ಯಲಬುರ್ಗಾ ಪಪಂ ₹೩5 ಕೋಟಿಯ ಬಜೆಟ್ ಮಂಡನೆ

| Published : Mar 16 2024, 01:49 AM IST

ಸಾರಾಂಶ

ಯಲಬುರ್ಗಾ ಪಟ್ಟಣ ಪಂಚಾಯಿತಿ 2024-25ನೇ ಸಾಲಿಗೆ ಒಟ್ಟು ₹೩೪.೫೮ ಕೋಟಿಗಳ ಬಜೆಟ್ ಮಂಡನೆ ಮಾಡಲಾಗಿದೆ. ಪಟ್ಟಣದ ೧೫ ವಾರ್ಡುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಹೇಳಿದರು.

ಯಲಬುರ್ಗಾ: ಪಟ್ಟಣದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ೨೦೨೪-೨೫ನೇ ಸಾಲಿಗೆ ಒಟ್ಟು ₹೩೪.೫೮ ಕೋಟಿಗಳ ಬಜೆಟ್ ಮಂಡನೆ ಮಾಡಲಾಗಿದೆ. ₹೨.೯೮ ಲಕ್ಷ ಉಳಿತಾಯದ ನಿರೀಕ್ಷೆ ಮಾಡಲಾಗಿದೆ ಎಂದು ಪಪಂ ಆಡಳಿತಾಧಿಕಾರಿ, ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಹೇಳಿದರು.

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ೨೦೨೪-೨೫ನೇ ಸಾಲಿನ ವಾರ್ಷಿಕ ಆಯವ್ಯಯ ಮಂಡಿಸುವ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪಟ್ಟಣದ ೧೫ ವಾರ್ಡುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಸ್ಥಳೀಯವಾಗಿ ಬರುವ ನೀರಿನ ಕರ, ಕಟ್ಟಡಗಳ ತೆರಿಗೆ, ಆಸ್ತಿ ತೆರಿಗೆ ಸೇರಿದಂತೆ ಎಲ್ಲ ರೀತಿಯ ತೆರಿಗೆಯನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಸೂಲಾತಿ ಮಾಡಿದಲ್ಲಿ ಅನೇಕ ಹೊಸ ಕಾಮಗಾರಿಗಳನ್ನು ಸ್ಥಳೀಯವಾಗಿ ಮಾಡಲು ಅನುಕೂಲವಾಗುತ್ತದೆ. ಬರುವ ಆದಾಯದಿಂದ ಹಾಗೆ ಸರ್ಕಾರದಿಂದ ಬರುವಂತಹ ಎಲ್ಲ ವಿಶೇಷ ಅನುಧಾನಗಳನ್ನು ಬಳಸಿಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

೨೦೨೪-೨೫ನೇ ಸಾಲಿನಲ್ಲಿ ೧೫ನೇ ಹಣಕಾಸು ಯೋಜನೆಯಲ್ಲಿ ₹೭೦ ಲಕ್ಷ ಎಸ್.ಎಫ್.ಸಿ. ಮುಕ್ತ ನಿಧಿ ಯೋಜನೆಯಲ್ಲಿ ₹೨೦ ಲಕ್ಷ ಎಸ್.ಎಫ್.ಸಿ. ಕುಡಿಯುವ ನೀರಿಗೆ ₹೧೦ ಲಕ್ಷ ವಿಶೇಷ ಯೋಜನೆಯಡ ₹೨೫ ಕೋಟಿ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ₹೭೦ ಲಕ್ಷ, ಎಸ್‌ಎಫ್‌ಸಿ ವಿದ್ಯುತ್‌ಗೆ ₹೮೫ ಲಕ್ಷ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.

ಪಪಂ ಮುಖ್ಯಾಧಿಕಾರಿ ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಆಸ್ತಿ ತೆರಿಗೆ ₹೬೫ ಲಕ್ಷ, ನೀರಿನ ತೆರಿಗೆ ₹೧೬.೪೫ ಲಕ್ಷ, ಜಾಹೀರಾತು ತೆರಿಗೆ ₹೨೦ ಸಾವಿರ, ಉದ್ದಿಮೆ ತೆರಿಗೆ ₹೨.೮೦ ಲಕ್ಷ, ಮಾರುಕಟ್ಟೆ ತೆರಿಗೆ ₹೧.೮೦ ಲಕ್ಷ, ಮಾರುಕಟ್ಟೆ ತೆರಿಗೆ ₹೧.೮೦ ಲಕ್ಷ, ವಾಣಿಜ್ಯ ಮಳಿಗೆಗೆ ₹೧೩ ಲಕ್ಷ ಕ್ರೋಡೀಕರಣ ಮಾಡಲಾಗುವುದು. ಹೀಗೆ ವಾರ್ಷಿಕವಾಗಿ ನಮ್ಮ ಗುರಿಗಳಿಗೆ ತಕ್ಕಂತೆ ವಸೂಲಾತಿಯಾದರೆ ಯಾವುದೆ ರೀತಿಯ ತೊಂದರೆ ಆಗುವುದಿಲ್ಲ. ಬೇಡಿಕೆ ಹೆಚ್ಚಾಗಿ ಆದಾಯ ಕಡಿಮೆಯಾಗುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಆದ್ದರಿಂದ ಸಾರ್ವಜನಿಕರು, ಉದ್ಯಮಿಗಳು, ವ್ಯಾಪಾರಸ್ಥರು ತೆರಿಗೆಯನ್ನು ಸರಿಯಾದ ಸಮಯಕ್ಕೆ ಕಟ್ಟಿದಲ್ಲಿ ಮತ್ತಷ್ಟು ಪಟ್ಟಣದ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಪಪಂ ನಿಕಟಪೂರ್ವ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ವಸಂತಕುಮಾರ ಭಾವಿಮನಿ, ಅಶೋಕ ಅರಕೇರಿ. ಡಾ. ನಂದಿತಾ ದಾನರಡ್ಡಿ. ಶ್ರೀದೇವಿ ಗುರುವಿನ, ಬಸಮ್ಮ ಬಣಕಾರ, ರೇವಣೆಪ್ಪ ಹಿರೇಕುರುಬರ, ಬಸವಲಿಂಗಪ್ಪ ಕೊತ್ತಲ, ರಿಯಾಜ್ ಖಾಜಿ, ಕಳಕಪ್ಪ ತಳವಾರ, ಹನುಮಂತಪ್ಪ ಭಜಂತ್ರಿ, ಲೆಕ್ಕ ಪರಿಶೋಧಕ ಚನ್ನಯ್ಯ ಸಂಕಿನಮಠ ಹಾಗೂ ಪಪಂ ಸಿಬ್ಬಂದಿ ಇದ್ದರು.