ಕಾಂಗ್ರೆಸ್ ಕೋಟೆ ಬಿಜೆಪಿ ಭದ್ರ ಕೋಟೆಯಾಗಿದ್ಯಾವಾಗ

| Published : Apr 03 2024, 01:33 AM IST

ಕಾಂಗ್ರೆಸ್ ಕೋಟೆ ಬಿಜೆಪಿ ಭದ್ರ ಕೋಟೆಯಾಗಿದ್ಯಾವಾಗ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರ ಅಚ್ಚರಿಯ ಫಲಿತಾಂಶಕ್ಕೆ ಹೆಸರು ವಾಸಿಯಾಗಿದೆ. ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ, ಪಕ್ಷೇತರ ಅಭ್ಯರ್ಥಿಯಾದ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಆಯ್ಕೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆಯಿತು.

15 ವರ್ಷಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ

ಅದಕ್ಕೂ ಮುನ್ನ ಇಲ್ಲಿ ಬಿಜೆಪಿಗೆ ಅಂತಹ ನೆಲೆಯೇ ಇರಲಿಲ್ಲ

ಕಾಂಗ್ರೆಸ್ ಪಕ್ಷದ ಒಳಗುದಿಯೇ ಬಿಜೆಪಿಗೆ ಮಣೆ ಹಾಕಲು ಕಾರಣ

ಕೊಪ್ಪಳ ಲೋಕಸಭಾ ಕ್ಷೇತ್ರದ ಹಿನ್ನೋಟ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರ ಅಚ್ಚರಿಯ ಫಲಿತಾಂಶಕ್ಕೆ ಹೆಸರು ವಾಸಿಯಾಗಿದೆ. ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ, ಪಕ್ಷೇತರ ಅಭ್ಯರ್ಥಿಯಾದ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಆಯ್ಕೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆಯಿತು. ಅದಾದ ಮೇಲೆ ಕಾಂಗ್ರೆಸ್ ನಡೆದಿದ್ದೆ ದಾರಿ ಎನ್ನುವಂತೆ ಆಗಿತ್ತು. ಆದರೆ, ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ ಇಲ್ಲಿ ತನ್ನ ಪ್ರಾಬಲ್ಯ ಸಾಬೀತು ಮಾಡಿದ್ದು, ಮೂರು ಚುನಾವಣೆಯಲ್ಲಿ ಕಮಲ ಅರಳಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುತೇಕ ಬಾರಿ ಗೆಲುವು ಸಾಧಿಸಿದೆ. ಕೆಲವೊಂದು ಬಾರಿ ಮಾತ್ರ ಜನತಾದಳ ಜಯ ಸಾಧಿಸಿದೆ. ಉಳಿದಂತೆ 2009ವರೆಗೂ ಕಾಂಗ್ರೆಸ್ ಮತ್ತು ಜನತಾ ದಳವೇ ಗೆಲುವು ಸಾಧಿಸುತ್ತಿತ್ತು.

ಬಿಜೆಪಿ ಗೆಲುವು:

2009ರ ಚುನಾವಣೆಯಲ್ಲಿ ಬಿಜೆಪಿ ಕೊಪ್ಪಳದಲ್ಲಿ ಗೆಲುವು ಸಾಧಿಸಿತು. ಅದು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಷ್ಟಾಗಿ ಪರಿಚಯವೇ ಇಲ್ಲದ ಗಂಗಾವತಿಯ ಶಿವರಾಮಗೌಡ ಕೊನೆ ಗಳಿಗೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು.

ಹಾಗೆ ನೋಡಿದರೇ ಬಿಜೆಪಿಯಿಂದ ಸ್ಪರ್ಧೆ ಮಾಡುವುದಕ್ಕೆ ಅಭ್ಯರ್ಥಿಗಳೇ ಇರಲಿಲ್ಲ. ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ಕೊಡಬೇಕು ಎಂದು ತೀರ್ಮಾನವಾದಾಗ ಶಿವರಾಮಗೌಡರಿಗೆ ಟಿಕೆಟ್ ನೀಡಲಾಯಿತು. ಅಷ್ಟಕ್ಕೂ ಶಿವರಾಮಗೌಡ ಬಿಜೆಪಿಯಲ್ಲಿಯೇ ಇದ್ದರೂ ಲೋಕಸಭಾ ಕ್ಷೇತ್ರದ ಟೆಕೆಟ್ ಸಹ ಕೇಳಿರಲಿಲ್ಲ. ಅವರನ್ನು ಹುಡುಕಿಕೊಂಡು ಬಂದು ಟಿಕೆಟ್ ನೀಡಲಾಯಿತು. ಬಸವರಾಜ ರಾಯರಡ್ಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಇನ್ನು ಜೆಡಿಎಸ್ ಪಕ್ಷದಿಂದ ಇಕ್ಬಾಲ್ ಅನ್ಸಾರಿ ಸೇರಿದಂತೆ ಬರೋಬ್ಬರಿ 18 ಅಭ್ಯರ್ಥಿಗಳು ಕಣದಲ್ಲಿ ಇದ್ದರು.

ಅದರಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷದಿಂದ ಹಂಚಿಹೋಗಿ ಜೆಡಿಎಸ್‌ಗೆ ಬಂದಿದ್ದರಿಂದ ಕಾಂಗ್ರೆಸ್ ಪಕ್ಷದ ಬಸವರಾಜ ರಾಯರಡ್ಡಿ ಬಿಜೆಪಿಯ ಶಿವರಾಮಗೌಡ ವಿರುದ್ಧ ಸೋಲುಣ್ಣುವಂತಾಯಿತು.

ನಡೆದಿದ್ದೇ ದಾರಿ:

ಅಂದಿನಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ನಡೆದಿದ್ದೇ ದಾರಿ ಎನ್ನುವಂತಾಗಿದೆ. 2014ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಕರಡಿ ಸಂಗಣ್ಣ ಅವರನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿ ಅಖಾಡಕ್ಕೆ ಇಳಿಸಲಾಯಿತು. ಹಾಲಿ ಸಂಸದ ಶಿವಕರಾಮಗೌಡರಿಗೆ ಟಿಕೆಟ್ ತಪ್ಪಿಸಿ, ಸಂಸದ ಕರಡಿಗೆ ಟಿಕೆಟ್ ನೀಡಲಾಯಿತು. 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಅವರು ಗೆಲುವು ಸಾಧಿಸಿದರು. ಬಿಜೆಪಿ ನಿರಂತರವಾಗಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯ ದಾಖಲಿಸಿತು.

ಟಿಕೆಟ್ ಬದಲಾವಣೆ:

ಈ ಬಾರಿ ಮತ್ತೆ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ ಡಾ. ಬಸವರಾಜಗೆ ನೀಡಿದೆ.

2009ರಲ್ಲಿ ಟಿಕೆಟ್ ವಂಚಿತ ಶಿವರಾಮಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈಗ ಹಾಲಿ ಸಂಸದ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಕುರಿತು ಚರ್ಚೆಯಾಗುತ್ತಿದೆ.

ಸತತ ಮೂರನೇ ಪ್ರಯತ್ನ:

ಬಿಜೆಪಿ ಸೋಲಿಸಿ, ಗೆಲುವು ಸಾಧಿಸಲು ಹಿಟ್ನಾಳ ಕುಟುಂಬ ಸತತ ಮೂರನೇ ಪ್ರಯತ್ನ ನಡೆಸುತ್ತಿದೆ. 2014ರಲ್ಲಿ ಕೆ. ಬಸವರಾಜ ಹಿಟ್ನಾಳ ಸ್ಪರ್ಧೆ ಮಾಡಿ ಕರಡಿ ವಿರುದ್ಧ ಪರಾಭವಗೊಂಡರೆ, 2019ರಲ್ಲಿ ಅವರ ಪುತ್ರ ರಾಜಶೇಖರ ಹಿಟ್ನಾಳ ಸ್ಪರ್ಧಿಸಿ ಪರಾಭವಗೊಂಡರು. ಎರಡು ಬಾರಿಯೂ ಸಂಗಣ್ಣ ಅವರೇ ಗೆಲುವು ಸಾಧಿಸಿದ್ದಾರೆ. ಆದರೆ, ಈಗ 2024ರಲ್ಲಿ ಬಿಜೆಪಿಯಿಂದ ಡಾ. ಬಸವರಾಜ ಸ್ಪರ್ಧೆ ಮಾಡಲಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದಿಂದ ಮರಳಿ ಯತ್ನವ ಮಾಡು ಎನ್ನುವಂತೆ ರಾಜಶೇಖರ ಹಿಟ್ನಾಳ ಅವರೇ ಮತ್ತೆ ಅಖಾಡದಲ್ಲಿದ್ದಾರೆ.

-------------------

ಇದುವರೆಗೂ ಆಯ್ಕೆಯಾದ ಸಂಸದರು

ವರ್ಷಹೆಸರು ಪಕ್ಷ

1952ಶಿವಮೂರ್ತಿಸ್ವಾಮಿ ಅಳವಂಡಿ ಪಕ್ಷೇತರ

1957 ಸಂಗಣ್ಣ ಅಗಡಿ ಪಕ್ಷೇತರ

1962 ಶಿವಮೂರ್ತಿಸ್ವಾಮಿ ಅಳವಂಡಿ ಲೋಕಸೇವಕ ಸಂಘ

1967ಸಂಗಣ್ಣ ಅಗಡಿ ಕಾಂಗ್ರೆಸ್

1971ಸಿದ್ದರಾಮೇಶ್ವರಸ್ವಾಮಿ ಕಾಂಗ್ರೆಸ್

1977ಸಿದ್ದರಾಮೇಶ್ವರಸ್ವಾಮಿ ಕಾಂಗ್ರೆಸ್

1980ಎಚ್. ಜಿ. ರಾಮುಲು ಕಾಂಗ್ರೆಸ್

1984ಎಚ್.ಜಿ. ರಾಮುಲು ಕಾಂಗ್ರೆಸ್

1989ಬಸವರಾಜ ಪಾಟೀಲ್ ಅನ್ವರಿ ಜನತಾದಳ

1991ಬಸವರಾದ ಪಾಟೀಲ್ ಅನ್ವರಿ ಕಾಂಗ್ರೆಸ್

1995ಬಸವರಾಜ ರಾಯರಡ್ಡಿ ಜನತಾದಳ

1998ಎಚ್.ಜಿ. ರಾಮುಲು ಕಾಂಗ್ರೆಸ್

1999ಎಚ್.ಜಿ. ರಾಮುಲು ಕಾಂಗ್ರೆಸ್

2004ಕೆ. ವಿರುಪಾಕ್ಷಪ್ಪ ಕಾಂಗ್ರೆಸ್

2009ಶಿವರಾಮಗೌಡ ಬಿಜೆಪಿ

2014ಸಂಗಣ್ಣ ಕರಡಿ ಬಿಜೆಪಿ

2019 ಸಂಗಣ್ಣ ಕರಡಿ ಬಿಜೆಪಿ