ಬರಗಾಲದಲ್ಲಿ ಹಂಪಿ ಉತ್ಸವ ಏತಕ್ಕೆ

| Published : Feb 03 2024, 01:46 AM IST

ಸಾರಾಂಶ

ಈ ನಾಡಿನಲ್ಲಿ ಹುಟ್ಟಿರುವುದೇ ನನ್ನ ಪುಣ್ಯ. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಹರಿಹರ, ರಾಘವಾಂಕ, ಬಸವಾದಿ ಶರಣರು ಹುಟ್ಟಿದ ಪುಣ್ಯಭೂಮಿ ಕರ್ನಾಟಕ. ಈ ನೆಲದ ಮಹಿಮೆ ದೊಡ್ಡದಿದೆ. ನಾಡು ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು

ಕೃಷ್ಣ ಎನ್‌. ಲಮಾಣಿ ಹಂಪಿ (ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ)

ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ ಅವರು ಹಂಪಿ ಉತ್ಸವದ ರೂವಾರಿ. ಆದರೆ, ಈ ಉತ್ಸವದ ಎಲ್ಲೂ ಎಂ.ಪಿ. ಪ್ರಕಾಶ ಅವರ ಬಗ್ಗೆ ಉಲ್ಲೇಖ ಮಾಡಲಾಗಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ವಿಷಾದಿಸಿದರು.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶುಕ್ರವಾರ ಹಂಪಿ ಉತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಂ.ಪಿ. ಪ್ರಕಾಶ ಅವರನ್ನು ನೆನಪಿಸುವ ಕಾರ್ಯ ಮಾಡಿಲ್ಲ. ಎಂ.ಪಿ. ಪ್ರಕಾಶ ಅವರು ಐತಿಹಾಸಿಕ, ಸಾಂಸ್ಕೃತಿಕ ಉತ್ಸವ ನಡೆಸುತ್ತಿದ್ದರು. ಈಗ ಅಂತಹ ಉತ್ಸವ ಮಾಡಲಾಗುತ್ತಿಲ್ಲ ಎಂದರು.

ಎಂ.ಪಿ. ಪ್ರಕಾಶ ಅವರು ಇಡೀ ನಾಡೇ ತಿರುಗಿ ನೋಡುವಂತೆ ಉತ್ಸವ ಆಚರಣೆ ಮಾಡುತ್ತಿದ್ದರು. ಅವರು ನಮ್ಮ ಕಲೆ, ಸಾಹಿತ್ಯವನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದರು. ಅವರ ಆಶಯದಂತೆ ನಾವು ಉತ್ಸವ ಆಚರಣೆ ಮಾಡಬೇಕು. ಆದರೆ, ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಉತ್ಸವ ಆಚರಣೆ ಮಾಡುತ್ತಿರುವುದು ನಿಜಕ್ಕೂ ವಿಷಾದನೀಯ ಎಂದರು.

ಹಂಪಿ ಒಂದು ಐತಿಹಾಸಿಕ ಪ್ರದೇಶವಾಗಿದೆ. ಹಂಪಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿರುವ ಹಂಪಿ ಪರಿಸರದಲ್ಲಿ ಅಪರೂಪದ ಪಕ್ಷಿ ಸಂಕುಲಗಳು ಕೂಡ ಇವೆ. ಮುಂದಿನ ಪೀಳಿಗೆಗೆ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕೊಂಡೊಯ್ಯಬೇಕು. ಇದಕ್ಕಾಗಿ ನಾವು ಹಂಪಿಯನ್ನು ಸಹಜ ಸ್ಥಿತಿಯಲ್ಲಿ ಉಳಿಸಿಕೊಂಡು ಸಾಗಬೇಕಿದೆ ಎಂದರು.

ಕನ್ನಡ ನಾಡು ನಿಜಕ್ಕೂ ಸುಂದರವಾಗಿದೆ. ಈ ನಾಡಿನಲ್ಲಿ ಹುಟ್ಟಿರುವುದೇ ನನ್ನ ಪುಣ್ಯ. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಹರಿಹರ, ರಾಘವಾಂಕ, ಬಸವಾದಿ ಶರಣರು ಹುಟ್ಟಿದ ಪುಣ್ಯಭೂಮಿ ಕರ್ನಾಟಕ. ಈ ನೆಲದ ಮಹಿಮೆ ದೊಡ್ಡದಿದೆ. ನಾಡು ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಹೂವಿನಹಡಗಲಿಯ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ರಾಜಕೀಯ, ಆರ್ಥಿಕತೆಯ ಬಗ್ಗೆ ವಿವರಿಸಿದರು.

ಹಂಪಿ ಪರಿಸರ ಪರಂಪರೆಯ ಕುರಿತು ವನ್ಯಜೀವಿ ಸಂಶೋಧಕ ಹಾಗೂ ಉಪನ್ಯಾಸಕ ಡಾ. ಸಮದ್ ಕೊಟ್ಟೂರು ಮಾತನಾಡಿ, ಈ ಹಂಪಿ ಪೌರಾಣಿಕ ಹಿನ್ನೆಲೆ ಹೊಂದಿದೆ. ಈ ಪ್ರದೇಶದಲ್ಲಿ ಅಪರೂಪದ ಹಳದಿ ಗಂಟಲಿನ ಪಿಕಳಾರ ಸೇರಿದಂತೆ 230ಕ್ಕೂ ಹೆಚ್ಚು ಹಕ್ಕಿಗಳ ಸಂಕುಲ ಇದೆ. ಕರಡಿ, ಚಿರತೆಗಳು, ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ನೀರು ನಾಯಿಗಳು ಮೊಸಳೆ, ಆಮೆಗಳು ಹಾಗೂ 90 ಪ್ರಭೇದದ ಮೀನುಗಳಿವೆ. ಸೂಕ್ಷ್ಮ ಪರಿಸರದಿಂದಾಗಿಯೇ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲು ಸಾಧ್ಯವಾಗಿದೆ. ಇದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಮೌಖಿಕ ಕಾವ್ಯಗಳಲ್ಲಿ ವಿಜಯನಗರ ಎಂಬ ವಿಷಯದ ಕುರಿತು ಡಾ. ಚಂದ್ರಪ್ಪ ಸೊಬಟಿ, ವ್ಯಾಸ ಕೂಟ ಮತ್ತು ದಾಸ ಕೂಟ ಸಾಂಸ್ಕೃತಿಕ ಮುಖಾಮುಖಿ ಕುರಿತು ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ, ವಿಜಯನಗರ ಕಾಲದ ಬೇಹುಗಾರಿಕೆ ಹಾಗೂ ಗೂಢಚಾರಿಕೆ ಸಂಬಂಧಗಳ ಕುರಿತು ಡಾ. ಕೆ.ಎಸ್. ಶಿವಪ್ರಕಾಶ್ ಹಾಗೂ ವರ್ತಮಾನ ಸಂದರ್ಭದಲ್ಲಿ ಹಂಪಿಯ ಕುರಿತು ಡಾ. ವೀರೇಶ್ ಉತ್ತಂಗಿ ವಿಚಾರ ಮಂಡಿಸಿದರು.

ಹಂಪಿ ಕನ್ನಡ ವಿವಿಯ ಡಾ. ಕೆ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಯಕರ ಹುಲುಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಪಾಲಾಕ್ಷ, ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತಿತರರಿದ್ದರು. ಜಗದೀಶ್‌ ಚಂದ್ರ ಬೋಸ್‌, ಕವಿತಾ ಕಟ್ಟೇಗೌಡರ ನಿರ್ವಹಿಸಿದರು. ಪ್ರವಾಸಕ್ಕೆ ಆಗಮಿಸಿದ್ದ ಕೊಪ್ಪಳ, ಯಾದಗಿರಿ ಜಿಲ್ಲೆಯ ಶಾಲಾ ಮಕ್ಕಳು ಕೂಡ ವಿಚಾರಗೋಷ್ಠಿ ಆಲಿಸಿದರು. ಸಾಹಿತಿ ಕುಂ. ವೀರಭದ್ರಪ್ಪನವರ ಜತೆ ಫೋಟೋ ತೆಗೆಸಿಕೊಂಡು ಮಕ್ಕಳು

ಬರದಲ್ಲಿ ಆಚರಣೆ ಸಲ್ಲ:

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಯಾವ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿರುತ್ತಾರೋ ಆ ರಾಜ್ಯ ಸುಭಿಕ್ಷವಾಗಿರುವುದಿಲ್ಲ. ಈ ಹೊತ್ತಿನಲ್ಲಿ ₹15ರಿಂದ ₹20 ಕೋಟಿ ಖರ್ಚು ಮಾಡಿ ಉತ್ಸವ ಮಾಡಬಾರದಿತ್ತು. ಈ ಹಂತದಲ್ಲಿ ಹಂಪಿ ಉತ್ಸವ ಮಾಡುತ್ತಿರುವುದು ಸರಿಯಲ್ಲ ಎಂದು ಕುಂ. ವೀರಭದ್ರಪ್ಪ ತಿಳಿಸಿದರು.

ಹಂಪಿ ಉತ್ಸವ ಸಮೃದ್ಧತೆ ನೆಲೆಗೊಂಡಾಗ ಆಚರಿಸಬೇಕು. ನೃಪತುಂಗ ಕವಿ, ರೈತ ಕಣ್ಣೀರು ತೆಗೆದರೆ; ರಾಜ್ಯ ಸುಭಿಕ್ಷವಾಗಿರುವುದಿಲ್ಲ ಎಂದಿದ್ದಾರೆ. ಒಂದು ರಾಜ್ಯ ಸುಭಿಕ್ಷವಾಗಬೇಕಾದರೆ, ಮೊದಲು ರೈತರು ಖುಷಿಯಲ್ಲಿರಬೇಕು. ಈಗ ಬರಗಾಲ ಇದೆ. ಇಂತಹ ಹೊತ್ತಿನಲ್ಲಿ ಹಂಪಿ ಉತ್ಸವಕ್ಕೆ ₹20 ಕೋಟಿ ಖರ್ಚು ಮಾಡಿ ಉತ್ಸವ ಮಾಡುವ ಹೊತ್ತು ಇದಲ್ಲ. ಆದರೆ, ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಖುಷಿಪಟ್ಟರು.