾರ ನಾಲ್ಕು ತಿಂಗಳ ಕಾಲಾವಕಾಶ ತೆಗೆದುಕೊಂಡಿತ್ತು. ಆದರೆ, ಇತರೆ ವಿವಿಗಳಲ್ಲಿ ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಈ ರೀತಿ ಇಲ್ಲ, ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂದು ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

ನಿವೃತ್ತರಿಗೆ ಪಿಂಚಣಿ, ಅತಿಥಿ ಉಪನ್ಯಾಸಕರಿಗೆ ವೇತನ ಸೇರಿದಂತೆ ವಿವಿಯು ತೀವ್ರ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದೆ ಮತ್ತು ಆದ್ದರಿಂದ ವಿಶ್ವವಿದ್ಯಾಲಯದ ಬೇಡಿಕೆ ಮುಂದಿಡುವ ಮತ್ತು ಹಣ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ಪ್ರಬಲ ಕುಲಪತಿಯ ಅಗತ್ಯವಿದೆ. ಕಳೆದ ಏಳು ವರ್ಷಗಳಲ್ಲಿ ಯಾವುದೇ ಹೊಸ ನೇಮಕಾತಿ ಮಾಡಿಲ್ಲ. ಶೇ. 20ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇವೆ. ವಿವಿ ತನ್ನದೇ ಆದ ಸಂಪನ್ಮೂಲಗಳಿಂದ ಹಣ ಉತ್ಪಾದಿಸಬೇಕಿದೆ. ಪಿಂಚಣಿ ಬಿಡುಗಡೆ ಮಾಡಲು ವಿಶ್ವವಿದ್ಯಾಲಯಕ್ಕೆ ಪ್ರತಿ ತಿಂಗಳು ₹ 10 ಕೋಟಿಗಿಂತ ಅಧಿಕ ಹಣದ ಅಗತ್ಯವಿದೆ. ಯುಜಿ ಮತ್ತು ಪಿಜಿ ಹಂತದಲ್ಲಿ ಹೊಸ ವಿಷಯ ಪರಿಚಯಿಸಲು ಹೇರಳವಾದ ಅವಕಾಶವಿದೆ. ಆದರೆ ಹಣಕಾಸಿನ ವೆಚ್ಚವನ್ನು ಪರಿಗಣಿಸಿ ಸರ್ಕಾರವು ತನ್ನ ಒಪ್ಪಿಗೆ ನೀಡಿಲ್ಲ.

ಹೀಗಾಗಿ ವಿಶ್ವವಿದ್ಯಾಲಯ ಕಷ್ಟದ ಸ್ಥಿತಿಯಲ್ಲಿ ಸಾಗುತ್ತಿದ್ದು, ನೂತನ ಕುಲಪತಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಸರಾ ಮುಗಿದಿದ್ದು ದೀಪಾವಳಿ ಸಮೀಪಿಸುತ್ತಿದೆ. ಹಬ್ಬ ಹರಿದಿನಗಳ ನಂತರ ನೂತನ ಕುಲಪತಿಗಳ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡುವ ನಿರೀಕ್ಷೆ ಹೊಂದಿದ್ದು ಕಾದು ನೋಡಬೇಕಿದೆ.