ಯಾದಗಿರಿ ರಸ್ತೆ ಸಂಚಾರ, ಜೀವಕ್ಕೇ ಸಂಚಕಾರ!

| Published : Sep 06 2024, 01:03 AM IST

ಸಾರಾಂಶ

Yadagiri road traffic, travel for life!

- 8 ತಿಂಗಳಲ್ಲಿ 60 ಅಪಘಾತ, 15 ಜನರ ದಾರುಣ ಸಾವು । ಬೈಕ್‌ ಸವಾರರೇ ಹೆಚ್ಚು ಬಲಿಪಶು । ದುರಸ್ತಿಯಾಗದ ಹದಗೆಟ್ಟ ರಸ್ತೆ: ನಾಗರಿಕರ ಶಾಪ

--------

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ರಸ್ತೆ ಸಂಚಾರ ಜೀವಕ್ಕೇ ಸಂಚಕಾರ ಅನ್ನೋ ಆತಂಕ ಮೂಡಿಸಿದೆ. ಅದರಲ್ಲೂ, ಜಿಲ್ಲಾ ಕೇಂದ್ರ ಯಾದಗಿರಿ ನಗರದಲ್ಲಿ ರಸ್ತೆಗಳಂತೂ ತೆಗ್ಗುದಿನ್ನೆಗಳಿಂದ ಕೂಡಿ, ಹದಗೆಟ್ಟು ಹೋಗಿವೆ. ದಿನೇ ದಿನೇ ಇಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಹದಗೆಟ್ಟ ರಸ್ತೆಗಳೇ ಪ್ರಮುಖ ಕಾರಣ ಅನ್ನೋದೂ ಸುಳ್ಳಲ್ಲ. ಇವು ರಾಜ್ಯ ಹೆದ್ದಾರಿ-15 ರಾಷ್ಟ್ರೀಯ ಹೆದ್ದಾರಿ-150 ಅನ್ನೋದು ನಮ್ಮ ದೌರ್ಭಾಗ್ಯ.

ನಗರವೊಂದರಲ್ಲೇ ಇದೇ ವರ್ಷದ ಜನವರಿ ಆರಂಭದಿಂದ ಇಲ್ಲಿವರೆಗೆ (ಆ.31) 60 ಅಪಘಾತ ಪ್ರಕರಣ ವರದಿಯಾಗಿದ್ದು, 15 ಜನರು ದಾರುಣ ಸಾವು ಕಂಡಿದ್ದಾರೆ. 300ಕ್ಕೂ ಹೆಚ್ಚು ಜನರು ಭಾರಿ ಹಾಗೂ ಸಣ್ಣ ಪುಟ್ಟ ಗಾಯಗಳಿಂದ ನರಳಿದ್ದಾರೆ. ಕೆಲವರು ಕಲಬುರಗಿ ಹಾಗೂ ರಾಯಚೂರು ಆಸ್ಪತ್ರೆಗಳಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ 70 ಪ್ರಕರಣಗಳು ನಡೆದಿದ್ದರೆ, ಈ ವರ್ಷ ಎಂಟೇ ತಿಂಗಳಲ್ಲಿ 60 ಪ್ರಕರಣಗಳು ವರದಿಯಾಗಿವೆ. ಕೆಲವೊಂದು ಪ್ರಕರಣಗಳು ವರದಿಯಾಗದೆ, ಆಸ್ಪತ್ರೆಯಲ್ಲೇ ಅಂತ್ಯ ಕಂಡಿವೆ.

ಯಾದಗಿರಿ ನಗರದ ರಸ್ತೆಗಳಲ್ಲಿ ಸಂಚರಿಸಿದರೆ ಮತ್ತೆ ವಾಪಸ್‌ ಮನೆಗಳಿಗೆ ಮರುಳುವ ವಿಶ್ವಾಸ ಇಲ್ಲಿನವರಿಗಿಲ್ಲ. ಅಂಗೈಲಿ ಜೀವ ಹಿಡಿದುಕೊಂಡೇ ಬದುಕು ಸಾಗಿಸುವ ಅನಿವಾರ್ಯತೆ. ಪ್ರಮುಖ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಗಳಷ್ಟು ಆಳವಾದ ಈ ತೆಗ್ಗುದಿನ್ನೆಗಳು ಜನರ ಬಲಿ ಪಡೆಯಲು ಹಾತೊರೆಯುವಂತೆ ಕಾಣುತ್ತವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ಬಿದ್ದ ಅನೇಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ರೈಲ್ವೆ ಇಲಾಖೆಯ ಸಿಗ್ನಲ್‌ ಇನ್ಸಪೆಕ್ಟರ್‌ವೊಬ್ಬರು ಇಂತಹುದ್ದೇ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬಿದ್ದು, ಕಳೆದ ಮೂರು ತಿಂಗಳುಗಳಿಂದ ಕೋಮಾಕ್ಕೆ ಜಾರಿದ್ದಾರೆ. ಮುದುವೆಯಾಗಿ ಮೂರೇ ತಿಂಗಳಲ್ಲಿ ಇವರ ದುಸ್ಥಿತಿ ಕುಟುಂಬದ ಕಣ್ಣೀರಿಗೆ ಕಾರಣವಾಗಿದೆ.

.....ಬಾಕ್ಸ್‌:1....

ಸಮೀಕ್ಷೆಯೊಂದರ ಪ್ರಕಾರ, ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿನ ಲೆಕ್ಕಾಚಾರ ಮಾಡಿದರೆ 319ಕ್ಕೂ ಹೆಚ್ಚು ದೊಡ್ಡದಾದ ತೆಗ್ಗುಗಳು ಇಲ್ಲಿನ ಜನರಿಗೆ ಯಮಕಂಟಕವಾಗಿ ಪರಿಣಮಿಸುತ್ತಿವೆ. ಊರೆಲ್ಲ ತಿರುಗಾಡಿದರೆ 1729ಕ್ಕೂ ಹೆಚ್ಚು ತೆಗ್ಗುಗುಂಡಿಗಳು ಕಾಣ ಸಿಗುತ್ತವೆ. ಇವುಗಳನ್ನು ದುರಸ್ತಿ ಮಾಡಬೇಕಾದ ಅಥವಾ ಗುಂಡಿಗಳ ಮುಚ್ಚಿ ಅವಘಡ ತಪ್ಪಿಸಬೇಕಾದ ಇಲಾಖೆ ಗಾಢನಿದ್ರೆಯಲ್ಲಿದ್ದಂತಿದೆ. ಅಕ್ರಮ ಮರಳು ದಂಧೆಗೆ ನೀಡುವಷ್ಟು ಆದ್ಯತೆ ಈ ಇಲಾಖೆಯ ಅಧಿಕಾರಿಗಳು ರಸ್ತೆ-ಗುಂಡಿಗಳ ಮುಚ್ಚಲು ತೋರುತ್ತಿಲ್ಲರುವುದು ಯಾದಗಿರಿಗರ ದುರದೃಷ್ಟ. ಇನ್ನು, ಐಷಾರಾಮಿ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಸರ್ಕಾರಿ ಅಥವಾ ಸರ್ಕಾರದ ವೆಚ್ಚದಲ್ಲಿ ತಮ್ಮದೇ ಖಾಸಗಿ ವಾಹನಗಳಲ್ಲಿ ಇವೇ ರಸ್ತೆಯ ಮೇಲೆ ತಿರುಗಾಡುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ಗಣ್ಯರಿಗೆ ಇದರ ಅರಿವಾಗದು ಅಂತಾರೆ ಜನರು.

-----

......ಬಾಕ್ಸ್‌:2.....

ಎಲ್ಲಿ ನೋಡಿದರೂ ತೆಗ್ಗುಗುಂಡಿಗಳದ್ದೇ ಸಾಮ್ರಾಜ್ಯ !

ವಡಗೇರಾ ಕ್ರಾಸ್‌, ಭೀಮಾ ಸೇತುವೆ, ರೈಲ್ವೆ ಓವರ್‌ ಬ್ರಿಡ್ಜ್‌, ಹಳೆ ಬಸ್‌ ನಿಲ್ದಾಣ ರಸ್ತೆ, ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ ವೃತ್ತದ ರಸ್ತೆ, ಹೊಸ ಬಸ್‌ ನಿಲ್ದಾಣ ಮಾರ್ಗ, ಎಲ್‌ಐಸಿ ಕಚೇರಿಯೆದುರಿನ ರಸ್ತೆ, ಹೊಸಳ್ಳಿ ಕ್ರಾಸ್‌, ಲುಂಬಿನಿ ಉದ್ಯಾನವನ, ಡಾ. ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಸಾಗುವ ಲುಂಬಿನಿಕ ಕೆರೆಯ ರಸ್ತೆ, ಗಂಜ್‌ ಕ್ರಾಸ್‌, ಮೈಲಾಪುರ ಬೇಸ್‌, ಚಕ್ಕರಕಟ್ಟಾ, ಚಿತ್ತಾಪುರ ರಸ್ತೆ, ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳುವ ಮಾರ್ಗ, ಡಾನ್‌ ಬಾಸ್ಕೋ ಶಾಲೆ ಸಮೀಪದ ಬೈಪಾಸ್‌ ರಸ್ತೆ, ಯಾದಗಿರಿ ರೈಲು ನಿಲ್ದಾಣ ಸಮೀಪ ರಸ್ತೆ, ಸಣ್ಣ ಕೆರೆಯ ಸಮೀಪದ ಚರ್ಚ್‌ ರಸ್ತೆ ಹೀಗೆಯೇ ಪಟ್ಟಿ ಮಾಡುತ್ತ ಸಾಗಿದರೆ ಯಾದಗಿರಿಯಲ್ಲಿ ರಸ್ತೆಗಳಿಂತ ಹೆಚ್ಚಾಗಿ ತೆಗ್ಗು ಗುಂಡಿಗಳೇ ಕಾಣುತ್ತವೆ.------------

ಇನ್ನು, ಹಳೆಯ ಜಿಲ್ಲಾಸ್ಪತ್ರೆ (ಈಗ ಹೆರಿಗೆ ಆಸ್ಪತ್ರೆ)ಗೆ ಸಾಗುವ ರಸ್ತೆಯಂತೂ ಮೂರ್ನಾಲ್ಕು ಅಡಿಗಳಷ್ಟು ತೆಗ್ಗು ಬಿದ್ದು, ಗರ್ಭಿಣಿ ಬಾಣಂತಿಯರನ್ನು ದೇವರೇ ರಕ್ಷಿಸಬೇಕಿದೆ. ಯಾದಗಿರಿ ರಸ್ತೆಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಸಚಿವ ದರ್ಶನಾಪುರ ಭೇಟಿ ನೀಡಿದ್ದರಿಂದ, ಭೀಮಾ ಸೇತುವೆ-ವಡಗೇರಾ ಕ್ರಾಸ್‌ ರಸ್ತೆಗೆ ಮಣ್ಣು ಹಾಕಿ ತೇಪೆ ಸಾರಿಸಲಾಗುತ್ತಿದೆ. ಮತ್ತೆ ಮಳೆ ಸುರಿದರೆ ಲಕ್ಷಾಂತರ ರು.ಗಳ ಹಣ ನೀರಲ್ಲಿ ಹೋಮ ಮಾಡಿದಂತೆ. ಜಿಲ್ಲಾ ನ್ಯಾಯಾಲಯದ ಎದುರಿನ ಹದಗೆಟ್ಟ ರಸ್ತೆ ರಿಪೇರಿ ಮಾಡುವಂತೆ ಅನೇಕ ಬಾರಿ ಹೇಳಿದರೂ ಕೇಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದ ನ್ಯಾಯಾಧೀಶರೊಬ್ಬರು ತಾವೇ ಖುದ್ದಾಗಿ ಎದುರು ನಿಂತು ರಸ್ತೆ ದುರಸ್ತಿ ಮಾಡಿದ್ದೂ ಇಲ್ಲಿದೆ.

------

.....ಕೋಟ್‌.......

ಇತ್ತೀಚೆಗೆ ಸುರಿದ ಮಳೆ ಭಾರಿ ಅವಘಡಗಳ ಸೃಷ್ಟಿಸಿದೆ. ವಡಗೇರಾ ಕ್ರಾಸ್‌ನಿಂದ ಯಾದಗಿರಿಯ ಭೀಮಾ ಸೇತುವೆ ಮೂಲಕ ನಗರದೊಳಗೆ ಬಂದರೆ ಪುರ್ನಜನ್ಮ ದೊರೆತಂತೆ ಅನ್ನೋ ಅನುಭವವಾಗುತ್ತದೆ. ಸಾರ್ವಜನಿಕರೇ ಚಂದಾ (ದೇಣಿಗೆ) ಎತ್ತಿ ಹಣ ಸಂಗ್ರಹಿಸಿ, ದುರಸ್ತಿ ಮಾಡಿಸುವ ದುಸ್ಥಿತಿ ಬಂದೊದಗಿದೆಯೇನೋ.

-ಬಸವರಾಜ್‌ ಮಹಾಮನಿ, ಅಂತಾರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ, ಯಾದಗಿರಿ.

------

5ವೈಡಿಆರ್20 ರಿಂದ 5ವೈಡಿಆರ್‌25 : ಯಾದಗಿರಿ ನಗರದ ಹದಗೆಟ್ಟ ರಸ್ತೆಗಳ ಚಿತ್ರಣ.