ಸಾರಾಂಶ
ಅಸ್ಪೃಶ್ಯತೆ ಹೋಗಲಾಡಿಸಬೇಕೆಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ ಅಸ್ಪೃಶ್ಯತೆ ಅನ್ನೋದು ಇನ್ನೂ ದೂರವಾಗಿಲ್ಲ
ಚವಡಾಪುರ : ಅಸ್ಪೃಶ್ಯತೆ ಹೋಗಲಾಡಿಸಬೇಕೆಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ ಅಸ್ಪೃಶ್ಯತೆ ಅನ್ನೋದು ಇನ್ನೂ ದೂರವಾಗಿಲ್ಲ. ಮುಸಲ್ಮಾನರಲ್ಲಿ, ಕ್ರಿಶ್ಚಿಯನ್ನರಲ್ಲಿ ಮುಟ್ಟಿ ತಟ್ಟಿ ಅಷ್ಟಾಗಿ ಮಾಡೋದಿಲ್ಲ. ಆದರೆ ಹಿಂದುಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ? ಎಂದು ಎಐಸಿಸಿ ಅದ್ಯಕ್ಷರು, ರಾಜ್ಯಸಬೆ ವಿರೋಧ ಪಕ್ಷ ನಾಯಕರೂ ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದಲ್ಲಿ ಶನಿವಾರ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣದಲ್ಲಿ ಪಾಲ್ಗೊಂಡು ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಸಮಸ್ತ ಹಿಂದುಗಳು ಜಾತಿ ಬಿಟ್ಟು ಒಂದಾದರೆ ನಮ್ಮ ಮೇಲೆ ಯಾರು ದಾಳಿ ಮಾಡಲು ಸಾಧ್ಯವಿಲ್ಲವೆಂದರು.
ನಮ್ಮ ಒಗ್ಗಟ್ಟು ನಮ್ಮ ಶಕ್ತಿಯಾಗಿದೆ. ಆದರೆ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ನಮ್ಮನ್ನೆಲ್ಲಾ ಒಡೆದು ಆಳುತ್ತಾರೆ. ಎಲ್ಲಿಯತನಕ ಹಿಂದು ಧರ್ಮದಲ್ಲಿ ಜಾತಿ ತಾರತಮ್ಯ ತಾರಕದಲ್ಲಿ ಇರುತ್ತದೋ ಅಲ್ಲಿ ತನಕ ಸಮಸ್ಯೆಗಳು ಸರಿಯಾಗೋದಿಲ್ಲವೆಂದರು.
ಬಸವಣ್ಣನವರು ಸ್ವತಂತ್ರವಾಗಿ ಲಿಂಗಾಯತ ಧರ್ಮ ಕಟ್ಟಿ ಎಲ್ಲರಿಗೂ ನನ್ನವರೆಂದು ಅಪ್ಪಿಕೊಂಡರು. ಆದರೆ ನಮಗೆ ಲಿಂಗಾಯತರಲ್ಲೂ ನಮ್ಮನ್ನ ಸೇರಿಸಿಕೊಳ್ಳಲಿಲ್ಲ, ಹಿಂದುಗಳಲ್ಲೂ ಸೇರಿಸಿಕೊಳ್ಳಲ್ಲ. ಇದನ್ನೆಲ್ಲಾ ನೋಡಿ ಬೇಸರಗೊಂಡು ಧರ್ಮಗಳ ಅಧ್ಯಯನ ನಡೆಸಿ ಸಮಾನತೆ ಇರುವ ನಮ್ಮ ದೇಶದ ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ಬಾಬಾಸಾಹೇಬರು ಹೋದರೆಂದು ಹೇಳಿದರು.
ಇಡೀ ಭಾರತದ 140 ಕೋಟಿ ಜನರ ಭವಿಷ್ಯ ಬರೆದ ಮಹಾ ಪುರುಷ ಅಂಬೇಡ್ಕರ್. ಆದರೆ ದುರ್ದೈವ ಏನಂದ್ರೆ ಅಂಬೇಡ್ಕರ್ ಅವರನ್ನು ದಲಿತ ನಾಯಕರೆಂದು ಸಿಮೀತಗೊಳಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದರು.
ಆರ್ಟಿಕಲ್ 14 ಮತ್ತು 15 ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಿದೆ. 16ನೇ ಕಲಂ ನಲ್ಲಿ ಮಿಸಲಾತಿ ಕಲ್ಪಿಸಿದ್ದಾರೆ. ಇದರಡಿ ಎಲ್ಲಾ ಜಾತಿಯ ಹಿಂದುಳಿದ ವರ್ಗದ ಜನ, ತುಳಿತಕ್ಕೊಳಗಾದವರಿಗೆಲ್ಲ ಮಿಸಲಾತಿ ಕಲ್ಪಿಸಿದ್ದಾರೆ. ಸಂವಿಧಾನದಲ್ಲಿ ದಲಿತರಿಗಾಗಿ ಒಂದು ಕಲಂ ಇದ್ದರೆ, ಉಳಿದ ಎಲ್ಲಾ ಕಲಂಗಳು ಉಳಿದವರ ರಕ್ಷಣೆಗಾಗಿ ಮತ್ತು ಹಕ್ಕುಗಳಿಗಾಗಿ ಬಾಬಾಸಾಹೇಬರು ಬರೆದಿದ್ದಾರೆ.
ಕೆಲವರು ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಾರಾ? ಎಂದು ವ್ಯಂಗ್ಯ ಮಾಡುತ್ತಾರೆ. ಅಂತವರಿಗೆ ಹುಟ್ಟು ಗುಣ ಸುಟ್ಟರು ಹೋಗಲ್ಲ ಅನ್ನೋ ರೀತಿಯವರು ಅವರೆಲ್ಲ ಎಂದು ತಿವಿದರು. ಆದರೆ ದೇಶದಲ್ಲಿ ಈಗ ಸ್ವತಂತ್ರ ಇಲ್ಲವಾಗಿದೆ. ಯಾರಾದರೂ ವ್ಯವಸ್ಥೆಯ ವಿರುದ್ದ, ಸರ್ಕಾರದ ವಿರುದ್ದ ಮಾತನಾಡಿದರೆ, ಸಾಹಿತ್ಯ ರೂಪದಲ್ಲಿ ಹಾಡಿದರೆ ಅಂತವರನ್ನು ಜೈಲಿಗೆ ಹಾಕಿಸುತ್ತಾರೆ ಎಂದು ವಿಷಾದಿಸಿದರು.
341 & 342 ಕಲಂ ಅಡಿಯಲ್ಲಿ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಜನಸಂಖ್ಯೆ ಆಧಾರದಲ್ಲಿ ರಾಜಕೀಯ ಸ್ಥಾನಮಾನ ಕೊಡಬೇಕೆಂದು ಬಾಬಾಸಾಹೇಬರು ಮಿಸಲಾತಿ ಕಲ್ಪಿಸಿದ್ದಾರೆ. ಆರ್.ಎಸ್.ಎಸ್ ಮತ್ತು ಬಿಜೆಪಿಗರು ಜನ್ಮತಃ ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಗಳಾಗಿದ್ದರೆ ನೆಹರು ಅವರು ಸಂವಿಧಾನ ರಚನೆಗೆ ಅಂಬೇಡ್ಕರ್ ಅವರಿಗೆ ಮೊದಲ ಸಂಪುಟದಲ್ಲಿ ಅವಕಾಶ ನೀಡುತ್ತಿರಲಿಲ್ಲ. ಇದನ್ನು ಈ ಬಿಜೆಪಿ ಮತ್ತು ಸಂಘ ಪರಿವಾರದವರು ಅರಿತುಕೊಳ್ಳಬೇಕೆಂದರು.
ಜಾತಿವಾದಿಗಳಿಂದ ಎಚ್ಚರ:
ನಿಮ್ಮ ನಡುವೆ ಜಗಳ ಹಚ್ಚುವ ಹುನ್ನಾರ ನಡೆಸಿರುವವರು ಯಾವಾಗಲೂ ಕೈಯಲ್ಲಿ ಪೆಟ್ರೋಲ್ ಹಿಡಿದು ದೇಶದ ತುಂಬಾ, ಗಲ್ಲಿ ಗಲ್ಲಿಯ ತುಂಬಾ ತಿರುಗುತ್ತಿದ್ದಾರೆ. ಅವರು ಧರ್ಮದ ಮುಖವಾಡ ಧರಿಸಿದ್ದಾರೆ. ಅವರಿಂದ ಜನ ಜಾಗರೂಕತೆಯಿಂದ ಇರಬೇಕು. ನೀವು ಜಾತಿಗಳ ನಡುವೆ ಜಗಳ ಆಡೋದು ಬಿಟ್ಟು ಒಗ್ಗಟ್ಟಾದರೆ ಇಡೀ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎಂದರು.
ಬಾಬಾಸಾಹೇಬರು ಕಷ್ಟ ಪಟ್ಟು ದೇಶಕ್ಕೆ ಸಮರ್ಪಿಸಿದ ಸಂವಿಧಾನ ಉಳಿಸಿದ ಕೆಲಸ ಈಗ ದೇಶವಾಸಿಗಳ ಹೆಗಲ ಮೇಲಿದೆ. ಸಂವಿಧಾನ್ ಬಚಾ ತೋ ಭಾರತ್ ಬಚೇಗಾ, ನಹಿ ತೋ ಏ ಸಂಘ, ಬಿಜೆಪಿ ಕೆ ಲೋಗ್ ಬಟಾ ಬಟಾಕೆ ಭಾರತ್ ತೋಡತಾ ಹೈ. ಭಾರತಕ್ಕೆ 1947ಕ್ಕೆ ಸ್ವಾತಂತ್ರ್ಯ ಸಿಕ್ಕರೆ ನಮ್ಮ ಭಾಗಕ್ಕೆ 1948ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಅದಕ್ಕೂ ಕೂಡ ಅಂಬೇಡ್ಕರ್ ಕೊಡುಗೆ ಕಾರಣವಿದೆ ಎಂದರು.
ಈ ಮೋದಿ ಬಂದ ಮೇಲೆ 2015 ರಲ್ಲಿ ಲೇಬರ್ ಕಾನ್ಫರೆನ್ಸ್ ರದ್ದುಗೊಳಿಸಿದ್ದಾರೆ. 1942ರಲ್ಲಿ ಅಂಬೇಡ್ಕರ್ ಅವರು ಲೇಬರ್ ಕಾನ್ಫರೆನ್ಸ್ ಆರಂಭಿಸಿದ್ದರು. ದುಡಿಯುವ ವರ್ಗದ ಜನ ಮತ್ತು ಮಾಲೀಕರ ನಡುವೆ ಸಂವಾದ ನಡೆಯಬೇಕು, ಕಾರ್ಮಿಕರ ಹಕ್ಕುಗಳ ರಕ್ಷಣೆ ಆಗಬೇಕೆಂದು ಈ ಕಾನ್ಫರೆನ್ಸ್ ನ ಉದ್ದೇಶವಾಗಿತ್ತು. ಆದರೆ ಮೋದಿ ಈ ಲೇಬರ್ ಕಾನ್ಫರೆನ್ಸ್ ರದ್ದುಗೊಳಿಸುವ ಮೂಲಕ ಮಾಲೀಕರು ಮತ್ತು ಕಾರ್ಮಿಕರ ನಡುವೆ ಯಾವುದೇ ಸಂವಾದ ನಡೆಯಬಾದೆಂದು ಹುನ್ನಾರ ಮಾಡಿ ರದ್ದುಗೊಳಿಸಿದ್ದಾರೆ. ಹೀಗಾದಾಗ ಕಾರ್ಮಿಕರ ಹಿತರಕ್ಷಣೆ ಹೇಗೆ ಸಾಧ್ಯ ಅನ್ನೋದು ದೇಶದ ಜನ ಅರ್ಥ ಮಾಡಿಕೊಳ್ಳಬೇಕೆಂದರು.
ಬಾಬಾಸಾಹೇಬರು ಮಹಿಳೆಯರಿಗಾಗಿ ಮಾಡಿದ ಕಾರ್ಯ ಯಾರು ಸ್ಮರಿಸುವುದೇ ಇಲ್ಲ. ಹಿಂದು ಕೋಡ್ ಬಿಲ್ ಅಂದು ಜಾರಿಗೆ ಬಂದಿದ್ದರೆ ಇಂದು ದೇಶ ನಿಜವಾಗಿಯೂ ವಿಶ್ವಗುರು ಆಗುತ್ತಿತ್ತು. ನೆಹರು ಒಪ್ಪಿದರು ಉಳಿದ ಮೇಲ್ಜಾತಿಯ ಅಂದಿನ ಮುಖಂಡರು ಒಪ್ಪಲಿಲ್ಲ. ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ತಂದು ಕೊಟ್ಟವರು ಬಾಬಾಸಾಹೇಬರು. ಆದರೆ ಯಾರು ಕೂಡ ಅವರನ್ನು ಸ್ಮರಿಸದಿರುವುದು ಖೇದಕರ. ಹಿಂದು ಕೋಡ್ ಬಿಲ್ ಜಾರಿಗೆ ಬಾರದೇ ಇರುವುದರಿಂದ ಬೇಜಾರಾಗಿ ಮಹಿಳೆಯರಿಗೆ ನಾನು ನ್ಯಾಯ ಕೊಡಲಾಗಲಿಲ್ಲ ಎಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದರು.
ಸತ್ಯ ಅರಿಯದವರು ಕಾಂಗ್ರೆಸ್‌ಗೆ ಜರಿಯುತ್ತಾರೆ
ಕಾಂಗ್ರೆಸ್ ಪಕ್ಷದ ಅನುಶಾಸನ್ ಕಾ ಹಿ ಕಮಾಲ್ ಹೈ ಎಂದು ಅಂದು ಸಂವಿಧಾನ ಸಮರ್ಪಣೆ ಮಾಡುವ ದಿನ ಬಾಬಾಸಾಹೇಬರು ಕಾಂಗ್ರೆಸ್ ಪಕ್ಷದ ಕುರಿತು ಹೇಳಿದ್ದು ಆನ್ ರೆಕಾರ್ಡ್ ಇದೆ. ಆದರೂ ಬಹಳಷ್ಟು ಜನ ಕಾಂಗ್ರೆಸ್ ಪಕ್ಷವನ್ನು ಜರಿಯುತ್ತಾರೆ. ಸತ್ಯಸಂಗತಿಗಳನ್ನು ಅರಿಯದವರು ಆರೋಪ ಮಾಡುತ್ತಾರೆ, ಕೆಲವರು ಸತ್ಯ ಗೊತ್ತಿದ್ದು ಕೂಡ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ.
ಎಸ್.ಎ ಡಾಂಗೆ, ಮತ್ತು ಸಾವರ್ಕರ್ ಅವರ ಕೈವಾಡದಿಂದ ನಾನು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಅಂಬೇಡ್ಕರ್ ಅವರೇ ಕೈಯಿಂದ ಬರೆದ ಪತ್ರವಿದೆ ಎಂದರು. ಬಿಜೆಪಿ, ಜನಸಂಘ, ಆರ್.ಎಸ್.ಎಸ್ ನವರಿಂದ ಜನ ಹುಷಾರಾಗಿರಬೇಕು. ಮತ್ತೊಮ್ಮೆ ಮನುಸ್ಮೃತಿ ಜಾರಿಗೆ ಅವರು ಜಾತಿ, ಧರ್ಮದ ಮುಖವಾಡ ಧರಿಸಿ ಹುನ್ನಾರ ನಡೆಸುತ್ತಿದ್ದಾರೆ ಎಂದರು.
6 ತಿಂಗಳ ಹಿಂದೆಯೇ ಗೊಬ್ಬೂರಲ್ಲಿ ಅಂಬೇಡ್ಕರ್ ಪುತ್ಥಳಿಗೆ ಸಿದ್ಧತೆ:
ಶಾಸಕರಾದ ಎಂ.ವೈ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಗೊಬ್ಬೂರ ಗ್ರಾಮದಲ್ಲಿ ನಿರ್ಮಿಸಿದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಆರು ತಿಂಗಳ ಹಿಂದೆ ಆಗಬೇಕಾಗಿತ್ತು, ಆದರೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ದಿನಾಂಕ ಸಿಗದೇ ಇರುವುದರಿಂದ ತಡವಾಯಿತು ಎಂದರು.
ಮೂರ್ತಿಗಳು ಕೇವಲ ಪಂಚಲೋಹದ ಶಿಲ್ಪಗಳಲ್ಲ. ಅದರೊಳಗೆ ಮೌಲ್ಯಗಳು ಅಡಗಿವೆ. ಅಂಬೇಡ್ಕರ್ ಅವರ ಪ್ರತಿಮೆ ನೋಡುವಾಗ ಅವರು ಅನುಭವಿಸಿದ ವೇದನೆ ಅದರ ಹೊರತಾಗಿ ಅವರು ಮಾಡಿದ ಸಾಧನೆ, ಇಡೀ ಸಮಸ್ತ ಭಾರತೀಯರಿಗಾಗಿ ಮಾಡಿದ ಸೇವೆ ಮರೆಯಲಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೊಬ್ಬೂರಲ್ಲಿ ಅಂಬೇಡ್ಕರ್ ಪುತ್ಥಳಿ ಎದ್ದು ನಿಲ್ಲಲು ಕಾರಣೀಕರ್ತರಾದ ಅರುಣ ಎಂವೈ ಪಾಟಾಲರಿಗೆ ಅಭಿಮಾನಿಗಳು ಮಾಲೆ ಹಾಕಿ ಗೌರವಿಸಿದರು. ವೇದಿಕೆ ಮೇಲೆ ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಮಹಾಂತ ಮಠ ಚಿನ್ಮಯಗಿರಿ, ಪೂಜ್ಯ ಭಂತೆ ವರಜ್ಯೋತಿ ಥೇರೋ ಅಣದೂರ ಬುದ್ಧವಿಹಾರ, ಶಾಸಕರಾದ ಎಂ.ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಖನೀಜ ಫಾತೀಮಾ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ, ಎಸ್.ಕೆ ಕಾಂತಾ, ರೇವುನಾಯಕ ಬೆಳಮಗಿ, ಬಾಬುರಾವ್ ಚಿಂಚನಸೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಮೇಶ ಪೂಜಾರಿ, ಮಶಾಕ್ ಪಟೇಲ್, ಪುತ್ಥಳಿ ಅನಾವರಣ ಸ್ವಾಗತ ಸಮಿತಿ ಅಧ್ಯಕ್ಷ ಅರುಣಕುಮಾರ ಎಂ.ವೈ ಪಾಟೀಲ್, ಮುಖಂಡರಾದ ಅಫ್ತಾಬ್ ಪಟೇಲ್, ಮತೀನ್ ಪಟೇಲ್, ಪ್ರಕಾಶ ಜಮಾದಾರ, ರವಿ ಶೆಟ್ಟಿ, ಸಿದ್ದು ಶಿರಸಗಿ, ಜ್ಯೋತಿ ಮರಗೋಳ, ಅರುಣಕುಮಾರ ಪಾಟೀಲ್ ಗೊಬ್ಬೂರ, ಡಾ. ಹನುಮಂತರಾವ್ ದೊಡ್ಮನಿ, ಲಚ್ಚಪ್ಪ ಜಮಾದಾರ, ವಾಸು ವಂಟಿ, ಡಿ.ಜಿ ಸಾಗರ್ ಸಿದ್ಧಾರ್ಥ ಬಸರಿಗಿಡ, ವಿಶ್ವನಾಥ ಕಾರ್ನಾಡ್, ಅರವಿಂದ ಗುತ್ತೇದಾರ ಸೇರಿದಂತೆ ಅನೇಕರಿದ್ದರು.