ಜನರನ್ನು ಕಚೇರಿಗೆ ಅಲೆದಾಡಿಸದಂತೆ ಕೆಲಸ ಮಾಡಿ: ಶಾಸಕ ನಾರಾಯಣಸ್ವಾಮಿ

| Published : Oct 31 2024, 01:01 AM IST

ಜನರನ್ನು ಕಚೇರಿಗೆ ಅಲೆದಾಡಿಸದಂತೆ ಕೆಲಸ ಮಾಡಿ: ಶಾಸಕ ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

೨೬೬ ಗ್ರಾಮಗಳಲ್ಲಿ ಜೆಜೆಎಂ ಮೂಲಕ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ೧೮೦ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ೪೨ ಗ್ರಾಮಗಳು ಟೆಂಡರ್ ನಲ್ಲಿವೆ. ಭಾವರಹಳ್ಳಿ, ಅಬ್ಬಿಗಿರಿಹೊಸಹಳ್ಳಿ ಮತ್ತು ಚಿಕ್ಕ ಹೊಸಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸ ಬೋರ್ ವೆಲ್‌ಗಳನ್ನು ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಜನ ಸಾಮಾನ್ಯರೊಂದಿಗೆ ಸ್ಪಂದಿಸಿ ಸರಿಯಾಗಿ ಕೆಲಸ ಮಾಡಬೇಕು. ಯಾರು ಜನ ಸಾಮಾನ್ಯರಿಗೆ ಸ್ಪಂದಿಸುವುದಿಲ್ಲವೋ ಅವರಿಗೆ ತಾಲೂಕಿನಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂಬ ಎಚ್ಚರಿಕೆಯನ್ನು ಶಾಸಕ ನಾರಾಯಣಸ್ವಾಮಿ ನೀಡಿದರು.

ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಜನರನ್ನು ವಿನಃ ಕಾರಣ ಕಚೇರಿಗಳಿಗೆ ಅಲೆದಾಡಿಸದೇ ತ್ವರಿತವಾಗಿ ಅವರ ಕೆಲಸಗಳನ್ನು ಮುಗಿಸಿಕೊಡಬೇಕೆಂದು ತಾಕೀತು ಮಾಡಿದರು.

ಶೈಕ್ಷಣಿಕ ಪ್ರಗತಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ, ಆದರೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಕಡಿಮೆ ಫಲಿತಾಂಶ ಬಂದಿತ್ತು. ಈ ಬಾರಿ ತಾಲೂಕಿನಲ್ಲಿ ಶೇ. ೧೦೦ರಷ್ಟು ಫಲಿತಾಂಶವನ್ನು ತರುವಲ್ಲಿ ಒತ್ತು ನೀಡಬೇಕೆಂದು ಬಿಇಒಗೆ ಸೂಚಿಸಲಾಗಿದೆ.

ಬಗರ್ ಹುಕುಂನಲ್ಲಿ ೩ ಎಕರೆಗಿಂತ ಕಡಿಮೆ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವಂತಿಲ್ಲ. ಉಳಿದ ರೈತರು ಸಹ ಉಳುಮೆ ಮಾಡಿ ಬೇಸಾಯ ಮಾಡುತ್ತಿದ್ದರೆ, ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ, ಗಡಿ ನಿಗದಿಪಡಿಸುವವರೆಗೂ ತೊಂದರೆ ಕೊಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಲಾಗಿದ್ದು, ಫೆನ್ಸಿಂಗ್ ಅಳವಡಿಕೆ ಕಾರ್ಯ ಬಾಕಿ ಇರುವೆಡೆ ಅನುದಾನ ಬಿಡುಗಡೆಗೊಳಿಸಿ ಟೆಂಡರ್ ಸಹ ಕರೆಯಲಾಗಿದೆ. ಶೀಘ್ರವಾಗಿ ಸೋಲಾರ್ ಫೆನ್ಸಿಂಗ್ ಅಳವಡಿಸಿ ಕಾಡಾನೆಗಳಿಂದ ರೈತರ ಬೆಳೆಗಳು ಹಾನಿಯಾಗುವುದನ್ನು ತಪ್ಪಿಸಲಾಗುತ್ತದೆ ಎಂದರು.

೨೬೬ ಗ್ರಾಮಗಳಲ್ಲಿ ಜೆಜೆಎಂ ಮೂಲಕ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ೧೮೦ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ೪೨ ಗ್ರಾಮಗಳು ಟೆಂಡರ್ ನಲ್ಲಿವೆ. ಭಾವರಹಳ್ಳಿ, ಅಬ್ಬಿಗಿರಿಹೊಸಹಳ್ಳಿ ಮತ್ತು ಚಿಕ್ಕ ಹೊಸಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸ ಬೋರ್ ವೆಲ್‌ಗಳನ್ನು ಕೊರೆಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದರು.

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸಹಕಾರಿಯಾಗುವ ಇಲಾಖೆಗಳಾಗಿದ್ದು, ಕುಪ್ಪನಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಫಾರಂ ಬಳಿ ಉಳಿದಿರುವ ೩ ಎಕರೆ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಸರ್ಕಾರಕ್ಕೆ ವಾಪಸ್ಸು ನೀಡಲು ಪ್ರಸ್ತಾವನೆ ಮಾಡಲಾಗುತ್ತದೆ. ರೇಷ್ಮೆ ಇಲಾಖೆಗೆ ಸಂಬಂಧಿಸಿದ ೩ ಎಕರೆ ಪ್ರದೇಶದಲ್ಲಿನ ಹಳೆ ಕಟ್ಟಡಗಳ ಸ್ಥಳದಲ್ಲಿ ರೇಷ್ಮೆ ಕಚೇರಿ ಮತ್ತು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ರೈತರಿಗೆ ತರಬೇತಿ ನೀಡಲು ಕಟ್ಟಡವನ್ನು ನಿರ್ಮಿಸಲು ಕೆಡಿಪಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ತಹಸೀಲ್ದಾರ್ ವೆಂಕಟೇಶಪ್ಪ, ತಾಪಂ ಇಒ ರವಿಕುಮಾರ್, ತೋಟಗಾರಿಕೆ ಎಡಿ ಶಿವಾರೆಡ್ಡಿ, ಕೃಷಿ ಇಲಾಖೆ ಎಡಿ ಪ್ರತಿಭಾ, ಸಮಾಜ ಕಲ್ಯಾಣ ಇಲಾಖೆ ಎಡಿ ಅಂಜಲಿದೇವಿ, ಸಿಡಿಪಿಒ ಮುನಿರಾಜು, ಬಿ.ಇ.ಒ ಗುರುಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಹಾಜರಿದ್ದರು.