ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯಾದ್ಯಂತ ಡೆಂಘೀ ಜ್ವರ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಡೆಂಘೀ ಜ್ವರ ನಿಯಂತ್ರಣಕ್ಕೆ ಪ್ರತಿಯೊಬ್ಬ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಶ್ರೇಯಸ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಗ್ರಾಪಂ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಡೆಂಘೀ ಜ್ವರ ನಿಯಂತ್ರಣ ಅರಿವು ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೆಂಘೀ ಜ್ವರ ದಿನೇ ದಿನೇ ಅಪಾಯಕಾರಿಯಾಗುತ್ತಿದೆ. ಜ್ವರಕ್ಕೆ ಹಲವು ಮಂದಿ ಸಾವನಪ್ಪಿದ್ದಾರೆ. ಆದ್ದರಿಂದ ತಾಲೂಕಿನ ಡೆಂಘೀ ಜ್ವರ ನಿಯಂತ್ರಣಕ್ಕೆ ತರುವ ಮೂಲಕ ಸಾವು ನೋವುಗಳನ್ನು ತಪ್ಪಿಸಲು ಕೆಲಸ ಮಾಡಬೇಕು ಎಂದರು.ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆ, ಅಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಮನೆ ಹಾಗೂ ಅಕ್ಕಪಕ್ಕದಲ್ಲಿ ಜಾಗದಲ್ಲಿ ಸಂಗ್ರಹವಾಗಿ ನೀರನ್ನು ಸ್ವಚ್ಛಗೊಳಿಸಬೇಕು. ಮನೆ ತೊಟ್ಟಿಗಳಲ್ಲಿ ಸಂಗ್ರಹಿಸಿರುವ ನೀರನ್ನು 2-3 ದಿನಕ್ಕೊಮ್ಮೆ ಬದಲಾವಣೆ ಮಾಡಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗಲು ಸೊಳ್ಳೆಪರದೆ ಕಟ್ಟಿಕೊಳ್ಳಬೇಕು. ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆ ಆದ್ಯತೆ, ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿಯ ಮೇಲ್ವಚಾರಕ ಸೋಮಶೇಖರ್ ಮಾತನಾಡಿ, ಡೆಂಘೀ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜ್ವರದ ಬಗ್ಗೆ ಸಾರ್ವಜನಿಕರು ಜಾಗೃತಿ ಅಗತ್ಯ. ರೋಗ ಲಕ್ಷಣಗಳನ್ನು ಕಂಡುಬಂದ ತಕ್ಷಣ ಹತ್ತಿರ ಆಸ್ಪತ್ರೆಗೆ ಬಂದು ಚಿಕಿತ್ಸೆಪಡೆದುಕೊಳ್ಳಬೇಕು ಎಂದರು.ಡೆಂಘೀ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್‍ಯಕರ್ತೆಯರು, ಅಂಗನವಾಡಿ, ಪಂಚಾಯ್ತಿಯಿಂದ ಅರಿವು ಮೂಡಿಸಲು ಬಂದರೆ ಸಾರ್ವಜನಿಕರು ಸಹಕಾರ ನೀಡಬೇಕು. ಕಳೆದ 10 ವರ್ಷದ ಹಿಂದೆ ಡೆಂಘೀ ಜ್ವರ ಹೆಚ್ಚಾಗಿ ನಗರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವುದರಿಂದ ಗ್ರಾಪಂ ಅಧಿಕಾರಿಗಳು, ಸದಸ್ಯರು ಹೆಚ್ಚಿನ ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ತಾಪಂ ಇಒ ಲೋಕೇಶ್‌ಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಹೆಲ್ತ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ, ವಿಜಯಕುಮಾರ್ ಸೇರಿದಂತೆ ಗ್ರಾಪಂ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.