ಈಚಲಬೊಮ್ಮನಹಳ್ಳಿ ಗೋಳು ಕೇಳೋರ‍್ಯಾರು?

| Published : Feb 21 2024, 02:05 AM IST

ಸಾರಾಂಶ

ಈ ಗ್ರಾಮದ ಬಹುತೇಕ ರಸ್ತೆಗಳು ಕೊಳಚೆ ನೀರಿನಿಂದ ತುಂಬಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ಓಡಾಡುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಈಚಲಬೊಮ್ಮನಹಳ್ಳಿಯ ಜನರ ಗೋಳು ಕೇಳುವವರ‍್ಯಾರು?

ಚರಂಡಿಯಂತಿರುವ ರಸ್ತೆಗಳು, ಓಡಾಡುವ ದಾರಿಯ ಒತ್ತುವರಿ, ರಸ್ತೆಗಳಲ್ಲೇ ಕುರಿ, ದನ, ಮೇಕೆಗಳನ್ನು ಕಟ್ಟುವುದು, ಕುಡಿಯುವ ನೀರಿನ ಅಭಾವ ಹೀಗೆ ನಾನಾ ಸಮಸ್ಯೆಗಳಲ್ಲಿ ಒದ್ದಾಡುವ ಈ ಊರಿನ ಸಮಸ್ಯೆ ಯಾವುದೂ ಬಗೆಹರಿಯುತ್ತಿಲ್ಲ. ಹಾಗಾಗಿ ಗ್ರಾಮಸ್ಥರು ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಶಪಿಸುತ್ತ ಜೀವನ ಸಾಗಿಸುತ್ತಿದ್ದಾರೆ.

ತಾಲೂಕು ಕೇಂದ್ರದಿಂದ ಕೇವಲ ೪ ಕಿಮೀ ದೂರದಲ್ಲಿರುವ ಈಚಲಬೊಮ್ಮನಹಳ್ಳಿಯು ಬಡೇಲಡುಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇಲ್ಲಿ ೩೦೯ ಮನೆಗಳಿವೆ. ೨೧೩೦ ಜನಸಂಖ್ಯೆ ಹೊಂದಿದೆ. ಈ ಗ್ರಾಮದ ಬಹುತೇಕ ರಸ್ತೆಗಳು ಕೊಳಚೆ ನೀರಿನಿಂದ ತುಂಬಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ಓಡಾಡುವುದಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸೊಳ್ಳೆಗಳ ಕಾಟದಿಂದ ರೋಗಗಳು ಹರಡುವ ಭೀತಿಯೂ ಎದುರಾಗಿದೆ. ಇತ್ತೀಚೆಗೆ ಜಲಜೀವನ್ ಮಿಷನ್ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಗಳ ಮಧ್ಯೆ ಅಗೆದಿದ್ದರೂ, ಬೇಕಾಬಿಟ್ಟಿ ಎಂಬಂತೆ ಸರಿಪಡಿಸಿರುವುದು ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ.

ಗ್ರಾಮದ ಮಲಿಯಮ್ಮ ದೇವಸ್ಥಾನದಿಂದ ಮುಖ್ಯರಸ್ತೆ ಹಾಗೂ ಮಾರಮ್ಮನಗುಡಿಯ ಬಳಿಯ ರಸ್ತೆಗಳು ಸೇರಿ ನಾನಾ ಕಡೆ ಕೆಲವರು ಒತ್ತುವರಿ ಮಾಡಿಕೊಂಡಿದ್ದಲ್ಲದೆ, ಕುರಿ, ಮೇಕೆ, ಎಮ್ಮೆಗಳನ್ನೂ ರಸ್ತೆಯಲ್ಲೇ ಕಟ್ಟುತ್ತಾರೆ. ಇದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳು ಬೈಕ್, ಕಾರು, ಎತ್ತಿನಗಾಡಿಗಳಲ್ಲಿ ಓಡಾಡುವುದಕ್ಕೂ ಆಗದಂಥ ಸ್ಥಿತಿಯಿದೆ. ರಸ್ತೆ ಒತ್ತುವರಿ ಬಗ್ಗೆ ತಕರಾರು ಅರ್ಜಿ ಕೊಟ್ಟವರದ್ದೇ ತಪ್ಪು. ನಿಮ್ಮದೇನೂ ತಪ್ಪಿಲ್ಲ ಎಂದು ಒತ್ತುವರಿದಾರರ ಪರವಾಗಿ ಮಾತಾಡಿ ಹೋಗುವುದಷ್ಟೇ ಪಿಡಿಒ ಕೆಲಸ ಆಗಿದೆ ಎಂದು ಗ್ರಾಮದ ಯುವಕ ಕೆ. ಶಿವರಾಜ ಅವರ ಆರೋಪ. ಗ್ರಾಮದಲ್ಲಿರುವ ನೀರು ಶುದ್ಧೀಕರಣ ಘಟಕ ಸರಿಯಾಗಿ ಕಾರ್ಯನಿರ್ವಹಿಸ ಹಿನ್ನೆಲೆ ಕೆಲವರು ಕೂಡ್ಲಿಗಿಯಿಂದ ಶುದ್ಧ ನೀರು ತಂದರೆ, ಇನ್ನೂ ಕೆಲವರು ಗ್ರಾಮದ ನಳಗಳಲ್ಲಿ ದೊರೆಯುವ ಫ್ಲೋರೈಡ್ ನೀರೇ ಕುಡಿಯುತ್ತಾರೆ.

ನಿರ್ಲಕ್ಷ್ಯಕ್ಕೊಳಗಾದ ನತದೃಷ್ಟ ಹಳ್ಳಿ: ಈಚಲಬೊಮ್ಮನಹಳ್ಳಿಯು ಬಡೇಲಡುಕು ಗ್ರಾಪಂ ವ್ಯಾಪ್ತಿಯಲ್ಲಿದೆ. ೨೦೧೭- ೧೮ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ₹೧ ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಅರೆಬರೆ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಈ ಊರಲ್ಲಿ ಕೊಚ್ಚೆ ಇದೆಯೋ? ಅಥವಾ ಕೊಚ್ಚೆಯಲ್ಲಿ ಊರು ಇದೆಯೋ? ಎಂಬಷ್ಟು ಅನೈರ್ಮಲ್ಯತೆ ಎದ್ದು ಕಾಣುತ್ತಿದೆ.

ಜಿಪಂ ಸಿಇಒ ಆದೇಶಕ್ಕೂ ಕಿಮ್ಮತ್ತಿಲ್ಲ!: ಗ್ರಾಮದಲ್ಲಿ ರಸ್ತೆ ಒತ್ತುವರಿಯಾಗಿರುವ ಕೆ. ಶಿವರಾಜ ಅವರ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಸ್ಥಳ ತನಿಖೆ ನಡೆಸಿ, ಪಿಡಿಒ ಮತ್ತು ತಾಪಂ ಇಒ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ೨೦೨೨ರ ಆಗಸ್ಟ್ ೧೯ರಂದು ಆದೇಶಿಸಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ: ಈಚಲಬೊಮ್ಮನಹಳ್ಳಿಯಲ್ಲಿ ಕೆಲವರು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿರುವ ದೂರಿನ ಹಿನ್ನೆಲೆ ನೋಟಿಸ್ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿ ಆಗಾಗ ಸ್ವಚ್ಛತೆ ಮಾಡಿಸಿದ್ದೇವೆ. ಗ್ರಾಮ ವಿಕಾಸ ಯೋಜನೆಯ ಇನ್ನಷ್ಟು ಕಾಮಗಾರಿ ಬಾಕಿ ಉಳಿದಿವೆ ಎಂದು ಪಿಡಿಒ ಕೆ. ವಸಂತ ನಾಯ್ಕ ತಿಳಿಸಿದರು.ಒತ್ತುವರಿ ತೆರವಾಗಿಲ್ಲ: ಗ್ರಾಮದ ಅಭಿವೃದ್ಧಿ ಬಗ್ಗೆ ಸಾಕಷ್ಟು ಬಾರಿ ಗ್ರಾಪಂಯಲ್ಲಿ ತಿಳಿಸಿದರೂ ಸ್ಪಂದನೆ ಇಲ್ಲ. ಗ್ರಾಮದ ರಸ್ತೆಗಳ ಒತ್ತುವರಿ ತೆರವಾಗಿಲ್ಲ. ರಸ್ತೆಯಲ್ಲೇ ಕೊಳಚೆ ತುಂಬಿದ್ದರೂ ಸ್ವಚ್ಛತೆಗೆ ಆದ್ಯತೆ ಇಲ್ಲ. ಗ್ರಾಮ ವಿಕಾಸ ಯೋಜನೆ ಕಾಮಗಾರಿ ಅರೆಬರೆಯಾಗಿವೆ ಎಂದು ಗ್ರಾಪಂ ಸದಸ್ಯ ಈಡಿಗರ ಸಂತೋಷ ಕುಮಾರ್ ತಿಳಿಸಿದರು.