ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದಲ್ಲಿ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದ್ದು, ಲೋಕಸಭಾ ಚುನಾವಣೆ ನಂತರ ಬದಲಾವಣೆ ನೋಡಲಿದ್ದೇವೆ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ನಗರ ಜೆಡಿಎಸ್ ಸಮಿತಿ ಹಮ್ಮಿಕೊಂಡಿದ್ದ ಪಕ್ಷದ ಬೂತ್ ಹಾಗೂ ವಾರ್ಡ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ನನಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ ನೀಡುವುದರೊಂದಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕೊಡುವಂತೆ ಮನವಿ ಮಾಡಿದರು.
ಈ ಹಿಂದೆಯೂ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಕಾರಣಾಂತರಗಳಿಂದ ಅದು ಮುರಿದು ಬಿದ್ದಿತ್ತು. ಈಗ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರು ಒಂದು ಮಾಡಿದ್ದಾರೆ. ತಾಯಂದಿರ, ಬಡವರ, ಯುವಕರ, ದಲಿತರ ಭವಿಷ್ಯಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿಗೆ ಹೆಚ್ಚಿನ ಮತ ಬರುವಂತೆ ನೋಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.ಏ.18ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಏ.14ರಂದು ಸಂಜೆ 4ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಕ್ಷೇತ್ರದ ಮತದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಕೂರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರಿಗೆ ಈ ಬಾರಿ ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ. ಮೈತ್ರಿಯಿಂದಾಗಿ ಎರಡು ಪಕ್ಷದವರಿಗೆ ಈ ಚುನಾವಣೆ ಮಹತ್ವದ್ದಾಗಿದೆ ಎಂದರು.ವೇದಿಕೆಯಲ್ಲಿ ಜೆಡಿಎಸ್ ಜಿಧ್ಯಕ್ಷ ಕಡಿದಾಳ್ ಗೋಪಾಲ್, ಕಾರ್ಯಾಧ್ಯಕ್ಷ ದಾದಾಪೀರ್, ಕೆ.ಎನ್. ರಾಮಕೃಷ್ಣ, ಬಿಜೆಪಿ ಜಿಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ಪ್ರಭಾರಿ ರಘುಪತಿ ಭಟ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಉಮಾಶಂಕರ ಉಪಾಧ್ಯ, ಬೊಮ್ಮನಕಟ್ಟೆ ಮಂಜುನಾಥ್, ಗಂಧದಮನೆ ನರಸಿಂಹ, ಗೀತಾ ಸತೀಶ್, ಮಧುಕುಮಾರ್, ಗೋವಿಂದಪ್ಪ, ಸಿದ್ದಪ್ಪ, ತ್ಯಾಗರಾಜ್, ಎಸ್.ವಿ.ರಾಜಮ್ಮ, ಪುಷ್ಪ, ಅಬ್ದುಲ್ ವಾಜೀದ್, ನಿಖಿಲ್ ಉಪಸ್ಥಿತರಿದ್ದರು.
ಇದೇ ಸಂದರ್ಭ ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಗೆ ಠೇವಣಿಯಾಗಿ 25 ಸಾವಿರ ರು. ಸಲ್ಲಿಸಬೇಕಾಗಿದ್ದು, ಇದರಲ್ಲಿ 12,500 ರು.ವನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಸಂಗ್ರಹಿಸಿ ಬಿ.ವೈ. ರಾಘವೇಂದ್ರ ಅವರಿಗೆ ನೀಡಲಾಯಿತು.