ಶಿಕ್ಷಕರ ದಿನಾಚರಣೆ ಯಶಸ್ಸಿಗೆ ದುಡಿಯಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಸಲಹೆ

| Published : Sep 04 2025, 01:00 AM IST

ಸಾರಾಂಶ

ಇದರೊಂದಿಗೆ ಆರು ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಶೇ. 100 ಫಲಿತಾಂಶ ಪಡೆದ ಮೂರು ಶಾಲೆಗಳು ಮತ್ತು ಉನ್ನತ ಸ್ಥಾನದಲ್ಲಿ ತೇರ್ಗಡೆಯಾದ ಆರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ಪೂರಕವಾಗಿ ಕೆಲಸ ಮಾಡಲು ರಚಿಸಿರುವ ಎಲ್ಲ ಸಮಿತಿಯವರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯಬೇಕು ಎಂದು ಬಿಇಒ ಆರ್. ಕೃಷ್ಣಪ್ಪ ಹೇಳಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯನ್ನು ಸಮರ್ಪಕವಾಗಿ ಎಲ್ಲರಿಗೂ ವಿತರಿಸಬೇಕೆಂದು ಸಲಹೆ ನೀಡಿದರು.ಸೆ. 8ರಂದು ಪಟ್ಟಣದ ಪುರಸಭಾ ಬಯಲು ರಂಗಮಂದಿರದ ಆವರಣದಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿರುವ ಹಿನ್ನೆಲೆ ಅಂದು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಎಲ್ಲ ಶಿಕ್ಷಕರು ಕಡ್ಡಾಯವಾಗಿ ಕಾರ್ಯಕ್ರಮ ಮತ್ತು ಮೆರವಣಿಗೆಯಲ್ಲಿ ಹಾಜರಿರಬೇಕು ಎಂದರು.ಪಟ್ಟಣದ ಕೃಷ್ಣ ರಾಜೇಂದ್ರ ಪದವಿ ಪೂರ್ವ ಕಾಲೇಜಿನ ಆವರಣದಿಂದ ಬೆಳಗ್ಗೆ 9ಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಆನಂತರ 10ಕ್ಕೆ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದ ಅವರು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಹಾಗೂ ರಾಜ್ಯ ಮತ್ತು ಜಿಲ್ಲಾ ಹಂತದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಶಿಕ್ಷಕರಿಗೆ ಸನ್ಮಾನ, ನಿಧನ ಹೊಂದಿದ ಶಿಕ್ಷಕರು ಮತ್ತು ಬೋಧಕರ ನೌಕರರ ಕುಟುಂಬದವರಿಗೆ ಗೌರವ ಸಮರ್ಪಣೆ, 2024- 25 ನೇ ಸಾಲಿನ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳಿಗೆ ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.ಇದರೊಂದಿಗೆ ಆರು ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಶೇ. 100 ಫಲಿತಾಂಶ ಪಡೆದ ಮೂರು ಶಾಲೆಗಳು ಮತ್ತು ಉನ್ನತ ಸ್ಥಾನದಲ್ಲಿ ತೇರ್ಗಡೆಯಾದ ಆರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ ಎಂದು ಅವರು ಹೇಳಿದರು.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ, ಮಾಜಿ ಅಧ್ಯಕ್ಷ ಬಿ.ವಿ.ಪ್ರಸನ್ನಕುಮಾರ್, ರಾಜ್ಯ ಸರ್ಕಾರಿ ಸೌಕಾರರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಶೇಖರ, ಸಾಮರಸ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೈಯದ್ ರಿಜ್ವಾನ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಂಕರೇಗೌಡ, ಬಿಆರ್.ಸಿ ವೆಂಕಟೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಶಿಕ್ಷಣ ಸಂಯೋಜಕರಾದ ಜನಾರ್ಧನ, ಕುಸುಮ, ಸಿಆರ್.ಪಿಗಳಾದ ಎಚ್.ಕೆ. ಹರಿಪ್ರಸಾದ್, ಲೋಕೇಶ್, ಚಾರಿತ್ರ್ಯ, ಧರಣಿ, ಶಿಕ್ಷಕ ಸುರೇಶ್ ಇದ್ದರು.