ಸಾರಾಂಶ
ಬಿ.ಜಿ.ಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಎತ್ತಿನ ಗಾಡಿ ಮುಗುಚಿ 21 ಜನರ ಸಾವಿಗೆ ಕಾರಣವಾಗಿದ್ದ ತಾಲೂಕಿನ ಮಾಚೇನಹಳ್ಳಿ ಚಿನ್ನಹಗರಿ ನದಿಯ ದುರ್ಘಟನೆ ನಡೆದು ಎರಡು ದಶಕದ ಸನಿಹಕ್ಕೆ ಬಂದರೂ, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಇಂದಿಗೂ ಸೇತುವೆ ನಿರ್ಮಾಣಕ್ಕೆ ಮುಂದಾಗದಿರುವುದು ಭರವಸೆ ಹೊತ್ತಿದ್ದ ಜನರ ಕನಸು ನದಿಯ ಮರಳಲ್ಲಿ ಹೂತು ಹೋಗುವಂತಾಗಿದೆ.
ತಾಲೂಕಿನ ಮಾಚೇನಹಳ್ಳಿ ಸಮೀಪದಲ್ಲಿ ಹಾದು ಹೋಗಿರುವ ಚಿನ್ನಹಗರಿ ನದಿಯಲ್ಲಿ 2009ರ ಮಾರ್ಚ್ 20 ರಂದು ಮದುವೆ ಸಂಭ್ರಮ ಮುಗಿಸಿಕೊಂಡು ನದಿ ದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಎತ್ತಿನ ಗಾಡಿ ಕೊಚ್ಚಿಕೊಂಡು ಹೋಗಿತ್ತು. ಎತ್ತಿನ ಗಾಡಿಯಲ್ಲಿದ್ದ ದಲಿತ ಸಮುದಾಯದ ಒಂದೇ ಕುಟುಂಬದ ಹತ್ತು ಜನರು ಸೇರಿದಂತೆ ಒಟ್ಟು 21 ಜನರು ಜಲ ಸಮಾಧಿಯಾಗಿದ್ದರು. ಈ ಘಟನೆಯಿಂದ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಂದು ಸ್ಮಶಾನ ಮೌನ ಆವರಿಸಿತ್ತು. ಘಟನೆಗೆ ನದಿಯಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಯೇ ಪ್ರಮುಖ ಕಾರಣ ಎನ್ನಲಾಗಿತ್ತು. ಈ ದುರಂತದಿಂದ ಸ್ಥಳಕ್ಕೆ ಬಂದಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕರುಣಾಕರ ರೆಡ್ಡಿ ಸೇರಿದಂತೆ ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಲ್ಲದೆ, ಪರಿಹಾರ ರೂಪದಲ್ಲಿ ಕೈಗೊಂದಿಷ್ಟು ಎರಡಂಕಿಯ ಬಿಡಿಗಾಸು ಕೊಟ್ಟು, ಸೇತುವೆ ನಿರ್ಮಾಣದ ಭರಪೂರ ಭರವಸೆಗಳನ್ನು ನೀಡಿದ್ದರು. ಆದರೆ ಮೃತರ ಕುಟುಂಬಗಳಿಗೆ ಕೇವಲ 50 ಸಾವಿರ ಹೊರತು ಪಡಿಸಿ ಬೇರೇನೂ ಪರಿಹಾರ ದೊರೆತಿಲ್ಲ. ಹೆಚ್ಚಿನ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಘಟನೆಯಲ್ಲಿ ಬದುಕುಳಿದವರ ಮಾತಾಗಿದೆ. ಚಿನ್ನಹಗರಿ ಮಧ್ಯೆ ಹಾದು ಹೋಗಿರುವ ಮಾಚೇನಹಳ್ಳಿ ಹಾಗೂ ತಿಮ್ಲಾಪುರ ರಸ್ತೆ ಎರಡೂ ಭಾಗದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವೆಂಕಟಾಪುರ ಮತ್ತು ಮಾಚೇನಹಳ್ಳಿಯ ಮಧ್ಯೆ ಕೇವಲ ಎರಡು ಕಿ.ಮೀ. ಅಂತರವಿದೆ. ಹೊಸ ಕೋಟೆ, ಹನುಮಾಪುರ, ವೀರಾಪುರ, ಕಾಡು ಸಿದ್ದಾಪುರ, ಅಶೋಕ ಸಿದ್ದಾಪುರ ಸೇರಿದಂತೆ ಆಂಧ್ರದ ಹತ್ತಾರು ಹಳ್ಳಿಗಳಿಗೆ ಏಕೈಕ ರಸ್ತೆ ಇದಾಗಿದ್ದು, ಇಂದಿಗೂ ಆಂಧ್ರ ಪ್ರದೇಶದ ನೂರಾರು ಗ್ರಾಮಗಳ ಸಂಬಂಧಗಳನ್ನು ಬೆಸೆದುಕೊಂಡಿವೆ. ನದಿಯಲ್ಲಿ ನೀರು ಹರಿಯುತ್ತಿದ್ದರೆ ರಾಂಪುರ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ತೆರಳಲು 15 ಕಿ.ಮಿ.ಸುತ್ತಿ ಬರುವಂತಾ ಸ್ಥಿತಿ ಇದ್ದರೂ ಸೇತುವೆ ಮಾತ್ರ ಇಂದಿಗೂ ನಿರ್ಮಾಣವಾಗದಿರುವುದು ಅಧಿಕಾರಿಗಳ ಇಚ್ಛಾಶಕ್ತಿಗೆ ಹಿಡಿದ ಕೈಗನ್ನಡಿಯಂತಿದೆ.ತುಂಬಿ ಹರಿಯುತ್ತಿರುವ ಚಿನ್ನಹಗರಿ ಸಂಪರ್ಕ ಕಳೆದುಕೊಂಡ ಗ್ರಾಮಗಳು: ಸದಾ ಬರದಿಂದ ಬತ್ತಿ ಹೋಗಿದ್ದ ಚಿನ್ನಹಗರಿ ನದಿಯಲ್ಲಿ ಇತ್ತೀಚೆಗೆ ಸುರಿದ ಭರ್ಜರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಈ ಭಾಗದ ಹತ್ತಾರು ಹಳ್ಳಿಗಳು ಸಂಪರ್ಕ ಕಡಿತಗೊಂಡಿದ್ದು, ಜನರು 15 ಕಿ.ಮೀ ಸುತ್ತಿ ವಿವಿಧ ಗ್ರಾಮಗಳಿಗೆ ತೆರಳುವಂತಾಗಿದೆ. 6 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ 1 ಕೋಟಿ ರು. ವೆಚ್ಚದ ಸಿ.ಸಿ.ರಸ್ತೆ ನೀರಿನ ರಬಸಕ್ಕೆ ಕೊಚ್ಚಿ ಹೋಗಿದೆ. ಇದ್ದ ರಸ್ತೆಯು ನೀರು ಪಾಲಾಗಿರುವುದರಿಂದ ಜನರಿಗೆ ಇನ್ನಷ್ಟು ಸಮಸ್ಯೆಯನ್ನು ತಂದೊಡ್ಡಿದಂತಾಗಿದೆ.ಚಿನ್ನಹಗರಿ ದುರಂತ ನಡೆದು ಎರಡು ದಶಕದ ಸಮೀಪಕ್ಕೆ ಬಂದರೂ ಮೃತರಿಗೆ ಹೆಚ್ಚಿನ ಪರಿಹಾರವೂ ಇಲ್ಲ. ಸ್ಥಳದಲ್ಲಿ ಸೇತುವೆಯೂ ನಿರ್ಮಾಣವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ತಯಾರಿಸಿದ್ದ ಕಡತವು ಎಲ್ಲಿದೆ. ಯಾವ ಹಂತದಲ್ಲಿದೆ ಎನ್ನುವುದು ಯಾವೊಬ್ಬ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಆದರೆ ಅಂದು ಸೇತುವೆ ಇಲ್ಲದೆ ಮರಳು ದಾರಿಯೇ ಆಶ್ರಯವಾಗಿದ್ದ ರಸ್ತೆಯಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಜೀವ ತೆತ್ತ ಕುಟುಂಬಸ್ಥರ ಹೃದಯದ ನೋವು ಯಾರಿಗೂ ಕಾಣದಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತೊಂದು ಘೋರ ದುರಂತ ಸಂಭವಿಸುವ ಮುನ್ನಾ ಸ್ಥಳದಲ್ಲಿ ಸೇತುವೆ ನಿರ್ಮಿಸಬೇಕೆನ್ನುವುದು ಜನತೆಯ ಬೇಡಿಕೆಯಾಗಿದೆ.ಉತ್ತಮ ಮಳೆಯಿಂದಾಗಿ ಚಿನ್ನಹಗರಿ ನದಿಯು ತುಂಬಿ ಹರಿಯುತ್ತಿದೆ. ಪರಿಣಾಮವಾಗಿ ಈ ಭಾಗದ ಹಳ್ಳಿಗಳ ಸಂಪರ್ಕ ಕಡಿದುಗೊಳ್ಳುವಂತೆ ಮಾಡಿದೆ. ಮಾಚೇನಹಳ್ಳಿ ಮತ್ತು ವೆಂಕಟಾಪುರ ಮಧ್ಯೆ ಸೇತುವೆ ನಿರ್ಮಾಣ ಅಗತ್ಯತೆ ಇದೆ. ಇದರಿಂದ ಈ ಭಾಗದ ಹತ್ತಾರು ಹಳ್ಳಿಗಳಿಗೆ ನೆರವಾಗಲಿದೆ.
- ಚಂದ್ರಣ್ಣ. ದೇವಸಮುದ್ರಘಟನೆಯಲ್ಲಿ ನನ್ನ ಗಂಡ ಸೇರಿದಂತೆ ಕುಟುಂಬದ ಹತ್ತು ಜನರು ನೀರು ಪಾಲಾದರು. ಅಂದು ತಲಾ 2 ಲಕ್ಷ ರು. ಪರಿಹಾರ ನೀಡುತ್ತೇವೆಂದು ಹೇಳಿದ ಅಧಿಕಾರಿಗಳು ಕೇವಲ 50 ಸಾವಿರ ನೀಡಿ ಕೈತೊಳೆದುಕೊಂಡರು. ಪರಿಹಾರಕ್ಕಾಗಿ ನಾವುಗಳು ವಿಧಾನಸೌಧದವರೆಗೂ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಈಗಲಾದರೂ ಮೃತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. - ಲಕ್ಷ್ಮಿ ವೆಂಕಟಾಪುರ.(ಘಟನೆಯಲ್ಲಿ ಗಂಡನನ್ನು ಕಳೆದುಕೊಂಡವರು )ಚಿನ್ನಹಗರಿ ನದಿಯಲ್ಲಿ 21 ದಲಿತ ಸಮುದಾಯದವರು ಮೃತಪಟ್ಟರೂ ಸರ್ಕಾರ 2 ಲಕ್ಷ ರು ಪರಿಹಾರ ನೀಡುತ್ತೇವೆಂದು ಅಲ್ಪ ಪ್ರಮಾಣದ ಪರಿಹಾರ ನೀಡಿ ಕೈತೊಳೆದುಕೊಂಡಿತು. ಅನೇಕ ಬಾರಿ ಕಚೇರಿಗೆ ಎಡತಾಕಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಇನ್ನಾದರೂ ಸ್ಥಳದಲ್ಲಿ ಸೇತುವೆ ನಿರ್ಮಾಣದ ಜತೆಗೆ ಮೃತರ ಕುಟುಂಬಕ್ಕೆ ಇನ್ನಷ್ಟು ಪರಿಹಾರ ಒದಗಿಸಬೇಕು. - ಕೊಂಡಾಪುರ ಪರಮೇಶ, ದಸಂಸ ಜಿಲ್ಲಾ ಸಂಚಾಲಕ