ಕಳಚಿತು ಪರಂಪರೆಯ ಯಕ್ಷಗಾನ ಹಾಸ್ಯ ಕೊಂಡಿ: ಹೃದಯಾಘಾತದಿಂದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

| Published : Oct 22 2024, 12:22 AM IST / Updated: Oct 22 2024, 12:23 AM IST

ಕಳಚಿತು ಪರಂಪರೆಯ ಯಕ್ಷಗಾನ ಹಾಸ್ಯ ಕೊಂಡಿ: ಹೃದಯಾಘಾತದಿಂದ ಬಂಟ್ವಾಳ ಜಯರಾಮ ಆಚಾರ್ಯ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕು ತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಶ್ಯಾಮಲ, ಮಕ್ಕಳಾದ ವರ್ಷ ಮತ್ತು ತರುಣ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತೆಂಕು ತಿಟ್ಟು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ ಶ್ಯಾಮಲ, ಮಕ್ಕಳಾದ ವರ್ಷ ಮತ್ತು ತರುಣ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇದರೊಂದಿಗೆ ಸುಮಾರು ಐದು ದಶಕಗಳ ಕಾಲ ಯಶಸ್ವಿ ತಿರುಗಾಟ ನಡೆಸಿದ ಪರಂಪರೆಯ ಹಾಸ್ಯದ ಕೊಂಡಿ ಕಳಚಿದಂತಾಗಿದೆ.

ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ಪುತ್ತೂರು ಪ್ರವಾಸಿ ಯಕ್ಷಗಾನ ಮೇಳದಲ್ಲಿ ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಅವರು ಬೆಂಗಳೂರಿಗೆ ತೆರಳಿದ್ದರು. ಬೆಳಗ್ಗಿನ ಜಾವ ೪ ಗಂಟೆಯ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು, ಸಹಕಲಾವಿದರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಸಾವು ಸಂಭವಿಸಿತು.

ಆಸ್ಪತ್ರೆಯಿಂದ ಮೃತದೇಹವನ್ನು ಬೆಂಗಳೂರಿನ ಕಲಾ ಪೋಷಕ ಆರ್.ಕೆ ಭಟ್ಟರ ಮನೆಗೆ ಕರೆದೊಯ್ದು ಬಳಿಕ ಆಂಬುಲೆನ್ಸ್ ಮೂಲಕ ಬಂಟ್ವಾಳದ ಮನೆಗೆ ತರಲಾಯಿತು. ಅಪರಾಹ್ನ ಬಂಟ್ವಾಳರ ಮನೆಯಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಬಳಿಕ ಅಂತ್ಯ ಸಂಸ್ಕಾರ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌, ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಯಕ್ಷರಂಗದ ಹಿರಿಯ ಕಿರಿಯ ಕಲಾಭಿಮಾನಿಗಳು ಮೇಳಗಳ ಯಜಮಾನರು, ಉಡುಪಿ ಯಕ್ಷಗಾನ ಕಲಾ ರಂಗ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ, ಯಕ್ಷಧ್ರುವ ಫೌಂಡೇಶನ್‌ ಬಂಟ್ವಾಲ ಘಟಕ ಜಯರಾಮ ಆಚಾರ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದೆ.

ಬಂಟ್ವಾಳರ ಕಲಾ ಪಯಣ:ಬಂಟ್ವಾಳದಲ್ಲಿ 1957 ಅ. 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಪುತ್ರನಾಗಿ ಜನಿಸಿದ ಜಯರಾಮ ಆಚಾರ್ಯ, ಬಂಟ್ವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿದರು. ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ ‘ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು. ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಸೇರಿದಂತೆ ಸುಮಾರು 50 ವರ್ಷಗಳ ಕಾಲ ವ್ಯಾವಸಾಯಿಕ ಕಲಾವಿದರಾಗಿ ದುಡಿದಿದ್ದಾರೆ.

ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಪಾತ್ರವಲ್ಲದೆ, ಅಗತ್ಯ ಬಿದ್ದ ಸಂದರ್ಭದಲ್ಲಿ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ. ಕಳೆದ ಸಾಲಿನ ವರೆಗೂ ಅವರು ಪ್ರಸಿದ್ಧ ಹನುಮಗಿರಿ ಮೇಳದ ಹಾಸ್ಯಗಾರರಾಗಿ ತಿರುಗಾಟ ನಡೆಸಿದ್ದರು.

ಶುದ್ಧ ಹಾಸ್ಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಜಯರಾಮ ಆಚಾರ್ಯ ಕೆಲ ಸಿನಿಮಾಗಳಲ್ಲಿಯೂ ಗಮನೀಯ ಪಾತ್ರ ನಿರ್ವಹಿಸಿದವರು. ವಿಜಯ, ಮಕರಂದ, ದಾರುಕ, ಬಾಹುಕ, ರಕ್ಕಸ, ದೂತ, ನಾರದ, ಮಾಲಿಂಗ, ವೃದ್ಧ ಬ್ರಾಹ್ಮಣ, ಪಾಪಣ್ಣ, ತ್ರಿಪುರ ಮಥನದ ಭಾಗವತ, ಬಿಲ್ಲಹಬ್ಬದ ಜಗಜಟ್ಟಿ, ನಳದಮಯಂತಿಯ ಬಾಹುಕ, ದೇವಿಮಹಾತ್ಮೆಯ ಮಾಲಿನಿದೂತ, ಪಾತ್ರಿ, ಪುರೋಹಿತ ಸಹಿತ ಅನೇಕ ವಿಶಿಷ್ಟ ಪಾತ್ರಗಳಿಂದ ಅವರು ಹೆಸರುವಾಸಿ. ತುಳು ಯಕ್ಷಗಾನ ಪ್ರಸಂಗಗಳಲ್ಲೂ ತನ್ನ ವಿಶಿಷ್ಟ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದರು. . ಅನೇಕ ಬಾರಿ ವಿದೇಶದಲ್ಲೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದ ಇವರು ನಾಟಕಗಳಲ್ಲಿಯೂ ಹಾಸ್ಯ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರ ಮನಗೆದ್ದವರು.

ರುಚಿಶುದ್ಧಿ ಹಾಸ್ಯಪ್ರಜ್ಞೆಯ ಬಂಟ್ವಾಳರು ಕಡಿಮೆ ಮಾತುಗಳಲ್ಲಿ ಪೌರಾಣಿಕ ಹಾಸ್ಯ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲ ಮೇರು ಹಾಸ್ಯ ಕಲಾವಿದರಾಗಿ ಮಾನ್ಯತೆ ಗಳಿಸಿದ್ದರು. ಆಚಾರ್ಯರು ಮದ್ದಲೆ ವಾದನವನ್ನು ಬಲ್ಲವರಾಗಿದ್ದರು. ೨೦೧೮ರಲ್ಲಿ ಉಡುಪಿಯ ಯಕ್ಷಕಲಾ ರಂಗ ಸಂಸ್ಥೆ ಅವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ'''''''' ನೀಡಿ ಗೌರವಿಸಿದೆ. ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿಶ್ವಕರ್ಮ ಸಂಘಗಳ ಪ್ರಶಸ್ತಿ, ವಿಟ್ಲ ಜೋಶಿ ಪ್ರತಿಷ್ಠಾನ ಪುರಸ್ಕಾರ, ಬೆಂಗಳೂರಿನ 4 ಸಂಸ್ಥೆಗಳಿಂದ ಗೌರವ, ದುಬೈ ಕನ್ನಡ ಸಂಘದ ಶ್ರೀ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿದ್ದರು....................ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸಲೇಬೇಕು. ಇದು ಅಷ್ಟೊಂದು ಸುಲಭವಲ್ಲ. ಪಾತ್ರದ ಸ್ವಭಾವ, ಪ್ರಸಂಗಜ್ಞಾನ ತಿಳಿದವನಿಗೆ ಮಾತ್ರ ಸಾಧ್ಯ. ಆಲಸಿಯಾಗದೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಚುರುಕಾಗಿದ್ದವನಿಗೆ ಮಾತ್ರ ಸಾಧ್ಯ. ವೇಗವಾಗಿ, ವೈವಿಧ್ಯಮಯವಾಗಿ, ಪಾತ್ರೋಚಿತವಾಗಿ ಬಣ್ಣ ಹಾಕಿ, ವೇಷ ಮಾಡಿಕೊಂಡು ರಂಗಪ್ರವೇಶ ಮಾಡುವ ಕಲೆಯೂ ಅವನಿಗೆ ಕರಗತವಾಗಿರಬೇಕು. ಹೀಗೆ ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಅನೇಕರು. ಅವರಲ್ಲೊಬ್ಬರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.

-ವಳಕುಂಜ ರವಿಶಂಕರ ಭಟ್‌, ಕಟೀಲು ಮೇಳದ ಹಿರಿಯ ಹಾಸ್ಯಗಾರ.