ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತ್ತೊಂದು ಅವಧಿಗೆ ಗೆಲ್ಲಿಸಿ ದೇಶವನ್ನು ಸದೃಢ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ನಾವು, ನೀವೆಲ್ಲರೂ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಎಂದು ಹೇಳಿದರು.ಇಲ್ಲಿನ ದಾ-ಹ ಅರ್ಬನ್ ಕೋ ಆಪ್ ಬ್ಯಾಂಕ್ ಸಮುದಾಯ ಭವನದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಹಮ್ಮಿಕೊಂಡಿದ್ದ ಸಾಮಾಜಿಕ ಸಮಾವೇಶದಲ್ಲಿ ಮಾತನಾಡಿ, ಇಡೀ ವಿಶ್ವವೇ ಇಂದು ಭಾರತದತ್ತ ಬೆರಗು ಗಣ್ಣಿನಿಂದ ನೋಡುವಂತಾಗಿದೆ. ದೇಶದ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯ ಸಾಗುತ್ತಿವೆ. ಈ ಮೂಲಕ ವಿಶ್ವಕ್ಕೆ ಭಾರತ ಮಾದರಿ ತೋರಿಸಿಕೊಟ್ಟಿದ್ದಾರೆ. ಎಲ್ಲಾ ಹಿಂದುಳಿದ ವರ್ಗಗಳ ಜನರೂ ಒಗ್ಗಟ್ಟಾಗಿ ಮತ್ತೊಮ್ಮೆ 3ನೇ ಅವಧಿಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ತರಬೇಕು. ದೇಶದ ಹಿತಕ್ಕಾಗಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಆಮಿಷವೊಡ್ಡಿ, ಅಧಿಕಾರಕ್ಕೆ ಬಂದಿದೆ. ಬಿಜೆಪಿಯು ದೇಶ ವಾಸಿಗಳ ಸ್ವಾವಲಂಬಿಯಾಗಿ ಮಾಡುವ ಕೆಲಸದಲ್ಲಿ ತೊಡಗಿದೆ. ಪ್ರಧಾನ ಮಂತ್ರಿ ಸ್ವ ನಿಧಿ, ವಿಶ್ವಕರ್ಮ ಹೀಗೆ ಹಲವಾರು ಯೋಜನೆಗಳು ಜನರಿಗೆ ಗೌರವದ ಬದುಕು ಕಟ್ಟಿ ಕೊಡುತ್ತಿವೆ ಎಂದು ತಿಳಿಸಿದರು.ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹತ್ತಾರು ಜಾತಿಯ ಜನರಿದ್ದಾರೆ. ಹಿಂದುಳಿದ ವರ್ಗಗಳ ಜನರು ಮನಸ್ಸು ಮಾಡಿದರೆ, ಯಾರನ್ನು ಬೇಕಾದರೂ ಅಧಿಕಾರಕ್ಕೆ ತರಬಲ್ಲರು. ಒಬಿಸಿ ವರ್ಗವು ದೇಶದ ದೊಡ್ಡ ಶಕ್ತಿಯಾಗಿದೆ. ಸ್ವತಃ ನರೇಂದ್ರ ಮೋದಿ ಹಿಂದುಳಿದ ವರ್ಗದವರಾಗಿದ್ದಾರೆ. ಎಲ್ಲಾ ಜಾತಿ, ವರ್ಗದವರನ್ನೂ ಸಮಾನವಾಗಿ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿಯವರ ಬೆಂಬಲಿಸಬೇಕು. ಕೇಂದ್ರದಲ್ಲಿ ಮಾತ್ರವಲ್ಲ, ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.
ಮೋರ್ಚಾದ ರಾಜ್ಯ ಉಪಾಧ್ಯಕ್ಷ , ದೂಡಾ ಮಾಡಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ದೇಶವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಅಂತಹ ದುಷ್ಟಶಕ್ತಿಗಳ ಮಣಿಸಲು ನಾವು ಬಿಜೆಪಿ ಬೆಂಬಲಿಸಬೇಕಾಗಿದೆ. ಮುಂದೆಯೂ ದೇಶ ಸುರಕ್ಷಿತವಾಗಿರಲು ಹಿಂದುಳಿದ ವರ್ಗದವರೆಲ್ಲರೂ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕು ಎಂದರು.ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಂದ್ರ ಹೆಬ್ಬಾಳ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎ.ವೈ.ಪ್ರಕಾಶ, ಮಾಯಕೊಂಡ ಜಿ.ಎಸ್. ಶ್ಯಾಮ್, ಕುಬೇಂದ್ರಪ್ಪ, ರಾಜ್ಯ ಕಾರ್ಯದರ್ಶಿ ರಘುನಂದನ್ ಅಂಬರ್‌ಕರ್, ಬೇತೂರು ಬಸವರಾಜ್, ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಎನ್.ಗುರುನಾಥ, ಸುರೇಶ ಗಂಡಗಾಳೆ, ರೇಣುಕಾ ಶ್ರೀನಿವಾಸ್, ಕಿಶೋರ, ಪಿ.ಎಸ್.ಬಸವರಾಜ, ವೈ.ಮಲ್ಲೇಶ್, ಮಂಜುನಾಥ, ಪಿಸಾಳೆ ಕೃಷ್ಣ, ನವೀನ್, ಅಣಜಿ ಗುಡ್ಡೇಶ, ಗುಬ್ಬಿ ಬಸವರಾಜ, ಕೊಟ್ರೇಶಚಾರ್, ಕಿರೀಟ್ ಕಲಾಲ್ ಇತರರರಿದ್ದರು.
.....