ಎಸ್ಸೆಸ್ಸೆಲ್ಸಿ ಫಲಿತಾಂಶ ಹತ್ತರೊಳಗೆ ಬರುವಂತೆ ಶ್ರಮಿಸಿ

| Published : Sep 06 2025, 01:00 AM IST

ಸಾರಾಂಶ

ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಂದಿನ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಹತ್ತರೊಳಗೆ ಸ್ಥಾನ ಪಡೆಯುವಂತೆ ಶಿಕ್ಷಕರು ವಿದ್ಯಾರ್ಥಿಗಳ ತಯಾರು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾದ ಶಿಕ್ಷಕರ ದಿನಾಚರಣೆ-ಡಾ.ಸರ್ವೆಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಈ ವರ್ಷದಲ್ಲಿ ಶೈಕ್ಷಣಿಕ ಚಟುವಟಿಕೆ, ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಬೇಕು. ಪರಿಹಾರ ಬೋಧನೆ ನೀಡುವ ವಿಶೇಷ ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳ ಕಲಿಕಾ ಕೌಶಲ್ಯ ಹೆಚ್ಚಿಸುವ ಮೂಲಕ ಫಲಿತಾಂಶ 10ನೇ ಸ್ಥಾನದೊಳಗೆ ಬರಲು ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಆ ದೇಶದ ಮಾನವ ಸಂಪನ್ಮೂಲ ಸಂಪದ್ಭರಿತವಾಗಿರಬೇಕು. ಈ ಸಂಪದ್ಭರಿತ ಮಾನವ ಸಂಪನ್ಮೂಲದ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಇಂದಿಗೂ ಶಿಕ್ಷಕರಿಗೆ ಒಳ್ಳೆಯ ಗೌರವವಿದೆ. ಗುರುವೇ ನಮಃ ಎಂದು ನಮಿಸುವ ಸಮಾಜ ಗುರುಗಳಿಂದ ಶ್ರೇಷ್ಠವಾದದ್ದನ್ನು ಬಯಸುತ್ತದೆ ಎನ್ನುವುದನ್ನು ಅರಿಯಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿಯೂ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಮತ್ತು ಅವರ ಬದುಕು ಶಿಕ್ಷಕರಿಂದ ಮಾತ್ರ ಬೆಳಗಲು ಸಾಧ್ಯ ಎಂದು ಅರಿತು ಕೆಲಸ ಮಾಡಬೇಕಾಗಿದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ದಿನೇ ದಿನೇ ಕುಸಿಯುತ್ತಿರುವುದು ಆತಂಕದ ವಿಷಯವಾಗಿದೆ. ಶಿಕ್ಷಕರು ತಮ್ಮ ಪಾಠ ಬೋಧನೆ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಬೇಕಾಗಿರುವುದು ಸಮಾಜದ ಅತ್ಯಂತ ತುರ್ತು ಎಂದು ಭಾವಿಸಿ ಶಿಕ್ಷಕರು ಕೆಲಸ ಮಾಡಬೇಕಾಗಿದೆ. ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದಲ್ಲಿ ಗುರುಭವನ ನಿರ್ಮಾಣಕ್ಕೆ ರು.2 ಕೋಟಿ ಅನುದಾನ ನೀಡಲಾಗುವುದು ಎಂದರು.

ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಡಾ.ಸರ್ಪಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಒಬ್ಬ ಅಗ್ರಗಣ್ಯ ಶಿಕ್ಷಕ, ತತ್ವಜ್ಞಾನಿ ಮತ್ತು ರಾಜನೀತಿ ತಜ್ಞರಾಗಿದ್ದರು ಹಾಗೂ ಭಾರತ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದವರು. ಶಿಕ್ಷಣದ ಬಗ್ಗೆ ಅವರ ಅಚಲ ಭಕ್ತಿಯಿಂದಾಗಿ, ಅವರ ಜನ್ಮ ದಿನವಾದ ಸೆಪ್ಟೆಂಬರ್ 05ಅನ್ನು ದೇಶಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮತ್ತು ವಿಶೇಷ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ,ಡಿಡಿಪಿಐ ಮಂಜುನಾಥ್, ಡಯಟ್ ಪ್ರಾಂಶುಪಾಲ ನಾಸಿರುದ್ದೀನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಹಂತೇಶ್ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ನಿರ್ದೇಶಕರು ಹಾಗೂ ಶಿಕ್ಷಕರು ಇದ್ದರು.