ಸಾರಾಂಶ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ13 .2 ಮಿ.ಮಿ ಮಳೆಯಾಗಿದ್ದು, ಭಾರಿ ಗಾಳಿಗೆ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳು ನೆಲಕ್ಕಪ್ಪಳಿಸಿವೆ.
ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ 30ಎಕರೆಗೂ ಹೆಚ್ಚು ಭತ್ತದ ಬೆಳೆ ಗಾಳಿಗೆ ನೆಲಕ್ಕುರುಳಿದೆ. ತಾಲೂಕಿನ ಕೋಗಳಿ ತಾಂಡಾದ ಒಂದು ಎಕರೆ ವಿಳ್ಯೆದೆಲೆ ತೋಟ ನೆಲ ಕಚ್ಚಿದೆ. ಇದೇ ಗ್ರಾಮದ ಬಾಳೆ ಬೆಳೆ ಅರ್ಧದಲ್ಲಿ ಮುರಿದು ಬಿದ್ದಿದೆ. ಬಾರಿ ಗಾಳಿಯಿಂದ ಲಕ್ಷಗಟ್ಟಲೆ ನಷ್ಟವಾಗಿದೆ ಎಂದು ರೈತರು ಹೇಳುತ್ತಾರೆ.
ತಾಲೂಕಿನ ವರಲಹಳ್ಳಿ, ವಟ್ಟಮ್ಮನಹಳ್ಳಿ, ಮಾಲವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಪ್ಪಾಯಿ ಬೆಳೆ ಬುಡ ಸಹಿತ ನೆಲಕ್ಕುರುಳಿವೆ. ತಹಸೀಲ್ದಾರ್ ಆರ್.ಕವಿತಾ, ಗ್ರಾಮ ಆಡಳಿತಾಧಿಕಾರಿ ಚನ್ನಬಸಪ್ಪ ಗಡಾದ್, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಾರುತಿ ಇತರರು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಂದಾಯ ಇಲಾಖೆಯಿಂದ ಒಟ್ಟು ೧೦ ಹೆಕ್ಟೇರ್ ಪ್ರದೇಶದಷ್ಟು ಪಪ್ಪಾಯ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಾರಿ ಗಾಳಿಗೆ ೪೦ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜೆಸ್ಕಾಂ ಎಇಇ ನಾಗರಾಜ ಕುರೆಕೊಪ್ಪ ತಿಳಿಸಿದರು.