ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲೊಂದಾದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಂದ 73,859 ಮತಗಳ ಲೀಡ್ ದೊರಕಿದೆ.
ಕೊಡಗಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟಿರುವುದು ಕಂಡುಬಂದಿದೆ. ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಅವರಿಗೆ 208,206 ಮತಗಳು ಹಾಗೂ ಕಾಂಗ್ರೆಸ್ ನ ಎಂ. ಲಕ್ಷ್ಮಣ್ ಅವರಿಗೆ 1,34,347 ಮತಗಳು ದೊರಕಿವೆ.ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ಯದುವೀರ್ ಒಡೆಯರ್ 7,95,503 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ್ 6,56,241 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್ ನ ಎಂ. ಲಕ್ಷ್ಮಣ್ ಅವರ ವಿರುದ್ಧ 1,39,262 ಮತಗಳ ಭಾರಿ ಅಂತರದಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಡೆಯರ್ ಗೆಲವು ಸಾಧಿಸಿದ್ದು, ಇದರಲ್ಲಿ ಕೊಡಗು ಜಿಲ್ಲೆಯ ಮತದಾರರ ಪಾಲು ಅಧಿಕವಾಗಿದೆ. ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮೈಸೂರು ಜಿಲ್ಲೆಯಿಂದ ಯದುವೀರ್‌ಗೆ 65,403 ಮತಗಳ ಲೀಡ್ ದೊರಕಿದೆ.ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್ 1,08,402, ಲಕ್ಷ್ಮಣ್ 66,994 ಮತಗಳನ್ನು ಗಳಿಸಿ ಬಿಜೆಪಿಗೆ 41,408 ಮತಗಳ ಅಂತರ ಕಂಡುಬಂದಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್ 99,804 ಮತಗಳು, ಲಕ್ಷ್ಮಣ್ 67,353 ಮತಗಳನ್ನು ಗಳಿಸಿದ್ದಾರೆ. 32,451 ಮತಗಳ ಅಂತರ ಕಂಡುಬಂದಿದೆ.
2019ರಲ್ಲಿ ನಡೆದ ಚುನಾವಣೆಯಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಸುಮಾರು 85,473 ಲೀಡ್ ಮತಗಳನ್ನು ಗಳಿಸಿದ್ದರು. ಈ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಮತಗಳ ಅಂತರದಲ್ಲಿ ಈ ಬಾರಿ ಬಿಜೆಪಿಗೆ ಕೊಡಗಿನಲ್ಲಿ 11,614 ಸಾವಿರ ಮತಗಳು ಕಡಿಮೆಯಾಗಿವೆ.2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ ಸಿಂಹ ಮಡಿಕೇರಿ ಕ್ಷೇತ್ರದಲ್ಲಿ 43,976 ಹಾಗೂ ವಿರಾಜಪೇಟೆಯಲ್ಲಿ 41,497 ಮತ ಗಳಿಸಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಕೂಟದ ಅಭ್ಯರ್ಥಿ ವಿಜಯಶಂಕರ್ ವಿರುದ್ಧ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದರು. ವಿಜಯಶಂಕರ್ ಮಡಿಕೇರಿ ಕ್ಷೇತ್ರದಲ್ಲಿ 58,185 ಹಾಗೂ ವಿರಾಜಪೇಟೆಯಲ್ಲಿ 54,738 ಮತ ಗಳಿಸಿ ಎರಡೂ ಕ್ಷೇತ್ರಗಳಲ್ಲಿ ಒಟ್ಟು 1,12,923 ಮತಗಳನ್ನು ಪಡೆದಿದ್ದರು. ಪ್ರತಾಪ ಸಿಂಹ ಎರಡೂ ಕ್ಷೇತ್ರಗಳಲ್ಲಿ 1,98,396 ಮತಗಳನ್ನು ಗಳಿಸಿದ್ದರು.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಇಬ್ಬರೂ ಕಾಂಗ್ರೆಸ್ ಪಕ್ಷದ ಶಾಸಕರು ಸುಮಾರು 2 ದಶಕಗಳ ಬಳಿಕ ಗೆದ್ದಿದ್ದಾರೆ. ಇಬ್ಬರು ಯುವ ಶಾಸಕರು ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ತಂದುಕೊಡುತ್ತಾರೆಂದು ಹೇಳಲಾಗುತ್ತಿತ್ತು. ಆದರೆ ಬಿಜೆಪಿಗೆ ಅಧಿಕ ಮತಗಳನ್ನು ನೀಡುವ ಮೂಲಕ ವಿಧಾನಸಭಾ ಚುನಾವಣೆಯೇ ಬೇರೆ ಲೋಕಸಭಾ ಚುನಾವಣೆ ಬೇರೆ ಎಂದು ಕೊಡಗಿನ ಮತದಾರರು ಸಾಬೀತು ಮಾಡಿದ್ದಾರೆ. ...........ದೇಶದಲ್ಲಿ ಬಿಜೆಪಿಗೆ ಸ್ಥಾನಗಳು ಸ್ವಲ್ಪ ಕಡಿಮೆಯಾಗಿವೆ. ಆದರೂ ಅತ್ಯಧಿಕ ಮತ ಪಡೆದ ದೊಡ್ಡ ಪಕ್ಷ ಬಿಜೆಪಿ. ಯುಪಿ, ಪಶ್ಚಿಮ ಬಂಗಾಲ, ಮಹಾರಾಷ್ಟ್ರದಲ್ಲಿ ಪಕ್ಷಕ್ಕೆಪೆಟ್ಟು ಬಿದ್ದಿದೆ. ಬಿಜೆಪಿಗೆ ಮಡಿಕೇರಿ ಕ್ಷೇತ್ರದಲ್ಲಿ 2 ಸಾವಿರ ಹಾಗೂ ವಿರಾಜಪೇಟೆಯಲ್ಲಿ 9 ಸಾವಿರ ಮತಗಳ ಅಂತರ ಕಂಡು ಬಂದಿದೆ. ಕೊಡಗಿನಲ್ಲಿ ಇಬ್ಬರೂ ಕಾಂಗ್ರೆಸ್ ಶಾಸಕರು ಗೆದ್ದಿದ್ದರೂ ಕೂಡ ಅವರನ್ನು ಜನ ತಿರಸ್ಕಾರ ಮಾಡಿದ್ದಾರೆ. ಈ ಬಾರಿಯೂ ಸರ್ಕಾರ ನಮ್ಮದೇ ಬರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ.
-ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಶಾಸಕ...............
ಕೊಡಗು - ಮೈಸೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದ್ದು, ಬಿಜೆಪಿಯನ್ನು ಅಧಿಕ ಮತಗಳ ಅಂತರದಿಂದ ಮತದಾರರು ಗೆಲ್ಲಿಸಿದ್ದಾರೆ. ಕೇಂದ್ರದಲ್ಲಿ ಸಮಾಧಾನವಾಗುವಷ್ಟು ಫಲಿತಾಂಶ ಬಂದಿಲ್ಲ. ಬಿಜೆಪಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.-ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ