ಸಾರಾಂಶ
ಉಳ್ಳಾಲ/ಬೆಂಗಳೂರು : ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ವಿವಾಹವಾಗಿ, ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಿ ಎಂಬ ಅಂಕಣಕಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಎಸ್‌ಡಿಪಿಐ ಸೇರಿ ಹಲವು ಸಂಘಟನೆಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ, ಸೂಲಿಬೆಲೆಯವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನಲ್ಲಿ ನಡೆದಿದ್ದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಬೃಹತ್ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ್ದ ಸೂಲಿಬೆಲೆ, ಮತಾಂತರವಾದವರನ್ನು ಮತ್ತೆ ಘರ್ ವಾಪ್ಸಿ ಮಾಡುವ ಪ್ರಯತ್ನಕ್ಕೆ ಹಿಂದೂ ಯುವಕರನ್ನು ತರಬೇತುಗೊಳಿಸುವಂತೆ ಕರೆ ನೀಡಿದ್ದರು.
ಸೂಲಿಬೆಲೆ ಹೇಳಿಕೆಗೆ ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೋಮು ಸೌಹಾರ್ದ ಕೆಡಿಸುವ ಯತ್ನ ಎಂದಿದ್ದಾರೆ. ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಎಸ್‌ಡಿಪಿಐ, ಮುಸ್ಲಿಂ ಹುಡುಗಿಯರ ತಂಟೆಗೆ ಬಂದರೆ ಹುಷಾರ್ ಎಂದಿದೆ. ಈ ಮಧ್ಯೆ, ಸೋಮವಾರ ಸುದ್ದಿಮಾಧ್ಯಮದ ಜೊತೆ ಮಾತನಾಡಿದ ಸೂಲಿಬೆಲೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.