ಸೊಳ್ಳೆಗಳ ಉತ್ಪತ್ತಿ ವ್ಯಾಪಕ: ಜನರಲ್ಲಿ ಡೆಂಘೀ ಜ್ವರದ ಆತಂಕ

| Published : Jul 19 2024, 12:49 AM IST

ಸಾರಾಂಶ

ಚರಂಡಿಗಳಲ್ಲಿ ತ್ಯಾಜ್ಯ ಸಮೇತ ನೀರು ನಿಂತುಕೊಂಡಿದ್ದು, ಇದೇ ವೇಳೆ ವಿವಿಧ ಬಡಾವಣೆಗಳಲ್ಲಿ ಚರಂಡಿಯ ನೀರು ಕುಡಿಯುವ ನೀರಿನ ಪೈಪ್ ಲೈನ್‌ಗಳಿಗೆ ಮಿಶ್ರಣವಾಗುತ್ತಿರುವ ಆತಂಕ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಸ್ಥಳೀಯ ಆಡಳಿತ ಸಂಸ್ಥೆಗಳು, ಕಾಲ ಕಾಲಕ್ಕೆ ಚರಂಡಿಗಳ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಳ್ಳದಿರುವುದು ಮತ್ತು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕದಿರುವುದು ಹೆಚ್ಚು ಜನರು ಅನಾರೋಗ್ಯಕ್ಕೆ ಗುರಿಯಾಗಲು ಪ್ರಮುಖ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವ್ಯಾಪಕವಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳದಿಂದ ಜಿಲ್ಲೆಯ ವಿವಿಧೆಡೆ ಡೆಂಘೀ ಪ್ರಕರಣಗಳು ವರದಿಯಾಗುತ್ತಿದ್ದು, ಅನಾರೋಗ್ಯಕ್ಕೆ ಗುರಿಯಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ರಾಜ್ಯಾದ್ಯಂತ ಡೆಂಘೀ ಹಾವಳಿ ಕಾಡುತ್ತಿರುವುದರ ನಡುವೆ ಈ ಭಾಗದಲ್ಲೂ ಕಾಯಿಲೆಯು ಬಾಧಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 125 ಡೆಂಘೀ ಪ್ರಕರಣಗಳು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯು ಅಲರ್ಟ್ ಆಗಿದೆ. ಈಗಾಗಲೇ ಮನೆ ಮನೆ ಸಮೀಕ್ಷೆ, ನೀರಿನಲ್ಲಿ ಲಾರ್ವಾ ಪರೀಕ್ಷೆ, ಪರಿಹಾರ ಕ್ರಮಗಳು, ಚಿಕಿತ್ಸೆ ಮತ್ತು ಜಾಗೃತಿ ಸೇರಿ ನಾನಾ ಚಟುವಟಿಕೆಗಳನ್ನು ಬಿರುಸುಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ತ್ಯಾಜ್ಯದ ರಾಶಿ, ಕಲುಷಿತ ನೀರು, ಅನೈರ್ಮಲ್ಯದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಡೆಂಘೀ, ಚಿಕುನ್ ಗುನ್ಯಾ ಸೇರಿ ನಾನಾ ಕಾಯಿಲೆಗಳು ಕಂಡು ಬರುತ್ತಿವೆ. ಇದಕ್ಕೆ ಮುಂಜಾಗ್ರತಾ ಕ್ರಮಗಳ ಪಾಲನೆ, ಸ್ವಚ್ಛತೆ ನಿರ್ವಹಣೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬ ಸಲಹೆ ನೀಡಲಾಗುತ್ತಿದೆ.

ಇತ್ತೀಚೆಗೆ ಜನರಿಗೆ ಚಳಿ ಜ್ವರ, ಕೈ- ಕಾಲು ನೋವು, ನೆಗಡಿ, ವಾಂತಿ ಭೇದಿ ಸೇರಿ ಹಲವು ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಇದರಿಂದ ಜನರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಜ್ವರಕ್ಕೆ ತುತ್ತಾಗಿ ಬರುವ ಪ್ರತಿ ರೋಗಿಗೆ ವೈದ್ಯರು ಮುಂಜಾಗ್ರತಾ ಕ್ರಮವಾಗಿ ರಕ್ತ ಪರೀಕ್ಷೆಗೆ ಹೆಚ್ಚು ಶಿಫಾರಸು ಮಾಡುತ್ತಿದ್ದಾರೆ. ಕಾಯಿಲೆಯ ಲಕ್ಷಣಗಳು:

ಡೆಂಘೀ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ. ಸೋಂಕು ಹೊಂದಿದ ಈಡೀಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರನೋವು, ಮಾಂಸಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ವಿಪರೀತ ನೋವು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.

ಡೆಂಘೀ, ಚಿಕುನ್ ಗುನ್ಯಾ ಬಂದರೆ ಆತಂಕ ಬೇಡ, ಜಾಗೃತರಾಗಿ:

ಡೆಂಘೀ, ಚಿಕುನ್ ಗುನ್ಯಾ, ವಿಷಮ ಶೀತ ಜ್ವರ ಸೇರಿ ಯಾವುದೇ ಕಾಯಿಲೆಗಳ ಬಗ್ಗೆ ಆತಂಕ ಬೇಡ. ಆದರೆ, ಜಾಗೃತರಾಗಿರಬೇಕು. ಅನಾರೋಗ್ಯ ಸಮಸ್ಯೆ ಕಂಡು ಬಂದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಇದುವರೆಗೂ ಜಿಲ್ಲಾದ್ಯಂತ 125 ಡೆಂಘೀ ಪ್ರಕರಣಗಳು ದಾಖಲಾಗಿವೆ. 1 ಚಿಕನ್‌ ಗುನ್ಯಾ ಪ್ರಕರಣ ದಾಖಲಾಗಿದೆ, ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ. ನೀರು ನಿಲ್ಲುವ ಸ್ಥಳಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಕಾಲಕಾಲಕ್ಕೆ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳು ಬಾರದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಡೇಂಘೀ ಜ್ವರದ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಮನೆ ಮನೆಗೂ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ತಿಳುವಳಿಕೆ ನೀಡುತ್ತಿದ್ದಾರೆ. ಇದರ ಜೊತೆಗೆ ತಾವು ಸಹ ಇಲಾಖಾ ಅಧಿಕಾರಿಗಳೊಂದಿಗೆ ಸರ್ಕಾರಿ ಕಚೇರಿಗಳು. ಕೆಎಸ್ಆರ್ ಟಿಸಿ ಡಿಪೋ, ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಸೊಳ್ಳೆಗಳ ಸಂತಾನೂತ್ಪತ್ತಿ ಮತ್ತು ಲಾರ್ವ ಬೆಳವಣಿಗೆಗೆ ಕಡಿವಾಣ ಹಾಕಲು ಅಧಿಕಾರಿ, ಸಿಬ್ಬಂದಿಗೆ ತಿಳುವಳಿಕೆ ನೀಡುತ್ತಿದ್ದೇವೆ. ಡೆಂಘೀ ಕಾಯಿಲೆ ಬಗ್ಗೆ ಶನಿವಾರದಂದು ಬೃಹತ್ ಜಾಗೃತಿ ಜಾಥಾ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸ್ವಚ್ಛತೆ ಕಾಪಾಡುವಲ್ಲಿ ಸ್ಥಳೀಯ ಆಡಳಿತ ವಿಫಲ:

ಚರಂಡಿಗಳಲ್ಲಿ ತ್ಯಾಜ್ಯ ಸಮೇತ ನೀರು ನಿಂತುಕೊಂಡಿದ್ದು, ಇದೇ ವೇಳೆ ವಿವಿಧ ಬಡಾವಣೆಗಳಲ್ಲಿ ಚರಂಡಿಯ ನೀರು ಕುಡಿಯುವ ನೀರಿನ ಪೈಪ್ ಲೈನ್‌ಗಳಿಗೆ ಮಿಶ್ರಣವಾಗುತ್ತಿರುವ ಆತಂಕ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಸ್ಥಳೀಯ ಆಡಳಿತ ಸಂಸ್ಥೆಗಳು, ಕಾಲ ಕಾಲಕ್ಕೆ ಚರಂಡಿಗಳ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಳ್ಳದಿರುವುದು ಮತ್ತು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕದಿರುವುದು ಹೆಚ್ಚು ಜನರು ಅನಾರೋಗ್ಯಕ್ಕೆ ಗುರಿಯಾಗಲು ಪ್ರಮುಖ ಕಾರಣವಾಗಿದೆ.