ಸಾರಾಂಶ
ಹಾಸನ ಜಿಲ್ಲೆ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಬಾಗಿಲು ತೆರೆದು ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆಯಲಾಗಿದ್ದು, ಈ ಕೃತ್ಯ ಎಸೆಗಿದ ಮಹಿಳೆಯನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ಹಾಸನ ಜಿಲ್ಲೆ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಬಾಗಿಲು ತೆರೆದು ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆಯಲಾಗಿದ್ದು, ಈ ಕೃತ್ಯ ಎಸೆಗಿದ ಮಹಿಳೆಯನ್ನು ಬಂಧಿಸಲಾಗಿದೆ.ಕೆಲ ವರ್ಷಗಳಿಂದ ಪಟ್ಟಣದ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡುತ್ತಾ ಅಲೆದಾಡುತ್ತಿದ್ದ ನೀಲಮ್ಮ ಎಂಬಾಕೆ ಬಂಧಿತೆ. ಈಕೆ ಮಾನಸಿಕವಾಗಿಯೂ ಅಷ್ಟೇನು ಸುಸ್ಥಿತಿಯಲ್ಲಿಲ್ಲ. ಇದೇ ಪುರಸಭೆ ಆಸುಪಾಸಿನಲ್ಲಿ ಅಲೆದಾಡುತ್ತಿದ್ದ ಈಕೆ, ಇದೀಗ ಚಪ್ಪಲಿ ಹಾಕಿರುವ ಗಣಪತಿ ಮೇಲೆ ಭಕ್ತರು ಹಾಕುತ್ತಿದ್ದ ಹೂವನ್ನೇ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ಘಟನೆ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಭಾನುವಾರ ಮುಂಜಾನೆ ಭಕ್ತರು ದೇವರ ದರ್ಶನಕ್ಕೆ ಹೋಗಿದ್ದಾಗ ಚಪ್ಪಲಿಗಳನ್ನು ಗಣೇಶನಿಗೆ ಹಾಕಿದ್ದನ್ನು ನೋಡಿ ಬೆಚ್ಚಿ ಬಿದ್ದರು. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಯಿತು. ದೂರು ದಾಖಲಿಸಿಕೊಂಡ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟೀವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. ಆಕೆ ಒಳಗೆ ಹೋದಾಗ ಚಪ್ಪಲಿ ಇತ್ತು. ಆದರೆ, ವಾಪಸ್ ಬರುವಾಗ ಆಕೆಯ ಕಾಲಲ್ಲಿ ಚಪ್ಪಲಿ ಇಲ್ಲದಿರುವುದು ಕಂಡು ಬಂತು. ಅಲ್ಲದೆ, ಆಕೆಯ ಕಾಲಿನಲ್ಲಿ ಇದ್ದಂತಹ ಚಪ್ಪಲಿಯೇ ದೇವರ ಮೇಲಿದ್ದುದು ಗೊತ್ತಾಯಿತು. ಈ ಎಲ್ಲ ಮಾಹಿತಿ ಆಧರಿಸಿ, ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ವಿಚಾರಣೆ ನಡೆಸಲಾಗುತ್ತಿದೆ.