ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿಳಂಬ ನೀತಿಯಿಂದ ಹಾಗೂ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತುಮಕೂರು, ದಾವಣಗೆರೆ ನೇರ ರೈಲುಮಾರ್ಗಗಳ ಮಂಜೂರಾಗಿ ೧೪ ವರ್ಷಗಳು ಕಳೆದಿದ್ದರೂ ೨೦೧೭ಕ್ಕೆ ಲೋಕಾರ್ಪಣೆಯಾಗಬೇಕಿದ್ದ ರೈಲುಮಾರ್ಗದ ಕಾಮಗಾರಿ ಕುಂಟಿತಗೊಂಡಿದೆ ಎಂದು ಶಿರಾ ತಾಲೂಕು ರೈಲ್ವೆ ಯೋಜನಾ ಪ್ರೋತ್ಸಾಹ ಸಮಿತಿಯ ಅಧ್ಯಕ್ಷ ನಿವೃತ್ತ ಪ್ರೊಫೆಸರ್ ಬುರ್ಹಾದನ್ವುದ್ದಿನ್ ಆರೋಪಿಸಿದ್ದಾರೆ.ಈ ಬಗ್ಗೆ ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರೈಲ್ವೆ ಕಾಮಗಾರಿ ಅವಧಿಯು ಮತ್ತೆ ಮುಂದೂಡಿದ್ದು, ತುಮಕೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ೩ ದಶಕಗಳ ಕನಸು ನನಸಾಗಿಲ್ಲ, ಇಲ್ಲಿನ ರೈಲ್ವೆ ಹೋರಾಟಗಾರರು ಸಾರ್ವಜನಿಕರು ಜಾತಕ ಪಕ್ಷಿಗಳ ತರಹ ರೈಲು ಬರುವುದನ್ನು ಎದುರು ನೋಡುತ್ತಿದ್ದಾರೆ. ಡಾ.ಡಿ.ಎಂ. ನಂಜುಂಡಪ್ಪ ರವರ ವರದಿ ಪ್ರಕಾರ ಈ ಮೂರು ಜಿಲ್ಲೆಗಳು ಅತ್ಯಂತ ಹಿಂದುಳಿದ ಪ್ರದೇಶಗಳಾಗಿವೆ. ರೈಲ್ವೆ ಸಂಪರ್ಕವಿಲ್ಲದೆ ಬಡವರು, ರೈತ-ಕಾರ್ಮಿಕರು, ಶಾಲಾ ಕಾಲೇಜುಗಳ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ನಗರಕ್ಕೆ ಪ್ರತಿನಿತ್ಯ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರು ಹಾಗೂ ಮೂರು ಜಿಲ್ಲೆಯ ರೈಲ್ವೆ ಹೋರಾಟ ಸಮಿತಿಯ ಹೋರಾಟದ ಫಲವಾಗಿ ಈ ರೈಲ್ವೆ ಯೋಜನೆ ೨೦೧೦-೧೧ನೇ ಸಾಲಿನಲ್ಲಿ ಕೇಂದ್ರ ಸರಕಾರ ಮಂಜೂರು ಮಾಡಿತ್ತು, ೧೯೯.೫ ಕಿ.ಮೀ ಉದ್ದವಿರುವ ಈ ಮಾರ್ಗಕ್ಕೆ ೨೨೪೮ ಎಕರೆ ಭೂಮಿ ಅಗತ್ಯವಿದ್ದು ಈ ರೈಲ್ವೆ ಯೋಜನೆಗೆ ೯೬೦ ಕೋಟಿ ಅಂದಾಜು ವೆಚ್ಚದೊಂದಿಗೆ ಅನುಮೋದನೆಗೊಂಡಿತ್ತು. ೨೦೧೭ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ಯೋಜನೆಯ ಗುರಿಯಾಗಿತ್ತು. ಆದರೆ ಕಾಮಗಾರಿ ವಿಳಂಬದಿಂದಾಗಿ ೨೦೨೭ಕ್ಕೆ ಸದರಿ ರೈಲುಮಾರ್ಗ ಲೋಕಾರ್ಪಣೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಈ ಮಾರ್ಗದ ಉನ್ನತ ಜನಪ್ರತಿನಿಧಿಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಶೀಘ್ರವಾಗಿ ನಿರ್ಮಾಣ ಮಾಡಲು ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಪುಟ್ಟಕಾಮಣ್ಣ, ಉಪಾಧ್ಯಕ್ಷರಾದ ಕೆ.ರಾಧಕೃಷ್ಣ, ಕಾರ್ಯದರ್ಶಿಯಾದ ಮಹಮದ್ ಜಿಯಾವುಲ್ಲಾ, ಖಜಾಂಚಿ ಎಸ್.ಆರ್.ಸಂಜೀವಮೂರ್ತಿ, ನಿರ್ದೇಶಕರಾದ ಫರೀದ್ ಅಹಮದ್ಖಾನ್, ಶಿವರಾಜು, ಮಹಮ್ಮದ್ ಸಲೆಹಾ ಸಲಾಮತ್, ಭರತ್ ರಾಜ್ ಸಿಂಗ್ ಸೇರಿದಂತೆ ಹಲವರು ಹಾಜರಿದ್ದರು.